ಬೀಜಿಂಗ್: ಅಮೆರಿಕದ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ದ್ವೀಪ ರಾಷ್ಟ್ರ ತೈವಾನ್ ದೇಶದ ಪ್ರವಾಸ ಕೈಗೊಂಡಿದ್ದಾರೆ. ತೈವಾನ್ ಅಧ್ಯಕ್ಷ ತ್ಸೈ ಇಂಗ್-ವೆನ್ ಅವರನ್ನು ಬುಧವಾರ ಭೇಟಿಯಾದರು. ಈ ಮಧ್ಯೆ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯಿಂದ ಚೀನಾ ಕೆರಳಿ ಕೆಂಡವಾಗಿದೆ.
ಪ್ರವಾಸದ ಸಮಯದಲ್ಲಿ ತೈವಾನ್ ಸಂಸತ್ತಿಗೆ ಪೆಲೋಸಿ ಭೇಟಿ ನೀಡಿದರು. ಕಳೆದ 25 ವರ್ಷಗಳಲ್ಲಿ ಅಮೆರಿಕದ ಉನ್ನತ ಆಡಳಿತಾಧಿಕಾರಿಯೊಬ್ಬರು ತೈವಾನ್ ದೇಶಕ್ಕೆ ಭೇಟಿ ನೀಡಿರುವುದು ಪ್ರಥಮ ಬಾರಿಯಾಗಿದೆ.
ಆದರೆ, ಚೀನಾ ಈ ಎಲ್ಲ ಬೆಳವಣಿಗೆಗಳನ್ನು ತನ್ನದೇ ದೃಷ್ಟಿಕೋನದಲ್ಲಿ ನೋಡುತ್ತಿದೆ. ತೈವಾನ್ ದೇಶವು ಚೀನಾದಿಂದ ಪ್ರತ್ಯೇಕವಾದ ಸ್ವಯಂ ಆಡಳಿತ ದ್ವೀಪವಾಗಿದ್ದು, ಮುಂದೊಂದು ದಿನ ಚೀನಾದ ಭಾಗವಾಗಲಿದೆ ಎಂದು ಚೀನಾ ಪ್ರತಿಪಾದಿಸುತ್ತದೆ. ಹೀಗಾಗಿಯೇ ಪೆಲೋಸಿ ಅವರು ತೈವಾನ್ಗೆ ಭೇಟಿ ನೀಡಲು ಅವಕಾಶ ನೀಡಿದ ಅಮೆರಿಕದ ವಿರುದ್ಧ ಕಿಡಿಕಾರುತ್ತಿದೆ.
ಮಂಗಳವಾರ ತೈವಾನ್ಗೆ ಪೆಲೋಸಿ ಆಗಮಿಸುತ್ತಿದ್ದಂತೆಯೇ ಪ್ರತೀಕಾರ ಕ್ರಮಗಳಿಗೆ ಮುಂದಾದ ಚೀನಾ, ತೈವಾನ್ ಸುತ್ತುವರೆದಿರುವ ಸಮುದ್ರದ ಆರು ಕಡೆಗಳಲ್ಲಿ ಮಿಲಿಟರಿ ಅಭ್ಯಾಸಗಳನ್ನು ಆರಂಭಿಸಿದೆ. ಈ ಅಭ್ಯಾಸಗಳು ದೀರ್ಘ ಶ್ರೇಣಿಯ ಲೈವ್-ಫೈರ್ ಕಾರ್ಯಾಚರಣೆಗಳನ್ನು ಒಳಗೊಂಡಿರುವ ಸಾಧ್ಯತೆಗಳಿದ್ದು ಮತ್ತು ಭಾನುವಾರದವರೆಗೆ ಮುಂದುವರೆಯುವ ಸಾಧ್ಯತೆಯಿದೆ. 1995 ರ ತೈವಾನ್ ಜಲಸಂಧಿ ಬಿಕ್ಕಟ್ಟಿನ ನಂತರ ಬೀಜಿಂಗ್‌ನಿಂದ ಇದು ಅತಿದೊಡ್ಡ ಮಿಲಿಟರಿ ಬಲದ ಪ್ರದರ್ಶನವಾಗಿದೆ. ಆಗ ಚೀನಾ ತೈವಾನ್ ಮೇಲೆ ಕ್ಷಿಪಣಿಗಳನ್ನು ಹಾರಿಸಿತ್ತು ಮತ್ತು ತೈವಾನ್ ರಕ್ಷಣೆಗೆ ಅಮೆರಿಕ ಎರಡು ವಿಮಾನವಾಹಕ ನೌಕೆಗಳ ತುಕಡಿಗಳನ್ನು ಕಳುಹಿಸಿತ್ತು.
ಪೆಲೋಸಿ ಭೇಟಿಗೆ ಪ್ರತಿಭಟನೆ ತೋರಲು ಚೀನಾದ ವಿದೇಶಾಂಗ ಸಚಿವಾಲಯವು ಚೀನಾದಲ್ಲಿನ ಯುಎಸ್ ರಾಯಭಾರಿ ನಿಕೋಲಸ್ ಬರ್ನ್ಸ್ ಅವರನ್ನು ಬುಧವಾರ ಮುಂಜಾನೆ ಕರೆಸಿದೆ. ಪೆಲೋಸಿಯ ಈ ಭೇಟಿಯು ಚೀನಾ ಏಕತೆಯ ತತ್ವದ ಗಂಭೀರ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಮಂಗಳವಾರವಷ್ಟೇ ಚೀನಾ 21 ವಿಮಾನಗಳನ್ನು ತೈವಾನ್‌ನ ವಾಯು ರಕ್ಷಣಾ ವಲಯಕ್ಕೆ ಕಳುಹಿಸಿದೆ ಎಂದು ತೈಪೆಯ ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ, 23 ಮಿಲಿಯನ್ ನಿವಾಸಿಗಳನ್ನು ಹೊಂದಿರುವ ತೈವಾನ್ ತನ್ನನ್ನು ತಾನು ಸ್ವತಂತ್ರ ಎಂದು ದೀರ್ಘಕಾಲದಿಂದ ಪರಿಗಣಿಸಿದೆ.