ಕರಾಚಿ(ಪಾಕಿಸ್ತಾನ): ಪಾಕಿಸ್ತಾನದಲ್ಲಿ 14 ವರ್ಷದ ಹಿಂದು ಬಾಲಕಿಯ ನಾಪತ್ತೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ನೀಡಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ. ಇದಲ್ಲದೇ, ಇನ್ನಿಬ್ಬರು ಹಿಂದು ಮಹಿಳೆಯರ ಪತ್ತೆಗೂ ಸೂಚಿಸಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೈದರಾಬಾದ್ ನಿವಾಸಿಯಾಗಿರುವ 14 ವರ್ಷದ ಬಾಲಕಿಯನ್ನು ವಾರದ ಹಿಂದೆ ಅಪಹರಿಸಲಾಗಿದೆ. ಈ ಬಗ್ಗೆ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಅಲ್ಲಿನ ಆಡಳಿತ ಬಾಲಕಿಯ ಶೀಘ್ರ ಪತ್ತೆಗಾಗಿ ಉನ್ನತ ಮಟ್ಟದ ತನಿಖೆ ನಡೆಸಲು ಸೂಚಿಸಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಈಗಾಗಲೇ ತನಿಖೆ ಆರಂಭಿಸಿದ್ದು, ಸಂತ್ರಸ್ತ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸಿಂಧ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಇದಲ್ಲದೇ, ಇನ್ನಿಬ್ಬರು ಹಿಂದು ಮಹಿಳೆಯರ ನಾಪತ್ತೆ ಪ್ರಕರಣದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಿಂದ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದು ಬಾಲಕಿಯರು ಮತ್ತು ಮಹಿಳೆಯರ ಅಪಹರಣ, ಬಲವಂತದ ಮತಾಂತರದ ಪ್ರಕರಣಗಳು ಏರಿಕೆಯಾಗುತ್ತಿವೆ. ಇತ್ತೀಚೆಗಷ್ಟೇ ರಕ್ಷಿಸಲ್ಪಟ್ಟ ಬಾಲಕಿಯೊಬ್ಬಳನ್ನು ಮದುವೆಯಾದ ಮುಸ್ಲಿಂ ವ್ಯಕ್ತಿ ಅಪಹರಿಸಿದ್ದಲ್ಲದೇ, ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿದ್ದ. ಈ ಬಗ್ಗೆ ಸ್ಥಳೀಯ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ಮತ್ತೊಂದು ಘಟನೆಯಲ್ಲಿ ತನ್ನನ್ನು ವರಿಸಲು ನಿರಾಕರಿಸಿದ್ದಕ್ಕೆ ಮನೆಯಾಚೆ ಕುಳಿತಿದ್ದ ಹಿಂದು ಹುಡುಗಿಯನ್ನು ಮುಸ್ಲಿಂ ವ್ಯಕ್ತಿ ಗುಂಡಿಕ್ಕಿ ಹತ್ಯೆ ಮಾಡಿದ್ದ.
ಓದಿ: ಮತ್ತೆ ಉದ್ವಿಗ್ನ ಸ್ಥಿತಿ.. ಉಕ್ರೇನ್ಗೆ ತೆರಳದಂತೆ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