ಟೆಲ್ ಅವೀವ್ (ಇಸ್ರೇಲ್) : ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಎಂಟನೇ ದಿನವೂ ಮುಂದುವರೆದಿದ್ದು, ಇಸ್ರೇಲಿನ ಟೆಲ್ ಅವೀವ್ ಮತ್ತು ಸುತ್ತಮುತ್ತಲಿನ ನಗರದಲ್ಲಿ ಹಾಗೂ ದಕ್ಷಿಣ ಕರಾವಳಿಯ ಪ್ರಮುಖ ನಗರವಾದ ಅಶ್ಡೋಡ್ನಲ್ಲಿ ರಾಕೆಟ್ ಸೈರನ್ ಮೊಳಗಿದೆ. ಶುಕ್ರವಾರ ರಾತ್ರಿ ಗಾಜಾ ಪಟ್ಟಿಯಿಂದ ಹಮಾಸ್ ಉಗ್ರರು ಮತ್ತೆ ದಾಳಿ ನಡೆಸಿದ್ದು, ರಾಕೆಟ್ ದಾಳಿಯಿಂದಾಗಿ ನಗರಗಳಲ್ಲಿ ಸೈರನ್ ಆಗಿದೆ.
ಶುಕ್ರವಾರ ನಡೆದ ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ, ತನ್ನ ದೇಶದ ನಾಗರಿಕರ ಸುರಕ್ಷತೆಗೆ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ. ಸೈರನ್ ಮೊಳಗುತ್ತಿದ್ದಂತೆ ಇಸ್ರೇಲ್ನ ನಾಗರಿಕರು ರಾಕೆಟ್ ದಾಳಿ ಆತಂಕದಿಂದ ಬಂಕರ್ಗಳಿಗೆ ತೆರಳಿ ಸಂಭಾವ್ಯ ದಾಳಿಯಿಂದ ರಕ್ಷಣೆ ಪಡೆದಿದ್ದಾರೆ. ಪುನರಾವರ್ತಿತ ರಾಕೆಟ್ ದಾಳಿಯು ಟೆಲ್ ಅವೀವ್ ಮತ್ತು ಅಶ್ಡೋಡ್ ನಗರಗಳಲ್ಲಿ ಭೀತಿಯನ್ನು ಸೃಷ್ಟಿಸಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಇಸ್ರೇಲ್ ರಕ್ಷಣಾ ಪಡೆ, ಶುಕ್ರವಾರ ಇಲ್ಲಿನ ಟೆಲ್ ಅವೀವ್ ಮತ್ತು ಗುಶ್ ಡ್ಯಾನ್ ನಗರದಲ್ಲಿ ಸೈರನ್ ಆಗಿದೆ. ಸೈರನ್ ಮೊಳಗಿದ ಕೂಡಲೇ ಜನರು ಬಾಂಬ್ ಶೆಲ್ಟರ್ಗೆ ತೆರಳಿ ರಕ್ಷಣೆ ಪಡೆದಿದ್ದಾರೆ. ಟೆಲ್ ಅವೀವ್ನಲ್ಲಿ ಸೈರನ್ ಸದ್ದು ಮುಂದುವರೆದಿದೆ ಎಂದು ಹೇಳಿತ್ತು.
ಹಮಾಸ್ ಹೋರಾಟಗಾರರ ದಾಳಿ ಸಂಬಂಧ ತನ್ನ ದೇಶದ ನಾಗರೀಕರನ್ನು ರಕ್ಷಣೆ ಮಾಡಲು ಇಸ್ರೇಲ್ ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಿದೆ. ಇದು ಹಮಾಸ್ ಉಗ್ರರ ಅನೇಕ ರಾಕೆಟ್ಗಳನ್ನು ತಡೆದಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವು ಎರಡೂ ಕಡೆಗಳಲ್ಲಿ ಸಾಕಷ್ಟು ಜೀವಹಾನಿಗೆ ಕಾರಣವಾಗಿದೆ. ಈ ಯುದ್ಧವನ್ನು ತಡೆಯಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿದೆ. ಆದರೆ ಇಸ್ರೇಲ್ ಮತ್ತು ಹಮಾಸ್ ನಡುವೆ ಶಾಂತಿ ಒಪ್ಪಂದ ಕಷ್ಟ ಸಾಧ್ಯ ಎಂದು ಹೇಳಲಾಗಿದೆ.
