ಕಾಬೂಲ್ (ಅಫ್ಘಾನಿಸ್ತಾನ) : ಕತಾರ್‌ನ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಬಿನ್ ಜಸ್ಸಿಮ್ ಅಲ್-ಥಾನಿ ಅವರು ಮೇ 12 ರಂದು ಅಫ್ಘಾನಿಸ್ತಾನದಲ್ಲಿ ಉನ್ನತ ತಾಲಿಬಾನ್ ನಾಯಕರೊಂದಿಗೆ ರಹಸ್ಯ ಸಭೆ ನಡೆಸಿದರು ಎಂದು ಸಭೆಯ ಬಗ್ಗೆ ಮಾಹಿತಿಯಿರುವ ಮೂಲಗಳನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ತಾಲಿಬಾನ್ ನಾಯಕ ಹೈಬತುಲ್ಲಾ ಅಖುಂಡ್ ಜಾದಾ ಮತ್ತು ಕತಾರ್ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಬಿನ್ ಜಸ್ಸಿಮ್ ಅಲ್-ಥಾನಿ ನಡುವಿನ ಸಭೆಯು ಮೇ 12 ರಂದು ಕಂದಹಾರ್‌ನಲ್ಲಿ ನಡೆದಿದೆ. ಸಭೆ ನಡೆದ ಬಗ್ಗೆ ಕೂಡಲೇ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯ ನಂತರ ಯುಎಸ್ ಸ್ಟೇಟ್ ಸೆಕ್ರೆಟರಿ ಆಂಟೋನಿ ಬ್ಲಿಂಕೆನ್ ಮತ್ತು ಕತಾರ್ ಪ್ರಧಾನಿ ದೂರವಾಣಿ ಸಂಭಾಷಣೆ ನಡೆಸಿದರು. ಅಫ್ಘಾನಿಸ್ತಾನಕ್ಕೆ ಕತಾರ್ ನೀಡುತ್ತಿರುವ ನಿರಂತರ ಸಹಾಯ ಸಹಕಾರಕ್ಕಾಗಿ ಅಮೆರಿಕದ ಸ್ಟೇಟ್ ಡಿಪಾರ್ಟ್ಮೆಂಟ್ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಮೇ 13ರ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರಕಟಣೆ ತಿಳಿಸಿದೆ. ತಾಲಿಬಾನ್ ಮತ್ತು ಅಂತರಾಷ್ಟ್ರೀಯ ಸಮುದಾಯದ ನಡುವಿನ ಸಂಬಂಧವನ್ನು ಸುಗಮಗೊಳಿಸುವ ಭಾಗವಾಗಿ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಬಿನ್ ಜಸ್ಸಿಮ್ ಅಲ್-ಥಾನಿ ಕಾಬೂಲ್‌ಗೆ ಭೇಟಿ ನೀಡಿದ್ದರು ಎಂದು ಕೆಲವು ದಿನಗಳ ನಂತರ ಕತಾರ್‌ನ ಮಾಧ್ಯಮಗಳು ವರದಿ ಮಾಡಿವೆ.
