ಇಸ್ಲಾಮಾಬಾದ್: "ಸಂಕಟ ಬಂದಾಗ ವೆಂಕಟರಮಣ" ಎನ್ನುತ್ತೇವೆ. ಹಾಗಂತ ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ ಎಂದು ಕೈಕಟ್ಟಿ ಕೂರುವುದು ಮೂರ್ಖತನ. ಆರ್ಥಿಕವಾಗಿ ಜರ್ಝರಿವಾಗಿರುವ ಪಾಕಿಸ್ತಾನವನ್ನು ಬಲಪಡಿಸುವ ಬದಲಾಗಿ ದೇವರಿದ್ದಾನೆ ಎಂದೇಳಿ ಅಲ್ಲಿನ ಹಣಕಾಸು ಸಚಿವ ಕೈತೊಳೆದುಕೊಂಡಿದ್ದಾನೆ. ಇದು ಸರ್ಕಾರದ "ಉತ್ತರಪೌರುಷ" ಮನೋಭಾವ ತೋರಿಸಿದಂತಾಗಿದೆ.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿದೆ. ಬಿಕ್ಕಟ್ಟಿನಿಂದ ಹೊರಬರಲು ಸರ್ಕಾರ ತಿಣುಕಾಡುತ್ತಿದೆ. ಅಭಿವೃದ್ಧಿಗೆ ತೀವ್ರ ಹಿನ್ನಡೆ ಉಂಟಾಗಿದ್ದು, ಊಟಕ್ಕೂ ಅಲ್ಲಿನ ಜನರು ಪರದಾಡುವಂತಾಗಿದೆ. ಜನರ ರಕ್ಷಣೆಗೆ ಬರಬೇಕಿದ್ದ ಸರ್ಕಾರ ಮಾತ್ರ ಬೆಪ್ಪನ ಹಾಗೆ ನೋಡುತ್ತಾ ಕುಳಿತಿದೆ. ಆಡಳಿತ ಯಂತ್ರ ಕುಸಿದಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ, ಅಲ್ಲಿನ ಹಣಕಾಸು ಸಚಿವ ಐಸಾಕ್ ದಾರ್ ಇನ್ನು ನಮ್ಮನ್ನು ಆ ದೇವರೇ ಕಾಪಾಡಬೇಕು ಎಂದು ಹೇಳಿಕೆ ನೀಡಿದ್ದಾನೆ.
ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಹಣಕಾಸು ದಾರ್, "ಪಾಕಿಸ್ತಾನವನ್ನು ಅಲ್ಲಾಹು ರಚಿಸಿದ್ದಾನೆ. ಅಂದ ಮೇಲೆ ಮೇಲೆ ನಮ್ಮನ್ನು ಆತನೇ ಕಾಪಾಡಲಿದ್ದಾನೆ. ದೇಶದ ಪ್ರಗತಿ ಮತ್ತು ಅಭಿವೃದ್ಧಿಯನ್ನು ದೇವರೇ ಮಾಡುತ್ತಾನೆ" ಎಂದು ತಾವು ಮುಂದೆ ನಿಂತು ಹೊರಬೇಕಾಗಿದ್ದ ಜವಾಬ್ದಾರಿಯನ್ನು ದೇವರ ತಲೆ ಮೇಲೆ ಹಾಕಿ ನುಣುಚಿಕೊಳ್ಳುವ ಮಾತನ್ನಾಡಿದ್ದಾರೆ.
ಮುಂದುವರಿದು ಮಾತನಾಡಿರುವ ಹಣಕಾಸು ಸಚಿವ, ಪ್ರಧಾನಿ ಶಹಬಾಜ್ ಷರೀಫ್ ನೇತೃತ್ವದ ಸರ್ಕಾರ ದೇಶದ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ. ಚುನಾವಣೆಗೂ ಮುನ್ನ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ. ಎಲ್ಲದಕ್ಕೂ ದೇವರಿದ್ದಾನೆ. ಅಲ್ಲಾ ನಮ್ಮನ್ನು ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ.