ಎಂಟನೇ ದಿನವೂ ಮುಂದುವರೆದ ಸಂಘರ್ಷ : ಕಳೆದ ಒಂದು ವಾರದಿಂದ ನಡೆಯುತ್ತಿರುವ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಸಂಘರ್ಷ ಶನಿವಾರ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಅಕ್ಟೋಬರ್ 7ರಂದು ಹಮಾಸ್ ಸಂಘಟನೆ ಇಸ್ರೇಲ್ ಮೇಲೆ ಏಕಾಏಕಿ ರಾಕೆಟ್ ದಾಳಿ ನಡೆಸಿತ್ತು. ಹಮಾಸ್ ಉಗ್ರರು ದಕ್ಷಿಣ ಇಸ್ರೇಲ್ ಮೇಲೆ ದಾಳಿ ನಡೆಸಿದ್ದರು. ಬಳಿಕ ಇಸ್ರೇಲ್ ಕೂಡ ಹಮಾಸ್ನ ಗಾಜಾಪಟ್ಟಿ ಮೇಲೆ ಪ್ರತಿದಾಳಿ ನಡೆಸಿತ್ತು. ಸದ್ಯ ಇಸ್ರೇಲ್ ಹಮಾಸ್ ಬಗ್ಗುಬಡಿಯಲು ಪಣತೊಟ್ಟಿದ್ದು, ಈ ಸಂಬಂಧ ಗಾಜಾ ಪಟ್ಟಿಯಲ್ಲಿರುವ ನಾಗರಿಕರು ಕೂಡಲೇ ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ಹೇಳಿದೆ. ಈ ಸಂಬಂಧ ನಾಗರಿಕರಿಗೆ ಇಸ್ರೇಲ್ ರಕ್ಷಣಾ ಪಡೆ 24 ಗಂಟೆಗಳ ಕಾಲಾವಕಾಶ ನೀಡಿತ್ತು. ಇಸ್ರೇಲ್ ಸೇನೆ ಈಗಾಗಲೇ ಗಾಜಾಪಟ್ಟಿಯ ಗಡಿ ಪ್ರದೇಶದಲ್ಲಿ ದಾಳಿ ನಡೆಸಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.
1300 ಜನ ಸಾವು, 3000ಕ್ಕೂ ಅಧಿಕ ಮಂದಿಗೆ ಗಾಯ : ಹಮಾಸ್ ಉಗ್ರರ ದಾಳಿಯಿಂದಾಗಿ ಇಸ್ರೇಲ್ನಲ್ಲಿ ಒಟ್ಟು 1300 ಜನ ಸಾವನ್ನಪ್ಪಿದ್ದು, 3000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಜೊನಾಥನ್ ಕಾನ್ರಿಕಸ್, ಹಮಾಸ್ ಭಯೋತ್ಪಾದಕರ ದಾಳಿಯಿಂದ ಸತ್ತವರ ಸಂಖ್ಯೆ 1,300ಕ್ಕೆ ಏರಿಕೆಯಾಗಿದೆ. 3000 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತದೇಹಗಳನ್ನು ಗುರುತಿಸಲು ಟೆಲ್ ಅವೀವ್ಗೆ ಕರೆತರುವ ಕಾರ್ಯ ನಡೆಯುತ್ತಿದೆ. ಬಳಿಕ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ. ಇಸ್ರೇಲ್ ಇತಿಹಾಸದಲ್ಲಿ ಇಂತಹ ಪರಿಸ್ಥಿತಿಯನ್ನು ಕಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಆಪರೇಷನ್ ಅಜಯ್ ಮೂಲಕ ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕಾರ್ಯ ನಡೆಸಲಾಗುತ್ತಿದ್ದು, ಈಗಾಗಲೇ ಒಂದು ವಿಮಾನದಲ್ಲಿ ಭಾರತೀಯರನ್ನು ಕರೆತರಲಾಗಿದೆ.
ಇದನ್ನೂ ಓದಿ : ದೆಹಲಿಯಲ್ಲಿ ಇಸ್ರೇಲ್‌ನಿಂದ ಮರಳಿದ ಕನ್ನಡಿಗರನ್ನು ಬರಮಾಡಿಕೊಂಡ ಟಿ.ಬಿ.ಜಯಚಂದ್ರ