ಕರಾಚಿ: ಭಾರಿ ಮಳೆಯ ಕಾರಣದಿಂದ ಲಾಹೋರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗದ ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್ಲೈನ್ಸ್ ವಿಮಾನವೊಂದು ಭಾರತದ ವಾಯು ಪ್ರದೇಶದಲ್ಲಿ ಸುಮಾರು 10 ನಿಮಿಷಗಳ ಕಾಲ ಹಾರಾಟ ನಡೆಸಿದೆ. ನಂತರ ಭಾರತದ ಪಂಜಾಬ್ ರಾಜ್ಯದ ಮೇಲಿನಿಂದ ಸುಮಾರು 125 ಕಿಲೋ ಮೀಟರ್ ಕ್ರಮಿಸಿ ಪಾಕಿಸ್ತಾನಕ್ಕೆ ಮರಳಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮೇ 4 ರಂದು ರಾತ್ರಿ 8 ಗಂಟೆ ಸುಮಾರಿಗೆ ಮಸ್ಕತ್ನಿಂದ ಲಾಹೋರ್ಗೆ ಆಗಮಿಸಿದ ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್ಲೈನ್ಸ್ ವಿಮಾನ PK-248 ವಿಪರೀತ ಮಳೆಯ ಕಾರಣದಿಂದ ಲ್ಯಾಂಡ್ ಮಾಡಲು ಸಾಧ್ಯವಾಗಲಿಲ್ಲ. ಲಾಹೋರ್ನ ಅಲ್ಲಾಮಾ ಇಕ್ಬಾಲ್ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ ವಿಮಾನವನ್ನು ಲ್ಯಾಂಡ್ ಮಾಡಲು ಯತ್ನಿಸಿದಾಗ ಅದು ಅಸ್ಥಿರಗೊಂಡು ಲ್ಯಾಂಡ್ ಮಾಡಲು ಸಾಧ್ಯವಾಗಲಿಲ್ಲ. ಇದು ಬೋಯಿಂಗ್ 777 ವಿಮಾನವಾಗಿತ್ತು.
ನಂತರ ಏರ್ ಟ್ರಾಫಿಕ್ ಕಂಟ್ರೋಲರ್ ಸೂಚನೆಯ ಮೇರೆಗೆ ಪೈಲಟ್ ಗೋ-ಅರೌಂಡ್ ಆರಂಭಿಸಿದ್ದರು. ಆದರೆ ಮಳೆ ಹಾಗೂ ವಿಮಾನ ತೀರಾ ಕೆಳಮಟ್ಟದಲ್ಲಿ ಹಾರಾಡುತ್ತಿದ್ದರಿಂದ ಪೈಲಟ್ ದಿಕ್ಕು ತಪ್ಪಿದೆ. ಈ ಸಂದರ್ಭದಲ್ಲಿ ವಿಮಾನವು ರಾತ್ರಿ 8.11ರ (ಪಾಕ್ ಸಮಯ) ಹೊತ್ತಿಗೆ ಭಾರತದ ಪಂಜಾಬ್ನ ಬಧಾನಾ ಪೊಲೀಸ್ ಸ್ಟೇಷನ್ ವ್ಯಾಪ್ತಿಯಿಂದ ಭಾರತದ ವಾಯು ಪ್ರದೇಶಕ್ಕೆ ನುಗ್ಗಿದೆ.
