ಕರಾಚಿ (ಪಾಕಿಸ್ತಾನ) : ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ನಂತರ ದೇಶದಲ್ಲಿ ಉಂಟಾಗಿರುವ ಕೋಲಾಹಲದ ಮಧ್ಯೆ ದೇಶಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಇಂದು ಪಾಕಿಸ್ತಾನದ ರೂಪಾಯಿ ಯುಎಸ್ ಡಾಲರ್ ಎದುರು ದಾಖಲೆಯ 298 ಕ್ಕೆ ಕುಸಿದಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಗುರುವಾರದಂದು ಪಾಕಿಸ್ತಾನಿ ರೂಪಾಯಿ ಡಾಲರ್ ಎದುರು 8.78 ರೂಪಾಯಿ ಅಥವಾ ಶೇ 3.02ರಷ್ಟು ಕುಸಿದು ಇಂಟರ್ ಬ್ಯಾಂಕ್ ಮಾರುಕಟ್ಟೆಯಲ್ಲಿ 299ರ ಮಟ್ಟದಲ್ಲಿ ವಹಿವಾಟು ನಡೆಸಿತ್ತು. ಭರ್ತಿ 300 ರೂಪಾಯಿಗೆ ಕುಸಿಯಲು ಪಾಕ್ ರೂಪಾಯಿಗೆ ಇನ್ನೊಂದೇ ರೂಪಾಯಿ ಬಾಕಿ ಇದೆ. 2031ಕ್ಕೆ ಅವಧಿ ಮುಗಿಯಲಿರುವ ಡಾಲರ್ ಬಾಂಡ್ಗಳು ನವೆಂಬರ್ನಿಂದ ಈಚೆಗೆ ಅತಿ ಕಡಿಮೆ ಮಟ್ಟಕ್ಕೆ ಕುಸಿದಿವೆ ಮತ್ತು ಅವು ಡಾಲರ್ ಎದುರು 33.10 ಸೆಂಟ್ಸ್ಗಳಷ್ಟು ಸೂಚಕವಾಗಿವೆ.
ರೂಪಾಯಿಯ ಸವಕಳಿಯ ಕಾರಣದಿಂದ ಯಾವುದೇ ಹೊಸ ಬಾಹ್ಯ ಸಾಲಗಳನ್ನು ತೆಗೆದುಕೊಳ್ಳದಿದ್ದರೂ ವಿದೇಶಿ ಸಾಲ ಏರಿಕೆಯಾಗಲು ಕಾರಣವಾಗಿದೆ. ಇದು ಪಾಕಿಸ್ತಾನಕ್ಕೆ ಆಮದುಗಳನ್ನು ಮತ್ತಷ್ಟು ದುಬಾರಿಯನ್ನಾಗಿ ಮಾಡಿದೆ. ಪಾಕಿಸ್ತಾನದಲ್ಲಿ ಏಪ್ರಿಲ್ 2023 ರಲ್ಲಿ 36.4 ಪ್ರತಿಶತಕ್ಕೆ ಹಣದುಬ್ಬರ ಏರಿಕೆಯಾಗಿದ್ದು, ಇದು ಆರು ದಶಕಗಳ ಅತ್ಯಧಿಕವಾಗಿದೆ. ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಬಂಧನದ ನಂತರ ಉಂಟಾದ ರಾಜಕೀಯ ಮತ್ತು ಸಾಮಾಜಿಕ ಅಶಾಂತಿಯಿಂದಾಗಿ ರೂಪಾಯಿ ಮೌಲ್ಯ ಕುಸಿಯುತ್ತಿದೆ ಎಂದು ಹಣಕಾಸು ವಿಶ್ಲೇಷಕರು ನಂಬಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದಲ್ಲದೆ, ರೂಪಾಯಿ ಮೌಲ್ಯವು ಮತ್ತಷ್ಟು ಕುಸಿಯುತ್ತದೆ ಎಂಬ ಊಹಾಪೋಹಗಳ ಮೇಲೆ ರಫ್ತುದಾರರು ಯುಎಸ್ ಕರೆನ್ಸಿಯ ಮಾರಾಟವನ್ನು ನಿಲ್ಲಿಸಿದ್ದರಿಂದ ಡಾಲರ್ ಬೇಡಿಕೆ-ಪೂರೈಕೆ ಅಂತರವು ಸಹ ವಿಸ್ತರಿಸಿದೆ. ಮತ್ತೊಂದೆಡೆ, ಆಮದುದಾರರು