ಇಸ್ಲಾಮಾಬಾದ್(ಪಾಕಿಸ್ತಾನ): ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಪಾಕ್ ಪ್ರಧಾನಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗುತ್ತಿದೆ ಎಂದು ಪಾಕಿಸ್ತಾನದ ಮಾಜಿ ಸಚಿವರೊಬ್ಬರು ಹೇಳಿದ್ದಾರೆ ಎಂದು ಜಿಯೋ ನ್ಯೂಸ್ (Geo News) ವರದಿ ಮಾಡಿದೆ. ಪಾಕ್ ಸರ್ಕಾರದ ಪಕ್ಷವಾಗಿದ್ದ ಎಂಕ್ಯೂಎಂ-ಪಿ ವಿರೋಧ ಪಕ್ಷಕ್ಕೆ ಬೆಂಬಲ ನೀಡಿದ ನಂತರ ಮಾಜಿ ಸಚಿವ ಫೈಸಲ್ ವಾವ್ಡಾ ಈ ಆರೋಪ ಮಾಡಿದ್ದಾರೆ.
ಖಾಸಗಿ ಟೆಲಿವಿಷನ್ ಚಾನೆಲ್‌ನೊಂದಿಗೆ ಮಾತನಾಡಿರುವ ಫೈಸಲ್ ವಾವ್ಡಾ ಪ್ರಧಾನಿಯವರ ಜೀವಕ್ಕೆ ಅಪಾಯವಿದೆ ಮತ್ತು ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗುತ್ತಿದೆ. ಬುಲೆಟ್ ಪ್ರೂಫ್ ಗ್ಲಾಸ್ ಬಳಸುವಂತೆ ನಾವು ಅವರಿಗೆ ಪದೇ ಪದೇ ಹೇಳಿದ್ದೇವೆ. ಸಮಯ ಬಂದಾಗ ನಾವು ಸಾವನ್ನಪ್ಪುತ್ತೇವೆ ಎಂದು ಪ್ರಧಾನಿ ಹೇಳುತ್ತಿದ್ದಾರೆ ಎಂದು ಫೈಸಲ್ ವಾವ್ಡಾ ಸ್ಪಷ್ಟನೆ ನೀಡಿದ್ದಾರೆ.
ಹಲವಾರು ಪಕ್ಷಗಳು ಇಮ್ರಾನ್ ಪಕ್ಷವಾದ ಪಿಟಿಐನೊಂದಿಗೆ ಮೈತ್ರಿಕೂಟವನ್ನು ಕಡಿದುಕೊಂಡು ವಿರೋಧ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ್ದು, ಈ ಹಿನ್ನೆಯಲ್ಲಿ ಇಮ್ರಾನ್ ಖಾನ್ ನ್ಯಾಷನಲ್ ಅಸೆಂಬ್ಲಿಯಲ್ಲಿ ಬಹುಮತ ಕಳೆದುಕೊಂಡಿದ್ದಾರೆ. ಪ್ರಸ್ತುತ ಸರ್ಕಾರ ರಚಿಸುವ ಪಕ್ಷಗಳು 164 ಸದಸ್ಯರನ್ನು ಹೊಂದಿದ್ದು, ಪ್ರತಿಪಕ್ಷಗಳು 177 ಸದಸ್ಯರನ್ನು ಹೊಂದಿವೆ. ಪ್ರಧಾನಿ ಇಮ್ರಾನ್ ಖಾನ್ಗೆ ಕುರ್ಚಿ ಉಳಿಸಿಕೊಳ್ಳಲು 172 ಸದಸ್ಯರ ಅಗತ್ಯವಿದೆ.
ಇದನ್ನೂ ಓದಿ: ತೈಲ ಬೆಲೆ ನಿಯಂತ್ರಣಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೊಸ ಪ್ಲಾನ್..!