13,500 ಅಡಿ ಎತ್ತರದಲ್ಲಿ ಹಾಗೂ ಪ್ರತಿ ಗಂಟೆಗೆ 292 ಕಿಲೋಮೀಟರ್ ವೇಗದಲ್ಲಿ ವಿಮಾನ ಚಲಿಸುತ್ತಿತ್ತು. ವಿಮಾನ ಭಾರತ ಪ್ರವೇಶಿಸಿದ ಸ್ಥಳವನ್ನು ಛಿನಾ ಬಿಧಿ ಚಾಂದ್ ಗ್ರಾಮ ಎಂದು ಗುರುತಿಸಲಾಗಿದೆ. ಇದು ಅಮೃತ್ಸರ್ನಿಂದ 37 ಕಿಲೋಮೀಟರ್ ದೂರದಲ್ಲಿದೆ. ಭಾರತದ ಪ್ರದೇಶಕ್ಕೆ ವಿಮಾನ ಬಂದ ನಂತರ ಕ್ಯಾಪ್ಟನ್ ವಿಮಾನವನ್ನು 20,000 ಅಡಿ ಎತ್ತರಕ್ಕೆ ಹಾರಿಸಿದ್ದಾನೆ. ಭಾರತದ ಪಂಜಾಬ್ನ ತರನ್ ಸಾಹಿಬ್ ಹಾಗೂ ರಸೂಲ್ಪುರ್ ಪಟ್ಟಣಗಳ ಮೇಲಿಂದ 40 ಕಿಲೋ ಮೀಟರ್ ಪ್ರಯಾಣಿಸಿದ ಪಾಕ್ ವಿಮಾನ ನೌಶೇರಾ ಪನ್ನಾವು ಮೂಲಕ ಪಾಕಿಸ್ತಾನಕ್ಕೆ ಮರಳಿ ಪ್ರವೇಶಿಸಿದೆ.
ಪಾಕ್ ವಿಮಾನವು ಸುಮಾರು 7 ನಿಮಿಷಗಳ ಕಾಲ ಭಾರತದ ವಾಯು ಪ್ರದೇಶದಲ್ಲಿ ಹಾರಾಡಿದೆ ಮತ್ತು ಭಾರತದ ಪಂಜಾಬ್ನ ಝಗಿಯಾನ್ ನೂರ್ ಮುಹಮ್ಮದ್ ಹಳ್ಳಿಯ ಹತ್ತಿರದಿಂದ ಮರಳಿ ಪಾಕಿಸ್ತಾನಕ್ಕೆ ಪ್ರವೇಶಿಸಿದೆ. ಇದರ ನಂತರ ಅದು ಪಾಕಿಸ್ತಾನದ ಕಸೂರ್ ಜಿಲ್ಲೆಯ ಗ್ರಾಮಗಳಾದ ದೋನಾ ಮಬ್ಬೋಕಿ, ಛಾಂಟ್, ಧುಪ್ಸಾರಿ ಕಸೂರ್ ಮತ್ತು ಘಾಟಿ ಕಲಂಝರ್ ಮೂಲಕ ಮತ್ತೆ ಭಾರತದೊಳಗೆ ಪ್ರವೇಶಿಸಿದೆ.
ಇದಾಗಿ 3 ನಿಮಿಷಗಳ ನಂತರ ಭಾರತದ ಪಂಜಾಬ್ನ ಸಿಂಗ್ವಾಲಾ ಹಿತಾರ್ ಹಳ್ಳಿಯ ಬಳಿ ವಿಮಾನ ಮತ್ತೆ ಪಾಕಿಸ್ತಾನ ಪ್ರವೇಶಿಸಿದೆ. ಈ ಸಮಯದಲ್ಲಿ ವಿಮಾನವು 23,000 ಅಡಿ ಎತ್ತರದಲ್ಲಿ ಮತ್ತು ಗಂಟೆಗೆ 320 ಕಿಲೋ ಮೀಟರ್ ವೇಗದಲ್ಲಿ ಹಾರುತ್ತಿತ್ತು ಎಂದು ವರದಿಗಳು ತಿಳಿಸಿವೆ. ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿದ ನಂತರ, ವಿಮಾನವು ಮುಲ್ತಾನ್‌ಗೆ ಹಾರಿದೆ. ಈ ವಿಮಾನವು ಭಾರತದ ಭೂಪ್ರದೇಶದಲ್ಲಿ ಒಟ್ಟು 120 ಕಿ.ಮೀ ದೂರವನ್ನು 10 ನಿಮಿಷಗಳಲ್ಲಿ ಕ್ರಮಿಸಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಮತ್ತೆ ಹಿಂದೂ ದೇವಾಲಯದ ಮೇಲೆ ದಾಳಿ: ಖಲಿಸ್ತಾನಿಗಳಿಂದ ಕೃತ್ಯದ ಶಂಕೆ