ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರ ಅಧಿಕಾರಾವಧಿ ಇನ್ನೇನು ಎರಡು ವಾರಗಳಲ್ಲಿ ಕೊನೆಗೊಳ್ಳಲಿದೆ. ಈ ನಡುವೆ ಹೊಸದೊಂದು ಸುದ್ದಿ ಹೊರಬಿದ್ದಿದ್ದು, ಅದರ ಅನುಸಾರ ಕಳೆದ ಆರು ವರ್ಷಗಳಲ್ಲಿ ಅವರ ಕುಟುಂಬದ ಸದಸ್ಯರ ಸಂಪತ್ತಿನಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ.
ಬಾಜ್ವಾ ಕುಟುಂಬ ಸದಸ್ಯರು ಕೆಲವೇ ವರ್ಷಗಳಲ್ಲಿ ಹೊಸ ಉದ್ಯಮ ಆರಂಭಿಸಿ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಫಾರ್ಮ್ ಹೌಸ್, ವಿದೇಶಿ ಆಸ್ತಿ ಖರೀದಿ ಸೇರಿದಂತೆ ಈ ಪ್ರಕ್ರಿಯೆಯಲ್ಲಿ ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ ಎಂದು ಪಾಕಿಸ್ತಾನದ ಪತ್ರಕರ್ತ ಅಹ್ಮದ್ ನೂರಾನಿ ಬಹಿರಂಗ ಪಡಿಸಿದ್ದಾರೆ.
ಈ ತನಿಖಾ ವರದಿಯಲ್ಲಿ, ಬಾಜ್ವಾ ಅವರ ಹೆಂಡತಿ ಆಯೇಷಾ ಅಮ್ಜಾದ್ ಸೊಸೆ ಮಹ್ನೂರ್ ಸಬಿರ್ ಮತ್ತು ಇತರೆ ಕುಟುಂಬ ಸದಸ್ಯರು ಆರ್ಥಿಕ ವ್ಯವಹಾರದಲ್ಲಿ ತೊಡಗಿರುವ ಸಾಕಷ್ಟು ದಾಖಲೆಗಳನ್ನು ನೀಡಲಾಗಿದೆ. ಆರು ವರ್ಷಗಳೊಳಗೆ ಈ ಎರಡು ಕುಟುಂಬದವರೂ ಕೋಟ್ಯಧಿಪತಿಗಳಾಗಿದ್ದಾರೆ. ಅಂತಾರಾಷ್ಟ್ರೀಯ ವ್ಯವಹಾರ ಆರಂಭಿಸಿ, ಅನೇಕ ವಿದೇಶಿ ಆಸ್ತಿ ಖರೀದಿ ಮಾಡಿದ್ದಾರೆ. ಬಂಡವಾಳವನ್ನು ವಿದೇಶಗಳಲ್ಲಿ ಹೂಡಿದ್ದು, ವಾಣಿಜ್ಯ ಕಟ್ಟಡ ಮತ್ತು ಆಸ್ತಿಗಳ ಒಡೆಯರಾಗಿದ್ದಾರೆ.
ಇಸ್ಲಾಮಾಬಾದ್ ಮತ್ತು ಕರಾಚಿಯಲ್ಲಿ ದೊಡ್ಡದಾದ ಫಾರ್ಮ್ ಹೌಸ್ ಹೊಂದಿದ್ದು, ಲಾಹೋರ್ನಲ್ಲಿ ಭಾರಿ ದೊಡ್ಡ ರಿಯಲ್ ಎಸ್ಟೇಟ್ ಉದ್ಯಮ ಹೊಂದಿದ್ದಾರೆ. ಕಳೆದ ಆರು ವರ್ಷಗಳೊಳಗೆ ಪಾಕಿಸ್ತಾನದ ಒಳಗೆ ಮತ್ತು ಹೊರಗೆ ಅವರು ಹೊಂದಿರುವ ಆಸ್ತಿಯ ಮೊತ್ತ ಕೋಟ್ಯಂತರ ಮೌಲ್ಯದ್ದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಹಣವಿಲ್ಲದೆ ತಾಯಿಯ ಅಂತ್ಯಸಂಸ್ಕಾರಕ್ಕೆ ಬರಲಾಗದ ಮಗಳು: ವಿಡಿಯೊ ಕಾಲ್ನಲ್ಲೇ ಅಂತಿಮ ದರ್ಶನ!