ಡಾಲರ್ ಖರೀದಿಸಲು ಮುನ್ನುಗ್ಗುತ್ತಿರುವುದು ಕಂಡು ಬಂದಿದೆ. ಅಂತರ್ ಬ್ಯಾಂಕ್ ಮಾರುಕಟ್ಟೆಯಲ್ಲಿ ವಿದೇಶಿ ಕರೆನ್ಸಿಯ ಬೇಡಿಕೆ ಮತ್ತು ಪೂರೈಕೆಯಲ್ಲಿನ ಈ ಅಂತರವು ರೂಪಾಯಿ ಅಪಮೌಲ್ಯಕ್ಕೆ ಕಾರಣವಾಗಿದೆ. ಮುಂದುವರಿದ ರಾಜಕೀಯ ಅಸ್ಥಿರತೆಯು ಮಾರುಕಟ್ಟೆಯ ಭಾವನೆಗಳ ಮೇಲೆ ಪರಿಣಾಮ ಬೀರಿದ್ದು, ಪಾಕಿಸ್ತಾನದ ರೂಪಾಯಿ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿತು ಎಂದು ಮಾಜಿ ಹಣಕಾಸು ಸಚಿವಾಲಯದ ಸಲಹೆಗಾರ ಖಾಕನ್ ನಜೀಬ್ ಹೇಳಿದ್ದಾರೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ರಾಜಧಾನಿ ಇಸ್ಲಾಮಾಬಾದ್‌ನ ನ್ಯಾಯಾಲಯದಿಂದ ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಒಂದು ದಿನದ ನಂತರ ಪಾಕಿಸ್ತಾನದಾದ್ಯಂತ ಪ್ರತಿಭಟನೆಗಳು ಮತ್ತು ಗಲಭೆಗಳು ಮುಂದುವರೆದಿವೆ. ಇಮ್ರಾನ್ ಖಾನ್ ಬೆಂಬಲಿಗರು ದೇಶಾದ್ಯಂತ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಇಸ್ಲಾಮಾಬಾದ್‌ನ ಪೊಲೀಸ್ ಅತಿಥಿ ಗೃಹಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡ ನ್ಯಾಯಾಲಯದಲ್ಲಿ ವಿಚಾರಣೆ ನಡೆದ ನಂತರ 70 ವರ್ಷ ವಯಸ್ಸಿನ ವಿರೋಧ ಪಕ್ಷದ ನಾಯಕ ಇಮ್ರಾನ್ ಅವರನ್ನು ಬುಧವಾರ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿ ಎಂದು ಪರಿಗಣಿಸಿ ಎಂಟು ದಿನಗಳ ಕಾಲ ಬಂಧನದಲ್ಲಿರಿಸಲಾಗಿದೆ.
ಇಮ್ರಾನ್ ಖಾನ್ ಬಂಧನದ ನಂತರ ಮಂಗಳವಾರ ಪ್ರತಿಭಟನೆಗಳು ನಡೆದಾಗಿನಿಂದ 1,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಲ್ಪಟ್ಟ ಖಾನ್, ದೇಶದ ಅತ್ಯಂತ ಜನಪ್ರಿಯ ವಿರೋಧ ಪಕ್ಷದ ವ್ಯಕ್ತಿಯಾಗಿ ಮುಂದುವರೆದಿದ್ದಾರೆ. ಇವರು ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾದ ಏಳನೇ ಮಾಜಿ ಪ್ರಧಾನಿಯಾಗಿದ್ದಾರೆ.
ಇದನ್ನೂ ಓದಿ : ಪ್ರಸಕ್ತ ರಬಿ ಹಂಗಾಮಿನಲ್ಲಿ 252 ಲಕ್ಷ ಮೆಟ್ರಿಕ್ ಟನ್ ಗೋಧಿ ಸಂಗ್ರಹ