ಮನಿಲಾ (ಫಿಲಿಪ್ಪೀನ್ಸ್): ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ 30 ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಫಿಲಿಪ್ಪೀನ್ಸ್ ರಾಜಧಾನಿ ಸಮೀಪದ ಸರೋವರದಲ್ಲಿ ಗುರುವಾರ ನಡೆದಿದೆ. ಘಟನೆಯಿಂದ 40 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಫಿಲಿಪ್ಪೀನ್ಸ್ ಕರಾವಳಿ ರಕ್ಷಣಾ ಪಡೆ ತಿಳಿಸಿದೆ.
ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದೆ. ಬಲವಾದ ಗಾಳಿಯಿಂದಾಗಿ ಯಾಂತ್ರೀಕೃತ ದೋಣಿ ಒಂದು ಕಡೆಗೆ ವಾಲಿತ್ತು. ಇದರಿಂದ ಭಯಭೀತರಾದ ಪ್ರಯಾಣಿಕರು ದೋಣಿಯ ಒಂದೇ ಕಡೆ ಗುಂಪುಗೂಡಿದರು. ಇದರ ಪರಿಣಾಮ ದೋಣಿ ಸಮತೋಲನ ಕಳೆದುಕೊಂಡು ನೀರಿನಲ್ಲಿ ಮುಳುಗಿದೆ ಎಂದು ಹೇಳಲಾಗಿದೆ.
ಘಟನಾ ಪ್ರದೇಶದಲ್ಲಿ ಫಿಲಿಪ್ಪೀನ್ಸ್ ಕರಾವಳಿ ರಕ್ಷಣಾ ಪಡೆಯಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ದುರಂತದ ಸಮಯದಲ್ಲಿ ದೋಣಿಯಲ್ಲಿ ಎಷ್ಟು ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂಬುದನ್ನು ದೃಢಪಡಿಸಲಾಗಿಲ್ಲ. ಅಪಘಾತದ ಸ್ಥಳವು ರಾಜಧಾನಿ ಮನಿಲಾದಿಂದ ಕೇವಲ ಎರಡು ಗಂಟೆಗಳ ಪ್ರಯಾಣದ ದೂರದಲ್ಲಿದೆ.
ಇಂಡೋನೇಷ್ಯಾದಲ್ಲೂ ಇಂಥದ್ದೇ ಘಟನೆ : ಜುಲೈ 24ರಂದು ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ ಪ್ರಯಾಣಿಕರಿದ್ದ ದೋಣಿ ಮುಳುಗಿ ಕನಿಷ್ಠ 15 ಜನರು ಸಾವನ್ನಪ್ಪಿ, 19 ಜನ ನಾಪತ್ತೆಯಾಗಿದ್ದರು. ರಕ್ಷಣಾ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, 20 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯದ ದೋಣಿಯಲ್ಲಿ 40 ಜನರಿದ್ದರು. ಈ ವೇಳೆ ಅತಿಯಾದ ಭಾರದಿಂದ ದೋಣಿ ಮಗುಚಿ ಬಿದ್ದಿತ್ತು. 15 ಜನ ಪ್ರಯಾಣಿಕರು ಸಾವನ್ನಪ್ಪಿದ್ದರು. ಇನ್ನೂ 19 ಜನ ಸಮುದ್ರದಲ್ಲಿ ನಾಪತ್ತೆಯಾಗಿದ್ದರು. ಆರು ಜನರನ್ನು ರಕ್ಷಿಸಲಾಗಿತ್ತು. ಇಂಡೋನೇಷ್ಯಾವು 17,000ಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿರುವ ದ್ವೀಪಸಮೂಹವಾಗಿದ್ದು, ಇಲ್ಲಿ ಜಲಸಾರಿಗೆ ಪ್ರಮುಖವಾಗಿದೆ. ಆದರೆ ಸೂಕ್ತ ಸುರಕ್ಷತಾ ಮಾನದಂಡಗಳು ಮತ್ತು ಸಾಮರ್ಥ್ಯಕ್ಕೂ ಮೀರಿ ಜನರ ಪ್ರಯಾಣದಿಂದ ಆಗಾಗ್ಗೆ ಇಂತಹ ಘಟನೆಗಳು ಸಂಭವಿಸುತ್ತಿವೆ.
ಟುನಿಸ್ನಲ್ಲೂ ಮುಳುಗಿದ ದೋಣಿ : ವಲಸಿಗರನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ಮುಳುಗಡೆಯಾಗಿರುವ ಘಟನೆ ಟುನೀಶಿಯಾದ ಆಗ್ನೇಯ ಕರಾವಳಿಯಲ್ಲಿ ಮಾರ್ಚ್ ತಿಂಗಳಿನಲ್ಲಿ ನಡೆದಿತ್ತು. ಅವಘಡದಲ್ಲಿ ಸುಮಾರು 34 ವಲಸಿಗರು ನಾಪತ್ತೆಯಾಗಿದ್ದರು. ಉಪ ಸಹಾರನ್ ದೇಶಗಳಿಂದ ಒಟ್ಟು 38 ವಲಸಿಗರನ್ನು ಹೊತ್ತು ಬರುತ್ತಿದ್ದ ದೋಣಿ ಇದಾಗಿತ್ತು. ಮುಳುಗಡೆಯಾದ ದೋಣಿಯು ಟುನೀಶಿಯಾದ ಸ್ಫ್ಯಾಕ್ಸ್ ಪ್ರಾಂತ್ಯದಿಂದ ಯುರೋಪಿಯನ್ ಕರಾವಳಿಗೆ ಹೊರಟಿತ್ತು.
ಗ್ರೀಸ್ ದೋಣಿ ದುರಂತ : ನೂರಾರು ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಮೀನುಗಾರಿಕಾ ದೋಣಿಯೊಂದು ಗ್ರೀಸ್ ಕರಾವಳಿಯಲ್ಲಿ ಮುಳುಗಿ 70ಕ್ಕೂ ಹೆಚ್ಚು ಜನ ಸಾವನ್ನಪ್ಪಿ 500 ಜನ ನಾಪತ್ತೆಯಾಗಿದ್ದ ಘಟನೆ ಕಳೆದ ತಿಂಗಳು ನಡೆದಿತ್ತು. ದೋಣಿಯಲ್ಲಿ 750 ಮಂದಿ ಪ್ರಯಾಣಿಸುತ್ತಿದ್ದರು ಎಂದು ಅಂದಾಜಿಸಲಾಗಿದೆ. ನೈಋತ್ಯ ಕರಾವಳಿಯಿಂದ ಸುಮಾರು 50 ನಾಟಿಕಲ್ ಮೈಲು ದೂರದಲ್ಲಿ ದೋಣಿ ಮಗುಚಿತ್ತು. ಸ್ಥಳದಿಂದ ರಕ್ಷಣಾ ತಂಡದವರು ಶೋಧ ಕಾರ್ಯ ಪ್ರಾರಂಭಿಸಿ, 104 ಜನರನ್ನು ರಕ್ಷಿಸಿದ್ದರು. 78 ಮೃತದೇಹಗಳನ್ನು ಪತ್ತೆ ಹಚ್ಚಲಾಗಿತ್ತು.
ಇದನ್ನೂ ಓದಿ: Cargo Ship: 3 ಸಾವಿರ ಕಾರುಗಳನ್ನು ಹೊತ್ತು ಸಾಗುತ್ತಿದ್ದ ಹಡಗು ಬೆಂಕಿಗಾಹುತಿ! ಓರ್ವ ಭಾರತೀಯ ಪ್ರಜೆ ಸಾವು- ಫೋಟೋಗಳು..