ಆಗಸ್ಟ್ 2021 ರಲ್ಲಿ ಅಮೇರಿಕನ್ ಪಡೆಗಳು ಅಫ್ಘಾನಿಸ್ತಾನವನ್ನು ತೊರೆದಾಗಿನಿಂದ ಅಮೆರಿಕದ ಅಧಿಕಾರಿಗಳು ಸಾಂದರ್ಭಿಕವಾಗಿ ದೋಹಾದಲ್ಲಿ ತಾಲಿಬಾನಿಗಳನ್ನು ಭೇಟಿ ಮಾಡಿದ್ದಾರೆ. ಅಮೆರಿಕ ಕಾಬೂಲ್‌ನಲ್ಲಿರುವ ತನ್ನ ರಾಜತಾಂತ್ರಿಕ ಕಚೇರಿಯನ್ನು ಮುಚ್ಚಿದ್ದು, ಇದನ್ನು ದೋಹಾಗೆ ಸ್ಥಳಾಂತರಿಸಿದೆ. ಮೇ ತಿಂಗಳಲ್ಲಿ ದೋಹಾದಲ್ಲಿ ಅಫ್ಘಾನಿಸ್ತಾನದ ಕುರಿತು ವಿಶ್ವಸಂಸ್ಥೆ ಆಯೋಜಿಸಿದ್ದ ಸಮ್ಮೇಳನಕ್ಕೆ ತಾಲಿಬಾನ್‌ಗೆ ಆಹ್ವಾನ ನೀಡಿರಲಿಲ್ಲ. ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ನೇತೃತ್ವದಲ್ಲಿ ನಡೆದ ಎರಡು ದಿನಗಳ ಮಾತುಕತೆಯಲ್ಲಿ ಸುಮಾರು 25 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಅಫ್ಘಾನಿಸ್ತಾನದಲ್ಲಿನ ಭೀಕರ ಮಾನವೀಯ ಪರಿಸ್ಥಿತಿ ಮತ್ತು ಅದರ ಅಂತರರಾಷ್ಟ್ರೀಯ ಪ್ರತ್ಯೇಕತೆಯ ಬಗ್ಗೆ ಚರ್ಚಿಸಲು ತಾಲಿಬಾನ್‌ಗಳನ್ನು ಸಭೆಗೆ ಆಹ್ವಾನಿಸಲಾಗುವುದಿಲ್ಲ ಎಂದು ಈ ಹಿಂದೆ, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಹೇಳಿದ್ದರು. ತಾಲಿಬಾನ್‌ಗೆ ಮಾನ್ಯತೆ ನೀಡುವ ಯಾವುದೇ ಪ್ರಸ್ತಾವನೆ ವಿಶ್ವಸಂಸ್ಥೆಯ ಮುಂದಿಲ್ಲ ಎನ್ನಲಾಗಿದೆ.
ಮಹಿಳೆಯರ ಮೇಲೆ ತಾಲಿಬಾನ್ ಕ್ರೂರ ನಿರ್ಬಂಧ: ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಮೇಲೆ ತಾಲಿಬಾನ್ ಹೇರಿರುವ ತೀವ್ರ ನಿರ್ಬಂಧಗಳನ್ನು ಮಾನವ ಹಕ್ಕು ಸಂಘಟನೆಗಳು ತೀವ್ರವಾಗಿ ಟೀಕಿಸಿವೆ. ಮಹಿಳೆಯರ ಮೇಲಿನ ನಿರ್ಬಂಧಗಳು ಲಿಂಗಾಧಾರಿತ ಕಿರುಕುಳವಾಗಿದೆ. ಇದು ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಮಾನವೀಯತೆಯ ವಿರುದ್ಧ ಅಪರಾಧವಾಗಿದೆ ಎಂದು ಅವು ಹೇಳಿವೆ. ಅಫ್ಘಾನ್ ಮಹಿಳೆಯರ ಹಕ್ಕುಗಳ ಮೇಲಿನ ತಾಲಿಬಾನ್ ದಬ್ಬಾಳಿಕೆ, ಜೈಲಿಗೆ ಹಾಕುವುದು, ಬಲವಂತವಾಗಿ ಕಣ್ಮರೆಗೊಳಿಸುವುದು, ಚಿತ್ರಹಿಂಸೆ ಮತ್ತು ಇತರ ಹಿಂಸಾತ್ಮಕ ಕ್ರಮಗಳು ಅಂತಾರಾಷ್ಟ್ರೀಯ ಕಾನೂನಡಿ ಅಪರಾಧವಾಗಿವೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಮತ್ತು ಇಂಟರ್ನ್ಯಾಷನಲ್ ಕಮಿಷನ್ ಆಫ್ ಜ್ಯೂರಿಸ್ಟ್ಸ್ (ICJ) ನ ಹೊಸ ವರದಿ ಹೇಳಿದೆ.
ಇದನ್ನೂ ಓದಿ : ಎಲೋನ್ ಮಸ್ಕ್ ಮತ್ತೆ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