ಯಕೆ(ಲಂಡನ್): ಬೋರಿಸ್ ಜಾನ್ಸನ್ ಅವರ ರಾಜೀನಾಮೆಯಿಂದ ತೆರವಾಗಿರುವ ಯುನೈಟೆಡ್ ಕಿಂಗ್ಡಮ್ ಪ್ರಧಾನಿ ಹುದ್ದೆಗೆ ಈಗಾಗಲೇ ಮತದಾನ ಆರಂಭಗೊಂಡಿದೆ. ಮೊದಲ ಸುತ್ತಿನಲ್ಲಿ ಮುನ್ನಡೆ ಪಡೆದುಕೊಂಡಿದ್ದ ರಿಷಿ ಸುನಕ್ ಇದೀಗ ಎರಡನೇ ಸುತ್ತಿನ ಮತದಾನದಲ್ಲೂ ಹೆಚ್ಚು ಮತ ಪಡೆದುಕೊಂಡಿದ್ದಾರೆ. ಈ ಮೂಲಕ ಪ್ರಧಾನಿ ಹುದ್ದೆಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಗುರುವಾರ ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಬ್ರಿಟನ್ ಮಾಜಿ ಹಣಕಾಸು ಸಚಿವ ರಿಷಿ ಸುನಕ್ 101 ಮತ ಪಡೆದುಕೊಳ್ಳುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಇದರ ಜೊತೆಗೆ ಪ್ರಧಾನಿ ರೇಸ್ನಲ್ಲಿ ಓರ್ವ ಅಭ್ಯರ್ಥಿ ಹೊರಬಿದ್ದಿದ್ದಾರೆ. ಎರಡನೇ ಸುತ್ತಿನಲ್ಲಿ ಪೆನ್ನಿ ಮೊರ್ಡಾಂಟ್ 83 ಮತ ಹಾಗೂ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 64 ಮತ ಪಡೆದುಕೊಂಡಿದ್ದಾರೆ. ಅಟಾರ್ನಿ ಜನರಲ್ ಸುಯೆಲ್ಲಾ 27 ಮತ ಪಡೆದು ರೇಸ್ನಿಂದ ಹೊರಬಿದ್ದಿದ್ದಾರೆ.
ನಿನ್ನೆ ನಡೆದ ಮೊದಲ ಸುತ್ತಿನ ಮತದಾನದಲ್ಲಿ ರಿಷಿ ಸುನಕ್ 88 ಮತ ಪಡೆದುಕೊಂಡು ಮುನ್ನಡೆ ಸಾಧಿಸಿದ್ದರು. ಇದೀಗ ಎರಡನೇ ಹಂತದಲ್ಲೂ ಅವರು ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಪ್ರಧಾನಿ ರೇಸ್ನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ರಿಷಿ ಸುನಕ್ ಇನ್ಪೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯರಾಗಿದ್ದಾರೆ.
ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ಕನಿಷ್ಠ 20 ಸಂಸದರ ಬೆಂಬಲ ಅಗತ್ಯವಿದ್ದು, ಅಷ್ಟು ಸಂಸದರು ಬೆಂಬಲ ಸೂಚಿಸಿದರೆ ಮೊದಲ ಸುತ್ತಿನಲ್ಲಿ ಅರ್ಹತೆ ಪಡೆಯುತ್ತಾರೆ. ಇದೀಗ ಸುನಕ್ ಅವರಿಗೆ ಬೆಂಬಲ ಸಿಕ್ಕಿರುವ ಕಾರಣ ಮುನ್ನಡೆ ಸಾಧಿಸಿದ್ದರು ಇನ್ನೂ ಎರಡನೇ ಸುತ್ತು ಪ್ರವೇಶಿಸಬೇಕಾದರೆ 30 ಸಂಸದರ ಬೆಂಬಲ ಸಿಗಬೇಕು. ಇದರಲ್ಲೂ ಕನ್ಸರ್ವೇಟಿವ್ ಪಕ್ಷದ ರಿಷಿ ಸುನಕ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸದ್ಯ ರೇಸ್ನಲ್ಲಿ ಐವರು ಮಾತ್ರ ಉಳಿದುಕೊಂಡಿದ್ದು, ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗಿ ಯಾರು ಆಯ್ಕೆಯಾಗುತ್ತಾರೆಂಬುದು ಇದೀಗ ಹೆಚ್ಚಿನ ಕುತೂಹಲ ಮೂಡಿಸಿದೆ.
ಹಲವು ಹಗರಣಗಳು, ಕೊರೊನಾ ಸಂದರ್ಭದಲ್ಲಿ ನಿಯಮ ಮೀರಿ ಸಂತೋಷಕೂಟ ಸೇರಿದಂತೆ ಅನೇಕ ಗಂಭೀರ ಪ್ರಕರಣಗಳು ಕೇಳಿ ಬಂದ ಕಾರಣ ಬೋರಿಸ್ ಜಾನ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.