ನ್ಯೂಯಾರ್ಕ್ (ಅಮೆರಿಕ): ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನ್ಯೂಯಾರ್ಕ್‌ನಲ್ಲಿ ಸಂಖ್ಯಾಶಾಸ್ತ್ರಜ್ಞ ಪ್ರೊಫೆಸರ್ ನಾಸಿಮ್ ನಿಕೋಲಸ್ ತಾಲೇಬ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ, ಲೇಖಕ ರಾಬರ್ಟ್ ಥರ್ಮನ್ರೊಂದಿಗೆ ಸಹ ಚರ್ಚೆ ನಡೆಸಿದರು.
ನ್ಯೂಯಾರ್ಕ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಇಂಜಿನಿಯರಿಂಗ್‌ನಲ್ಲಿ ಪ್ರೊಫೆಸರ್ ಆಗಿರುವ ತಾಲೇಬ್ ಅವರು ತಮ್ಮ ಸ್ವಂತ ಪುಸ್ತಕ "ಸ್ಕಿನ್ ಇನ್ ದಿ ಗೇಮ್" ಅನ್ನು ಮೋದಿಗೆ ಉಡುಗೊರೆಯಾಗಿ ನೀಡಿದರು. ತಾಲೇಬ್ ಅವರು ಪ್ಯಾರಿಸ್ ವಿಶ್ವವಿದ್ಯಾನಿಲಯದಿಂದ ಪಿಹೆಚ್‌ಡಿ ಮತ್ತು ವಾರ್ಟನ್ ಶಾಲೆಯಿಂದ ಎಂಬಿಎ ಪದವಿ ಪಡೆದಿದ್ದಾರೆ. ಜೊತೆಗೆ, ಅನಿಶ್ಚಿತತೆಯ ಕುರಿತಾದ 5 ಸಂಪುಟಗಳ ದಿ ಇನ್ಸರ್ಟೊ ಪ್ರಬಂಧದ ಲೇಖಕರಾಗಿದ್ದಾರೆ. (ಆಂಟಿಫ್ರಾಗೈಲ್, ದಿ ಬ್ಲ್ಯಾಕ್ ಸ್ವಾನ್, ಫೂಲ್ಡ್ ಬೈ ರಾಂಡಮ್‌ನೆಸ್, ದಿ ಬೆಡ್ ಆಫ್ ಪ್ರೊಕ್ರಸ್ಟೆಸ್, ಮತ್ತು ಸ್ಕಿನ್ ಇನ್ ದಿ ಗೇಮ್) ಇವರ ಪ್ರಬಂಧಗಳು. ಮತ್ತು ಡೈನಾಮಿಕ್ ಹೆಡ್ಜಿಂಗ್ (1997) ಎಂಬ ಪುಸ್ತಕ ಬರೆದಿದ್ದಾರೆ.
ನಿನ್ನೆ ಮುಂಜಾನೆ ಪ್ರಧಾನಿ ಮೋದಿ ನ್ಯೂಯಾರ್ಕ್‌ಗೆ ಆಗಮಿಸಿದರು. ಯುಎಸ್‌ನಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಮತ್ತು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಬರಮಾಡಿಕೊಂಡರು. ನಂತರ, ಪ್ರಧಾನಮಂತ್ರಿಯವರು ನ್ಯೂಯಾರ್ಕ್‌ನಲ್ಲಿ ಲೇಖಕ ಮತ್ತು ಅಕಾಡೆಮಿಕ್ ಪ್ರೊಫೆಸರ್ ರಾಬರ್ಟ್ ಥರ್ಮನ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಿದರು. ಪ್ರೊ. ಥರ್ಮನ್ ಅವರು ನ್ಯೂಯಾರ್ಕ್‌ನ ಟಿಬೆಟ್ ಹೌಸ್‌ನ ಸಹ-ಸ್ಥಾಪಕ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇಂದಿನ ಪಿಎಂ ಮೋದಿ ಕಾರ್ಯಕ್ರಮಗಳು : ಜೂನ್ 21 ರಂದು ಯುಎನ್ ಪ್ರಧಾನ ಕಚೇರಿಯಲ್ಲಿ ನಡೆಯುವ ಯೋಗ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ. ನಂತರ, ವಾಷಿಂಗ್ಟನ್ ಡಿಸಿಗೆ ಪ್ರಯಾಣಿಸಲಿದ್ದಾರೆ. ಜೂನ್ 22 ರಂದು ಶ್ವೇತಭವನದಲ್ಲಿ ಅವರು ವಿಧ್ಯುಕ್ತ ಸ್ವಾಗತವನ್ನು ಸ್ವೀಕರಿಸಲಿದ್ದಾರೆ. ಬಳಿಕ, ಉನ್ನತ ಮಟ್ಟದ ಮಾತುಕತೆ ನಡೆಸುವ ಸಲುವಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿ ಮಾಡಲಿದ್ದಾರೆ. ಅಂದು ಸಂಜೆಯೇ ಶ್ವೇತಭವನದಲ್ಲಿ ಬೈಡನ್ ಮತ್ತು ಜಿಲ್ ಬೈಡನ್ ದಂಪತಿ ಪಿಎಂ ನರೇಂದ್ರ ಮೋದಿ ಅವರಿಗೆ ಗೌರವಾರ್ಥ ಔತಣಕೂಟವನ್ನು ಆಯೋಜಿಸಲಿದ್ದಾರೆ.
ಬಳಿಕ. ಅದೇ ದಿನದಂದು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್ ಕೆವಿನ್ ಮೆಕಾರ್ಥಿ ಮತ್ತು ಸೆನೆಟ್‌ನ ಸ್ಪೀಕರ್ ಚಾರ್ಲ್ಸ್ ಶುಮರ್ ಸೇರಿದಂತೆ ಯುಸ್ ಕಾಂಗ್ರೆಸ್ ನಾಯಕರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿಯವರು ಅಮೆರಿಕ ಕಾಂಗ್ರೆಸ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜೂನ್ 23 ರಂದು ಮೋದಿಗಾಗಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ರಾಜ್ಯ ಕಾರ್ಯದರ್ಶಿ ಆಂಟೋನಿ ಬಿಲ್ನ್ಕೆನ್ ಅವರು ಜಂಟಿ ಭೋಜನಕೂಟವನ್ನ ಆಯೋಜಿಸಲಿದ್ದು ಅದರಲ್ಲಿ ಭಾಗಿಯಾಗಲಿದ್ದಾರೆ. ಬಳಿಕ, ಪ್ರಮುಖ ಸಿಇಒಗಳು ಹಾಗೂ ವೃತ್ತಿಪರರೊಂದಿಗೆ ಸಂವಾದ ನಡೆಸಲಿದ್ದಾರೆ. ಅದೇ ದಿನ ಭಾರತೀಯ ಅನಿವಾಸಿ ಸದಸ್ಯರನ್ನೂ ಭೇಟಿಯಾಗಲಿದ್ದಾರೆ.
ಇದನ್ನೂ ಓದಿ : PM Modi US Visit: ಅಮೆರಿಕಕ್ಕೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ.. ನಿರ್ಗಮನಕ್ಕೆ ಮುನ್ನ ಹೇಳಿದ್ದೇನು?