ಇಸ್ಲಾಮಾಬಾದ್ (ಪಾಕಿಸ್ತಾನ) : ಹವೇಲಿಯನ್ನ ಲಾಂಗ್ರಾ ಗ್ರಾಮದಲ್ಲಿ ಪ್ರತಿಸ್ಪರ್ಧಿ ಗುಂಪೊಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್ (ಪಿಟಿಐ) ಪಕ್ಷದ ಮುಖಂಡರ ಮೇಲೆ ಉದ್ದೇಶಿತ ಗುಂಡಿನ ದಾಳಿ ನಡೆಸಿದೆ. ದಾಳಿಯಲ್ಲಿ ಹತರಾದ ಹತ್ತು ಜನರ ಪೈಕಿ ಸ್ಥಳೀಯ ಪಿಟಿಐ ನಾಯಕ ಅತೀಫ್ ಮುನ್ಸಿಫ್ ಖಾನ್ ಅವರನ್ನು ಸಹ ಹತ್ಯೆ ಮಾಡಲಾಗಿದೆ. ಹವೇಲಿಯನ್ ಲಾಂಗ್ರಾ ಗ್ರಾಮದ ಪ್ರತಿಸ್ಪರ್ಧಿ ಗುಂಪಿನ ಜನರು ಹೊಂಚು ಹಾಕಿ ಪೂರ್ವ ನಿಯೋಜಿತವಾಗಿ ಪಿಟಿಐ ನಾಯಕ ಅತೀಫ್ ಮುನ್ಸಿಫ್ ಖಾನ್ ಅವರನ್ನು ಹತ್ಯೆ ಮಾಡಿದೆ ಎಂದು ಪಾಕ್ ಪತ್ರಿಕೆ ಡಾನ್ ತಿಳಿಸಿದೆ.
ಪೂರ್ವ ನಿಯೋಜಿತ ದಾಳಿ : ಇನ್ನು ಈ ಘಟನೆ ನಿನ್ನೆ ತಡರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹವೇಲಿಯನ್ ತಹಸಿಲ್ ಮೇಯರ್ ಆಗಿದ್ದ ಅತೀಫ್ ಮುನ್ಸಿಫ್ ಖಾನ್ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಅಬೋಟಾಬಾದ್ ಡಿಪಿಒ ಉಮರ್ ತುಫೈಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ದಾಳಿ ನಡೆಸುವ ಮೊದಲೇ ಯೋಜನೆ ರೂಪಿಸಿದ್ದು, ಅತೀಫ್ ಮುನ್ಸಿಫ್ ಖಾನ್ ಅವರ ಮೇಲೆ ದಾಳಿ ನಡೆಸಲಾಯಿತು. ದಾಳಿಯ ವೇಳೆ ಅವರ ಕಾರಿನ ಇಂಧನ ಟ್ಯಾಂಕ್‌ಗೆ ಗುಂಡು ತಗುಲಿದ ತತ್ಕ್ಷಣ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡ ಪರಿಣಾಮ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಸ್ಫೋಟಗೊಂಡ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಪಾಕಿಸ್ತಾನದ ಆಂಗ್ಲ ಪತ್ರಿಕೆ ಡಾನ್ ಪ್ರಕಾರ, ಗಾಯಗೊಂಡ ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿನ ಪೊಲೀಸರು ನೀಡಿರುವ ಮಾಹಿತಿಯಂತೆ, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅಬೋಟಾಬಾದ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಆದರೆ, ಆರೋಪಿಗಳನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಭೀಕರ ಪೂರ್ವ ನಿಯೋಜಿತ ಈ ದಾಳಿಯನ್ನು ದೃಢೀಕರಿಸದ ಕೆಲವು ವರದಿಗಳು ದಾಳಿಯನ್ನು ಬುಲೆಟ್‌ಗಳಿಂದ ಹಾರಿಸಲಾಗಿಲ್ಲ. ಆದರೆ ರಾಕೆಟ್‌ಗಳಿಂದ ಹಾರಿಸಲಾಗಿದೆ ಎಂದು ಹೇಳಿವೆ.
ಅತೀಫ್ ಮುನ್ಸಿಫ್ ಅವರು 2022 ರ ಖೈಬರ್ ಪಖ್ತುಂಖ್ವಾ ಪ್ರದೇಶದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಬೋಟಾಬಾದ್‌ನ ಹವೇಲಿಯನ್ ತೆಹ್ಸಿಲ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದದಿದದ್ದರು. ಮತ್ತು ನಂತರ ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್ ಪಕ್ಷಕ್ಕೆ ಸೇರಿದರು. ಇವರ ತಂದೆ, ಮುನ್ಸಿಫ್ ಖಾನ್ ಜಾದೂನ್ ಅವರು ಕೂಡ ಖೈಬರ್ ಪಖ್ತುಂಖ್ವಾದ ವಿಧಾನಸಭೆಯ ಮಾಜಿ ಸದಸ್ಯರಾಗಿದ್ದು, ಪ್ರಾಂತೀಯ ಸಚಿವರೂ ಆಗಿದ್ದಾರೆ. ಅತೀಫ್ ಮುನ್ಸಿಫ್ ಅವರ ರೀತಿಯಲ್ಲೇ ಇವರು ಕೂಡ 1990ರ ದಶಕದಲ್ಲಿ ಕೊಲೆಯಾಗಿದ್ದರು. ಡಾನ್ ಪ್ರಕಾರ, ದಾಳಿ ನಡೆಯುವ ಕೆಲವು ಗಂಟೆಗಳ ಹಿಂದಷ್ಟೆ ಲಾಂಗ್ರಾ ಗ್ರಾಮದಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಟವಾಡಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ :ಒಮಾನ್ನಿಂದ ಇಸ್ಲಾಂ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಭಾರತಕ್ಕೆ ಗಡಿಪಾರು ಸಾಧ್ಯತೆ