ಲಂಡನ್: ಚೀನಾದಲ್ಲಿ ನಡೆಯುತ್ತಿರುವ ಕೋವಿಡ್ ಲಾಕ್ಡೌನ್ ವಿರೋಧಿ ಹೋರಾಟದ ವರದಿ ಮಾಡುತ್ತಿದ್ದ ಬಿಬಿಸಿ (ಬ್ರಿಟಿಷ್ ಬ್ರಾಡಕಾಸ್ಟಿಂಗ್ ಕಾರ್ಪೊರೇಶನ್) ಸುದ್ದಿಸಂಸ್ಥೆಯ ವರದಿಗಾರನೊಬ್ಬನ ಕೈಗೆ ಕೋಳ ತೊಡಿಸಿ ಬಂಧಿಸಿರುವ ಘಟನೆ ಶಾಂಘೈನಲ್ಲಿ ನಡೆದಿದೆ. ತನ್ನ ವರದಿಗಾರನ ಮೇಲೆ ಚೀನಿ ಅಧಿಕಾರಿಗಳು ನಡೆಸಿದ ದೌರ್ಜನ್ಯದ ವಿರುದ್ಧ ಬಿಬಿಸಿ ಕಳವಳ ವ್ಯಕ್ತಪಡಿಸಿದೆ.
ಶಾಂಘೈನಲ್ಲಿ ಪ್ರತಿಭಟನೆಗಳ ಬಗ್ಗೆ ವರದಿ ಮಾಡುತ್ತಿದ್ದ ನಮ್ಮ ಪತ್ರಕರ್ತ ಎಡ್ ಲಾರೆನ್ಸ್ ಅವರಿಗೆ ಕೈಕೋಳ ತೊಡಿಸಿ ಬಂಧಿಸಿದ ಕ್ರಮಕ್ಕೆ ಬಿಬಿಸಿ ಅತ್ಯಂತ ಕಳವಳ ವ್ಯಕ್ತಪಡಿಸುತ್ತದೆ. ಅವರನ್ನು ತುಂಬಾ ಹೊತ್ತು ಬಂಧಿಸಿಟ್ಟು ನಂತರ ಬಿಡುಗಡೆ ಮಾಡಲಾಯಿತು. ಬಂಧನದ ಸಮಯದಲ್ಲಿ ಅವರನ್ನು ಪೊಲೀಸರು ಹೊಡೆದು ಒದ್ದು ದೌರ್ಜನ್ಯ ಎಸಗಿದ್ದಾರೆ.
ಮಾನ್ಯತೆ ಪಡೆದ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವಾಗ ಅವರೊಂದಿಗೆ ಹೀಗೆ ವರ್ತಿಸಲಾಗಿದೆ. ತನ್ನ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುತ್ತಿರುವಾಗ ಮಾನ್ಯತೆ ಪಡೆದ ಪತ್ರಕರ್ತರೊಬ್ಬರ ಮೇಲೆ ಈ ರೀತಿ ದಾಳಿ ನಡೆಸಿರುವುದು ತುಂಬಾ ಕಳವಳಕಾರಿಯಾಗಿದೆ ಎಂದು ಬಿಬಿಸಿ ಹೇಳಿದೆ.
ಪತ್ರಕರ್ತನನ್ನು ಬಂಧಿಸಿ ಬಿಡುಗಡೆ ಮಾಡಿರುವ ಕ್ರಮದ ಬಗ್ಗೆ ಚೀನಾ ಅಧಿಕಾರಿಗಳಿಂದ ಈವರೆಗೂ ಯಾವುದೇ ಸ್ಪಷ್ಟೀಕರಣ ಅಥವಾ ಕ್ಷಮಾಪಣೆ ಬಂದಿಲ್ಲ. ಆದರೆ, ಜನರ ಗುಂಪಿನಲ್ಲಿ ಅವರಿಗೂ ಕೋವಿಡ್ ಸೋಂಕು ತಗಲುವ ಸಾಧ್ಯತೆ ಇದ್ದು, ಅವರನ್ನು ರಕ್ಷಿಸುವ ಸಲುವಾಗಿ ಬಂಧಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಈ ಸ್ಪಷ್ಟೀಕರಣವು ನಂಬಲರ್ಹ ಎಂದು ನಮಗೆ ಅನಿಸುತ್ತಿಲ್ಲ ಎಂದು ಬಿಬಿಸಿ ಹೇಳಿದೆ.
ಚೀನಾದ ಜೀರೊ ಕೋವಿಡ್ ನೀತಿಯ ವಿರುದ್ಧ ಜನ ಆಕ್ರೋಶಗೊಂಡಿದ್ದು, ಭಾರಿ ಸಂಖ್ಯೆಯಲ್ಲಿ ಜಮಾಯಿಸಿ ಚೀನಾದ ನಗರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕ್ಸಿ ಜಿನ್ಪಿಂಗ್ ಅಧಿಕಾರ ಬಿಡಿ, ಕಮ್ಯುನಿಸ್ಟ್ ಪಾರ್ಟಿ ಅಧಿಕಾರ ಬಿಡಿ ಎಂದು ಜನ ಘೋಷಣೆ ಕೂಗುತ್ತಿದ್ದಾರೆ.
ಇದನ್ನೂ ಓದಿ: ಕೋವಿಡ್ ಹರಡಿದ ಚೀನಾ ಬಗ್ಗೆ ಕಾಂಗ್ರೆಸ್ ಚಕಾರವೆತ್ತಿಲ್ಲವೇಕೆ?: ಸಚಿವ ಸುಧಾಕರ್ ಪ್ರಶ್ನೆ