ಡಾಕರ್(ಬುರ್ಕಿನ್ಫಾಸೊ): ಪಶ್ಚಿಮ ಆಫ್ರಿಕಾದ ರಾಷ್ಟ್ರವಾದ ಉತ್ತರ ಬುರ್ಕಿನಾ ಫಾಸೊದಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳು ನಡೆಸಿದ ಭೀಕರ ದಾಳಿಗಳಲ್ಲಿ ಕನಿಷ್ಠ 44 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿ ಸರ್ಕಾರ ಶನಿವಾರ ತಿಳಿಸಿದೆ. ಸೆನೋ ಪ್ರಾಂತ್ಯದ ಕೌರಕೌ ಮತ್ತು ತೊಂಡೋಬಿ ಮೇಲೆ ಜಿಹಾದಿಗಳು ದಾಳಿ ನಡೆಸಿದ್ದು, ನಾಗರಿಕರನ್ನು ಅಲ್ಲೋಲ ಕಲ್ಲೋಲ ಮಾಡಿದೆ.
ಇಸ್ಲಾಮಿಕ್ ಉಗ್ರರ ನಿರಂತರ ದಾಳಿಯಿಂದಾಗಿ ಅಲ್ಲಿನ ಜನರು ತೀವ್ರ ಹಾನಿಗೀಡಾಗಿದ್ದಾರೆ. ಏಪ್ರಿಲ್ 6, 7 ರಂದು ನಡೆದ ದಾಳಿಗಳು ಹೇಯ ಮತ್ತು ಅನಾಗರಿಕ ಕೃತ್ಯವಾಗಿದೆ. ಜನರ ಮೇಲೆ ಉಗ್ರರು ದಾಳಿ ನಡೆಸುತ್ತಿದ್ದಾರೆ ಎಂದು ಸಹೇಲ್ ಪ್ರದೇಶದ ಗವರ್ನರ್ ಲೆಫ್ಟಿನೆಂಟ್ ಕರ್ನಲ್ ಪಿ. ಎಫ್ ರೊಡೊಲ್ಫೆ ಸೊರ್ಗೊ ಟೀಕಿಸಿದ್ದಾರೆ. ಸರ್ಕಾರ ದಾಳಿಯನ್ನು ಎದುರಿಸಿ ಈ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.
ಪಶ್ಚಿಮ ಆಫ್ರಿಕಾದ ರಾಷ್ಟ್ರವು ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಗುಂಪಿಗೆ ಸಂಬಂಧಿಸಿದ ಜಿಹಾದಿ ಹಿಂಸಾಚಾರದಿಂದ ನಲುಗಿ ಹೋಗಿದೆ. 6 ವರ್ಷಗಳಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿಯವರೆಗೂ 2 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ.
ಈ ದಾಳಿ ಆತಂಕ ಮತ್ತು ನಿರಾಶೆ ಮೂಡಿಸಿದೆ. ಶಾಂತಿಯುತವಾಗಿದ್ದ ಜನರ ಮೇಲೆ ದಾಳಿ ನಡೆಸಲಾಗಿದೆ. ಕಳೆದ ವರ್ಷ ಎರಡು ಮಿಲಿಟರಿ ದಂಗೆಗಳಿಗೆ ಇದು ಕಾರಣವಾಯಿತು. ಜುಂಟಾ ನಾಯಕ ಉಗ್ರರ ದಾಳಿಗಳನ್ನು ತಡೆಯಲು ಪ್ರತಿಜ್ಞೆ ಮಾಡಿದ್ದರೂ, ಹಿಂಸಾಚಾರವು ತೀವ್ರಗೊಳ್ಳುತ್ತಿದೆ. ಜಿಹಾದಿಗಳು ಗ್ರಾಮಗಳನ್ನು ದಿಗ್ಬಂಧನಕ್ಕೆ ಒಳಪಡಿಸಲು ಸಂಚು ರೂಪಿಸಿದ್ದಾರೆ. ಲಕ್ಷಾಂತರ ಜನರು ಪ್ರಾಣಾಪಾಯದಲ್ಲಿ ಜೀವಿಸುವಂತೆ ಮಾಡಿದೆ.
ಫೆಬ್ರವರಿಯಲ್ಲಿ ಇಸ್ಲಾಮಿಕ್ ಸ್ಟೇಟ್ಸ್ ಗುಂಪು ಉತ್ತರದ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ದಾಳಿ ಮಾಡಿ 70 ಕ್ಕೂ ಹೆಚ್ಚು ಸೈನಿಕರನ್ನು ಕೊಂದು ಹಾಕಿತು. ದುರಂತದಲ್ಲಿ ಹಲವಾರು ಜನರು ಗಾಯಗೊಂಡರು. ಐವರನ್ನು ಒತ್ತೆಯಾಳುಗಳನ್ನಾಗಿ ಎಳೆದೊಯ್ಯಲಾಗಿದೆ.
ಅದಕ್ಕೂ ಕೆಲವು ವಾರಗಳ ಮೊದಲು, ಜಿಹಾದಿಗಳು ದೇಶಾದ್ಯಂತ ಅನೇಕ ದಾಳಿಗಳಲ್ಲಿ ಸೈನಿಕರು ಮತ್ತು ನಾಗರಿಕರು ಸೇರಿದಂತೆ ಕನಿಷ್ಠ 32 ಜನರನ್ನು ಹತ್ಯೆ ಮಾಡಿದ್ದಾರೆ. ಹಿಂಸಾಚಾರವು ದೇಶದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ. ವಿಶ್ವಸಂಸ್ಥೆಯ ಪ್ರಕಾರ, ಐದು ನಾಗರಿಕರಲ್ಲಿ ಒಬ್ಬರು ಉಗ್ರ ದಾಳಿಗೆ ಒಳಗಾಗುತ್ತಿದ್ದಾರೆ. ಸುಮಾರು 4.7 ಮಿಲಿಯನ್ ಜನರು ಮಾನವೀಯ ನೆರವಿಗೆ ಮೊರೆ ಇಡುವಂತಾಗಿದೆ.
ಬ್ಯಾಂಕಾಕ್ನಲ್ಲಿ ಗುಂಡಿನ ದಾಳಿ: ಬ್ಯಾಂಕಾಕ್ನ ಸೂರತ್ ಥಾನಿ ಪ್ರಾಂತ್ಯದ ಖಿರಿ ರಾತ್ ನಿಖೋಮ್ನಲ್ಲಿ ಈಚೆಗೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಆರೋಪಿಗಳಿಗಾಗಿ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ 12 ತಿಂಗಳುಗಳಲ್ಲಿ ಇಲ್ಲಿ ಭಾರಿ ಹಿಂಸಾತ್ಮಕ ಘಟನೆಗಳು ನಡೆಯುತ್ತಿದ್ದು, ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಈಶಾನ್ಯ ನಾಂಗ್ ಬುವಾ ಲ್ಯಾಮ್ ಫು ಪ್ರಾಂತ್ಯದಲ್ಲಿ ಮಾಜಿ ಪೊಲೀಸ್ ಸಾರ್ಜೆಂಟ್ವೊಬ್ಬ 24 ಮಕ್ಕಳು ಸೇರಿದಂತೆ 36 ಜನರನ್ನು ಕೊಂದು ಹಾಕಿದ್ದು. ಇದು ನಗರದಲ್ಲಿ ಭಾರಿ ಆತಂಕ ಮೂಡಿಸಿತ್ತು.