ಕೀವ್, ಉಕ್ರೇನ್ : ರಷ್ಯಾ ಆಕ್ರಮಣದಿಂದ ಉಕ್ರೇನ್ ತತ್ತರಿಸಿದೆ. ದಿನನಿತ್ಯ ಉಕ್ರೇನ್ ಮೇಲೆ ಬಾಂಬ್‌ಗಳ ಸುರಿಮಳೆಯಾಗುತ್ತಿದೆ. ಈವರೆಗೆ 50 ಲಕ್ಷಕ್ಕೂ ಹೆಚ್ಚು ಮಂದಿ ಉಕ್ರೇನ್ ತೊರೆದಿದ್ದಾರೆ. ಫೆಬ್ರವರಿ 24ರಂದು ಯುದ್ಧ ಪ್ರಾರಂಭವಾದಾಗಿನಿಂದ 5,264 ಮಂದಿ ನಾಗರಿಕರು ಸಾವನ್ನಪ್ಪಿರುವುದಾಗಿ ಅಂದಾಜಿಸಲಾಗಿದೆ. 58 ದಿನಗಳಿಂದ ಉಕ್ರೇನ್ ಯುದ್ಧದ ಬೆಂಕಿಯಲ್ಲಿ ಬೇಯುತ್ತಿದ್ದು, ಕೀವ್ ಹೊರವಲಯದ ಉಪನಗರ ಬುಚಾದಲ್ಲಿ ಸಾಮೂಹಿಕ ಸಮಾಧಿಗಳು ಪತ್ತೆಯಾಗಿರುವುದು ಯುದ್ಧದ ತೀವ್ರತೆ ಬಿಂಬಿಸುತ್ತಿದೆ.
ಮ್ಯಾಕ್ಸರ್ ಟೆಕ್ನಾಲಜಿಸ್ ಉಪಗ್ರಹ ಈ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಮರಿಯುಪೊಲ್ ನಗರ ಹೊರವಲಯದ ಮ್ಯಾನ್‌ಹುಶ್ ಪಟ್ಟಣದಲ್ಲಿರುವ ಸ್ಮಶಾನದಿಂದ ಸ್ವಲ್ಪ ದೂರದಲ್ಲಿ 200ಕ್ಕೂ ಹೆಚ್ಚು ಸಾಮೂಹಿಕ ಸಮಾಧಿಗಳು ಪತ್ತೆಯಾಗಿದ್ದು, ರಷ್ಯಾ ಸೈನಿಕರ ಕ್ರೂರತ್ವಕ್ಕೆ ಸಾಕ್ಷಿಯನ್ನು ಒದಗಿಸುತ್ತವೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಉಕ್ರೇನ್ ಅಧಿಕಾರಿಗಳ ಪ್ರಕಾರ ರಷ್ಯಾ ಪಡೆಗಳು ಮರಿಯುಪೊಲ್‌ನ ಸುಮಾರು 9 ಸಾವಿರ ನಾಗರಿಕರನ್ನು ಕೊಂದು ನಂತರ ಮ್ಯಾನ್‌ಹುಶ್ ಪಟ್ಟಣದ ಸಮೀಪದಲ್ಲಿ ಸಾಮೂಹಿಕ ಸಮಾಧಿ ಮಾಡಿದ್ದಾರೆ. ಮರಿಯುಪೋಲ್ ಬಂದರು ನಗರವಾಗಿದ್ದು, ಅಲ್ಲಿ ನಡೆಯುತ್ತಿರುವ ನರಮೇಧವನ್ನು ಮರೆ ಮಾಚಲು ಶವಗಳನ್ನು ಸಾಮೂಹಿಕ ಸಮಾಧಿಗಳಲ್ಲಿ ಹೂಳಲಾಗಿದೆ ಎನ್ನಲಾಗಿದೆ.
ಮರಿಯುಪೋಲ್ನಲ್ಲಿ ಜನರಲ್ಲಿ ಹತ್ಯೆ ಮಾಡಿ ಮ್ಯಾನ್‌ಹುಶ್‌ನಲ್ಲಿ ಸಾಮೂಹಿಕ ಸಮಾಧಿ ಮಾಡಲಾಗುತ್ತಿದೆ. ಶವಗಳನ್ನು ಟ್ರಕ್‌ಗಳಲ್ಲಿ ತಂದು ಇಲ್ಲಿ ಸುರಿಯುತ್ತಿದ್ದು, ಸಾಮೂಹಿಕ ಸಮಾಧಿ ಮಾಡಲಾಗುತ್ತಿದೆ ಎಂದು ಮೇಯರ್ ವಾಡಿಮ್ ಬಾಯ್‌ಶೆಂಕೊ ಆರೋಪಿಸಿದ್ದಾರೆ. ಮ್ಯಾಕ್ಸರ್ ಟೆಕ್ನಾಲಜಿಸ್ ಬಿಡುಗಡೆ ಮಾಡಿರುವ ಚಿತ್ರಗಳನ್ನು ವಿಶ್ಲೇಷಣೆ ನಡೆಸಿದ್ದು, ಸಮಾಧಿಗಳು ಮಾರ್ಚ್ ಅಂತ್ಯದಲ್ಲಿ ಶುರುವಾಗಿದ್ದು, ಇತ್ತೀಚಿನ ವಾರಗಳವರೆಗೂ ಅವುಗಳ ವ್ಯಾಪ್ತಿ ವಿಸ್ತರಿಸಿದೆ ಎಂದು ಹೇಳಿದೆ.
ಮರಿಯುಪೋಲ್ ಅನ್ನು ಗೆದ್ದಿದ್ದೇವೆ ಎಂದು ರಷ್ಯಾಧ್ಯಕ್ಷ ವ್ಲಾದಿಮೀರ್ ಪುಟಿನ್ ಘೋಷಿಸಿದ ಕೆಲವೇ ಕೆಲವು ಗಂಟೆಗಳಲ್ಲಿ ಸಾಮೂಹಿಕ ಸಮಾಧಿಯ ದೃಶ್ಯಗಳು ಬಹಿರಂಗಗೊಂಡಿವೆ. ಈ ಬಗ್ಗೆ ರಷ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಓದಿ : Russia-Ukraine War : ಈವರೆಗೆ 11 ಮಿಲಿಯನ್‌ಗಿಂತಲೂ ಹೆಚ್ಚು ನಿರಾಶ್ರಿತರು ಉಕ್ರೇನ್ನಿಂದ ಪಲಾಯನ : ಯುಎನ್