ವಿಶ್ವಸಂಸ್ಥೆಯ ಉನ್ನತ ಮೂರು ಸಂಸ್ಥೆಗಳಿಗೆ ಈ ವಾರ ನಡೆದ ಚುನಾವಣೆಯಲ್ಲಿ ಸಾಕಷ್ಟು ಮತಗಳನ್ನು ಪಡೆಯಲು ರಷ್ಯಾ ವಿಫಲವಾಗಿದ್ದು, ಮೂರೂ ಚುನಾವಣೆಯಲ್ಲೂ ಪುಟಿನ್ ರಾಷ್ಟ್ರ ಸೋತಿದೆ. ರಷ್ಯಾ ಸೋಲಿಗೆ ಒಂದು ವರ್ಷದಿಂದ ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿಯೇ ಕಾರಣ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣಕ್ಕೆ ವಿರೋಧ ಪ್ರಬಲವಾಗಿರುವುದರಿಂದ ರಷ್ಯಾ ಚುನಾವಣೆಯಲ್ಲಿ ಕಡಿಮೆ ಮತಗಳನ್ನು ಪಡೆಯುವಂತಾಗಿದೆ ಎಂದು ಹೇಳಲಾಗುತ್ತಿದೆ.
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ 54 ಸದಸ್ಯರಿದ್ದರೆ, 193 ಸದಸ್ಯರಿರುವ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ರಷ್ಯಾ ವಿರುದ್ಧ ಆರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ವಿಶ್ವಸಂಸ್ಥೆಯ ಪ್ರಮುಖ ಸಂಸ್ಥೆಗಳಾದ ಯುನಿಸೆಫ್ ಕಾರ್ಯಕಾರಿ ಮಂಡಳಿ, ಮಹಿಳಾ ಸ್ಥಾನಮಾನದ ಆಯೋಗ ಹಾಗೂ ಅಪರಾಧ ತಡೆಗಟ್ಟುವಿಕೆ ಮತ್ತು ಕ್ರಿಮಿನಲ್ ಜಸ್ಟೀಸ್‌ನ ಆಯೋಗಕ್ಕೆ ಬುಧವಾರ ಚುನಾವಣೆ ನಡೆದಿದೆ.
ಯುನಿಸೆಫ್ನ ಕಾರ್ಯಕಾರಿ ಮಂಡಳಿಯ ಸದಸ್ಯತ್ವಕ್ಕೆ ನಡೆದ ಚುನಾವಣೆಯಲ್ಲಿ ರಷ್ಯಾ ಎಸ್ಟೋನಿಯಾ ವಿರುದ್ಧ ಸೋತಿದೆ. ಎಸ್ಟೋನಿಯಾ ಚುನಾವಣೆ ಗೆದ್ದು, ಸದಸ್ಯತ್ವವನ್ನು ಪಡೆದಿದೆ. ಮಹಿಳಾ ಸ್ಥಾನಮಾನದ ಆಯೋಗದ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ರೊಮೇನಿಯಾ ವಿರುದ್ಧ ರಷ್ಯಾ ಸೋಲನುಭವಿಸಿದೆ. ಅಪರಾಧ ತಡೆಗಟ್ಟುವಿಕೆ ಮತ್ತು ಕ್ರಿಮಿನಲ್ ಜಸ್ಟೀಸ್‌ನ ಆಯೋಗದ ಸದಸ್ಯತ್ವಕ್ಕಾಗಿ ನಡೆದ ರಹಸ್ಯ ಮತದಾನದಲ್ಲಿ ಅರ್ಮೇನಿಯಾ ಮತ್ತು ಜೆಕ್ ರಿಪಬ್ಲಿಕ್ ಗೆದ್ದು, ರಷ್ಯಾ ಪರಾಭವಗೊಂಡಿದೆ.
