ಕೈವ್ (ಉಕ್ರೇನ್) : ಪೂರ್ವ ಉಕ್ರೇನ್ ನ ಎರಡು ಪ್ರಮುಖ ಮುಂಚೂಣಿ ನಗರಗಳ ಬಳಿ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿ ರಷ್ಯಾ ಪಡೆಗಳು ದಾಳಿಯನ್ನು ಹೆಚ್ಚಿಸಿವೆ ಎಂದು ಉಕ್ರೇನ್ ಮಿಲಿಟರಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಮೇ ತಿಂಗಳಲ್ಲಿ ರಷ್ಯಾದ ಪಾಲಾಗುವ ಮೊದಲು ಭೀಕರ ಯುದ್ಧ ನಡೆದಿದ್ದ ಪೂರ್ವ ಗಣಿಗಾರಿಕೆ ನಗರವಾದ ಬಖ್ಮುತ್ ಬಳಿಯ ಪ್ರದೇಶವನ್ನು ಮರಳಿ ಪಡೆಯಲು ಮಾಸ್ಕೋ ಪಡೆಗಳು ಪ್ರಯತ್ನಿಸುತ್ತಿವೆ ಎಂದು ಉಕ್ರೇನ್ ಪದಾತಿ ಪಡೆಗಳ ಮುಖ್ಯಸ್ಥರು ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಉಕ್ರೇನಿಯನ್ ಪಡೆಗಳು ಈ ಹಿಂದೆ ಬಖ್ಮುತ್ ಹತ್ತಿರದ ಎತ್ತರದ ಪ್ರದೇಶವನ್ನು ಮರುವಶ ಮಾಡಿಕೊಂಡಿವೆ ಮತ್ತು ಕೈವ್ ಬೇಸಿಗೆಯಲ್ಲಿ ತನ್ನ ಪ್ರತಿದಾಳಿ ಪ್ರಾರಂಭಿಸಿದಾಗಿನಿಂದ ನಗರದ ಪಶ್ಚಿಮ, ಉತ್ತರ ಮತ್ತು ದಕ್ಷಿಣದಲ್ಲಿ ಕೆಲಮಟ್ಟಿನ ಗೆಲುವು ಸಾಧಿಸಿವೆ. ಬಖ್ಮುತ್ ಕಡೆಗೆ ರಷ್ಯನ್ನರು ಹೆಚ್ಚು ಸಕ್ರಿಯರಾಗಿದ್ದಾರೆ ಮತ್ತು ಹಿಂದೆ ತಾವು ಕಳೆದುಕೊಂಡ ಪ್ರದೇಶಗಳನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಶತ್ರುಗಳ ದಾಳಿಯನ್ನು ಹಿಮ್ಮೆಟ್ಟಿಸಲಾಗುತ್ತಿದೆ" ಎಂದು ಕರ್ನಲ್ ಜನರಲ್ ಒಲೆಕ್ಸಾಂಡರ್ ಸಿರ್ಸ್ಕಿ ಭಾನುವಾರ ಮಧ್ಯಾಹ್ನ ಟೆಲಿಗ್ರಾಮ್ ನಲ್ಲಿ ಬರೆದಿದ್ದಾರೆ.
ಉಕ್ರೇನ್ ನ ಬಹುನಿರೀಕ್ಷಿತ ಪ್ರತಿದಾಳಿಯಲ್ಲಿ ಈವರೆಗೆ ಉಕ್ರೇನ್ಗೆ ಸಣ್ಣಮಟ್ಟದ ಯಶಸ್ಸು ಲಭಿಸಿದ್ದು, ನಷ್ಟದ ಪ್ರಮಾಣವೇ ಹೆಚ್ಚಾಗಿದೆ. ಉಕ್ರೇನಿಯನ್ ಪಡೆಗಳು ದಕ್ಷಿಣದಲ್ಲಿ ರಷ್ಯಾ ಪಡೆಗಳನ್ನು ಹಿಮ್ಮೆಟ್ಟಿಸಲು ಹೆಣಗಾಡುತ್ತಿವೆ. ಏತನ್ಮಧ್ಯೆ, ರಷ್ಯಾ ಪಡೆಗಳು ಈಶಾನ್ಯದಲ್ಲಿ ಮುಂದುವರಿಯಲು ಪ್ರಯತ್ನಿಸುತ್ತಿವೆ.
ಬಖ್ಮುತ್ ಬಳಿ ಈವರೆಗೆ ಕೇವಲ ರಕ್ಷಣಾತ್ಮಕವಾಗಿ ಹೋರಾಡುತ್ತಿದ್ದ ರಷ್ಯನ್ನರು ಈಗ ಪ್ರತಿರೋಧಕ್ಕೆ ಇಳಿದಿದ್ದಾರೆ. ಇದರಿಂದ ನಗರದ ದಕ್ಷಿಣದಲ್ಲಿರುವ ಉಕ್ರೇನಿಯನ್ ಪಡೆಗಳ ಮೇಲೆ ಒತ್ತಡ ಉಂಟಾಗಿದೆ ಎಂದು ವರದಿಗಳು ಹೇಳಿವೆ. ರಷ್ಯಾ ಪಡೆಗಳು ದುರ್ಬಲ ರಕ್ಷಣೆಯನ್ನು ಹೊಂದಿರುವ ಉಕ್ರೇನ್ ನ ಸ್ಥಳಗಳನ್ನು ಹುಡುಕುತ್ತಿವೆ ಮತ್ತು ಉಕ್ರೇನ್ ನೆಲೆಗಳ ಮೇಲೆ ಟ್ಯಾಂಕ್ ದಾಳಿಗಳನ್ನು ಹೆಚ್ಚಿಸುತ್ತಿವೆ ಎಂದು ವರದಿಗಳು ತಿಳಿಸಿವೆ.
ಯುದ್ಧದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ ಅವ್ಡಿವ್ಕಾ ಮತ್ತು ಸುತ್ತಮುತ್ತಲೂ ಹೋರಾಡುತ್ತಿರುವ ಉಕ್ರೇನ್ ಪಡೆಗಳ ನೇತೃತ್ವ ವಹಿಸಿರುವ ಜನರಲ್ ಒಲೆಕ್ಸಾಂಡರ್ ತರ್ನಾವ್ಸ್ಕಿ, ರಷ್ಯಾ ಪಡೆಗಳು ವೈಮಾನಿಕ ದಾಳಿಯನ್ನು ಹೆಚ್ಚಿಸುತ್ತಿವೆ ಮತ್ತು ವಿಶೇಷವಾಗಿ ಗೈಡೆಡ್ ಬಾಂಬ್ಗಳನ್ನು ಬಳಸುತ್ತಿವೆ ಎಂದು ಹೇಳಿದರು. ಕಳೆದ ದಿನ ರಷ್ಯಾ ಪಡೆಗಳು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 30 ವೈಮಾನಿಕ ದಾಳಿ ಮತ್ತು 712 ಫಿರಂಗಿ ಬ್ಯಾರೇಜ್ ದಾಳಿಗಳನ್ನು ನಡೆಸಿವೆ ಎಂದು ಅವರು ಟೆಲಿಗ್ರಾಮ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ : ಅಫ್ಘನ್ ನಿರಾಶ್ರಿತರಿಗೆ ವರ್ಷಾಂತ್ಯದವರೆಗೆ ದೇಶದಲ್ಲಿರಲು ಅವಕಾಶ ನೀಡಿದ ಪಾಕಿಸ್ತಾನ