ದೇಶದ ಇಂದಿನ ದುಸ್ಥಿತಿಗೆ ಹಿಂದಿನ ಸರ್ಕಾರವೇ ಕಾರಣ, 5 ವರ್ಷಗಳ ಹಿಂದೆ ಆರಂಭವಾದ ಈ ಹೀನ ಪರಿಸ್ಥಿತಿಯನ್ನು ಇಂದಿಗೂ ಜನ ಅನುಭವಿಸುವಂತಾಗಿದೆ. ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ 2013-17 ರ ಅವಧಿಯಲ್ಲಿ ಪಾಕಿಸ್ತಾನದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿತ್ತು ಎಂದು ಹಣಕಾಸು ಸಚಿವ ದಾರ್ ಹೇಳಿಕೆ ನೀಡಿದ್ದಾರೆ.
ಪಾಕ್ ರೂಪಾಯಿ ಮೌಲ್ಯ ಪಾತಾಳಕ್ಕೆ: ದೇಶ ದೈನೇಸಿ ಸ್ಥಿತಿಗೆ ತಲುಪಿದ್ದು ಒಂದೆಡೆಯಾದರೆ, ಅದರ ರೂಪಾಯಿ ಮೌಲ್ಯ ಕೂಡ ಪಾತಾಳಕ್ಕೆ ಕುಸಿದಿದೆ. ಶುಕ್ರವಾರ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು 262.6ಕ್ಕೆ ಇಳಿಕೆ ಕಂಡಿದೆ. ಮೊದಲೇ ಇಳಿಕೆಯಲ್ಲಿದ್ದ ರೂಪಾಯಿ ಮೌಲ್ಯ ನಿನ್ನೆ ಒಂದೇ ದಿನದಲ್ಲಿ 7.17 ರೂಪಾಯಿ ಅಥವಾ ಶೇ. 2.73 ರಷ್ಟು ಕುಸಿತ ಕಂಡಿದೆ ಎಂದು ಪಾಕಿಸ್ತಾನದ ಸ್ಟೇಟ್ ಬ್ಯಾಂಕ್ ಹೇಳಿದೆ.
ಪಾಕಿಸ್ತಾನದ ರೂಪಾಯಿ ಇಂಟರ್ಬ್ಯಾಂಕ್ನಲ್ಲಿ ಗುರುವಾರವಷ್ಟೇ 34 ರೂಪಾಯಿಗಳಷ್ಟು ಅಪಮೌಲ್ಯವಾಗಿತ್ತು. 1999 ರಿಂದ ಹೊಸ ವಿನಿಮಯ ದರ ವ್ಯವಸ್ಥೆ ಶುರುವಾದಾಗಿನಿಂದ ಅತಿದೊಡ್ಡ ಅಪಮೌಲ್ಯವಾಗಿದೆ.
ಭಾರತ ಪಾಕ್ ಮಧ್ಯೆ ಹಿಂಬಾಗಿಲ ಚರ್ಚೆ ಇಲ್ಲ: ಇಸ್ಲಾಮಾಬಾದ್ ಮತ್ತು ನವದೆಹಲಿ ನಡುವೆ ಯಾವುದೇ ಹಿಂಬಾಗಿಲ ಚರ್ಚೆಗಳು ನಡೆಯುತ್ತಿಲ್ಲ ಎಂದು ಪಾಕಿಸ್ತಾನ ಗುರುವಾರ ಹೇಳಿದೆ. ಸದ್ಯ ಅಂತಹ ಯಾವುದೇ ವಿಷಯಗಳು ನಡೆಯುತ್ತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹಿನಾ ರಬ್ಬಾನಿ ಖಾರ್ ಸಂಸತ್ತಿನ ಮೇಲ್ಮನೆ ಸೆನೆಟ್‌ಗೆ ತಿಳಿಸಿದ್ದರು.
ಫಲಿತಾಂಶಗಳು ಬರುವ ಸಾಧ್ಯತೆಗಳಿರುವಾಗ ಹಿಂಬಾಗಿಲ ರಾಜತಾಂತ್ರಿಕತೆಯು ಆದ್ಯತೆಯಾಗಿರುತ್ತದೆ ಎಂದು ಅವರು ಹೇಳಿದರು. ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಕೂಡ ರಬ್ಬಾನಿ ಅವರ ಮಾತಿಗೆ ದನಿಗೂಡಿಸಿದ್ದು, ಭಾರತದೊಂದಿಗೆ ಯಾವುದೇ ರಹಸ್ಯ ರಾಜತಾಂತ್ರಿಕ ಸಂವಾದಗಳು ನಡೆಯುತ್ತಿಲ್ಲ ಎಂದಿದ್ದರು.