ಫೆಬ್ರುವರಿ 23ಕ್ಕೆ ಉಕ್ರೇನ್ ಮೇಲೆ ರಷ್ಯಾ ಯುದ್ಧ ಪ್ರಾರಂಭಿಸಿ ಒಂದು ವರ್ಷವಾಗಿದ್ದು, ಆ ದಿನದ ಮುನ್ನಾದಿನ ಮಾಸ್ಕೋಗೆ ಉಕ್ರೇನ್ ಮೇಲಿನ ಯುದ್ಧ ಕೊನೆಗೊಳಿಸಿ ತನ್ನೆಲ್ಲ ಪಡೆಗಳನ್ನು ಹಿಂಪಡೆಯುವಂತೆ ಕರೆ ನೀಡಲಾಗಿತ್ತು. ಈ ಬಗ್ಗೆ ಕೈಗೊಳ್ಳಲಾದ ನಿರ್ಣಯದ ಪರ ವಿಶ್ವಸಂಸ್ಥೆಯ 141 ಸದಸ್ಯ ರಾಷ್ಟ್ರಗಳು ಮತ ಚಲಾವಣೆ ಮಾಡಿದ್ದವು. ಇನ್ನು 32 ಸದಸ್ಯರು ಗೈರು ಹಾಜರಾಗಿದ್ದರು.
U.S. ರಾಯಭಾರಿ ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್ ಬುಧವಾರದ ಮತದಾನ ಮಾಡಿ ಮಾತನಾಡಿ, ಇದು ECOSOC ಸದಸ್ಯ ರಾಷ್ಟ್ರಗಳ ಸ್ಪಷ್ಟವಾದ ಸಂಕೇತವಾಗಿದೆ. ಯಾವುದೇ ದೇಶ ವಿಶ್ವಸಂಸ್ಥೆಯ ಸನ್ನದನ್ನು ಸ್ಪಷ್ಟವಾಗಿ ಉಲ್ಲಂಘಿಸಿದಾಗ, ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ರಷ್ಯಾ ಯಾವುದೇ ಸ್ಥಾನಗಳನ್ನು ಹೊಂದಿರಬಾರದು ಎಂಬ ಸದಸ್ಯರ ನಿರ್ಣಯದಂತೆ ಈ ಮತ ಚಲಾವಣೆ ನಡೆದಿದೆ ಎಂದು ಹೇಳಿದ್ದಾರೆ.
ECOSOC ಮೇಲ್ವಿಚಾರಣೆಯ 14 ಆಯೋಗಗಳು, ಮಂಡಳಿಗಳು ಮತ್ತು ಪರಿಣಿತ ಗುಂಪುಗಳ ಸದಸ್ಯರಿಗೆ ನಡೆದ ಮತದಾನದಲ್ಲಿ ರಷ್ಯಾವನ್ನು ಸಾಮಾಜಿಕ ಅಭಿವೃದ್ಧಿ ಆಯೋಗಕ್ಕೆ ಆಯ್ಕೆ ಮಾಡಲಾಯಿತು. ರಷ್ಯಾದ ಆಕ್ರಮಣವು ಅಂತಾರಾಷ್ಟ್ರೀಯ ಕಾನೂನು ಮತ್ತು ಉಕ್ರೇನ್‌ನ ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುತ್ತದೆ ಎಂದು ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ದೇಶಗಳು ಚುನಾವಣೆಯಿಂದ ಹಿಂದೆ ಸರಿದವು. ಇಂಟರ್‌ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಆಫ್ ಅಕೌಂಟಿಂಗ್ ಮತ್ತು ರಿಪೋರ್ಟಿಂಗ್‌ನ ಇಂಟರ್ ಗವರ್ನಮೆಂಟಲ್ ವರ್ಕಿಂಗ್ ಗ್ರೂಪ್ ಆಫ್ ಎಕ್ಸ್‌ಪರ್ಟ್ಸ್‌ಗೆ ಕೂಡ ರಷ್ಯಾವನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಉಕ್ರೇನ್ನೊಂದಿಗೆ ಸಂಧಾನ ಮಾಡಿಕೊಳ್ಳಲು ಮುಕ್ತ ಮಾತುಕತೆಗೆ ಸಿದ್ಧ: ಪುಟಿನ್