ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ತಮ್ಮ ಆಡಳಿತದಲ್ಲಿ ಇದುವರೆಗೆ 130ಕ್ಕೂ ಹೆಚ್ಚು ಭಾರತೀಯ - ಅಮೆರಿಕನ್ನರನ್ನು ಪ್ರಮುಖ ಸ್ಥಾನಗಳಿಗೆ ನೇಮಿಸಿದ್ದಾರೆ. ಇದು ಅಮೆರಿಕದ ಜನಸಂಖ್ಯೆಯ ಶೇ. 1ರಷ್ಟು ಇರುವುದರಿಂದ ಉತ್ತಮ ಪ್ರಾತಿನಿಧ್ಯವಾಗಿದೆ. ಇದರಿಂದ ಅವರು 2020ರಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಸಮುದಾಯಕ್ಕೆ ನೀಡಿದ ಭರವಸೆಯನ್ನು ಪೂರೈಸಿದ್ದಾರೆ.
ದಾಖಲೆ ಮುರಿದ ಬೈಡನ್: 80ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರನ್ನು ನೇಮಕ ಮಾಡಿದ್ದ ತನ್ನ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಬರಾಕ್ ಒಬಾಮಾ ಅವರ ದಾಖಲೆಯನ್ನು ಬೈಡನ್ ಮುರಿದಿದ್ದಾರೆ. ಬರಾಕ್ ಒಬಾಮ ಅವರು 8 ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ 60ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರನ್ನು ಪ್ರಮುಖ ಸ್ಥಾನಗಳಿಗೆ ನೇಮಕ ಮಾಡಿದ್ದರು.
ಅಮೆರಿಕ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ನಾಲ್ವರು ಸೇರಿದಂತೆ ವಿವಿಧ ರಾಜ್ಯ ಮತ್ತು ಫೆಡರಲ್ ಹಂತಗಳಲ್ಲಿ 40ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರು ಚುನಾಯಿತರಾಗಿದ್ದಾರೆ. ರೊನಾಲ್ಡ್ ರೇಗನ್ ಅವರ ಅವಧಿಯಲ್ಲಿ ಮೊದಲ ಬಾರಿಗೆ ಅಧ್ಯಕ್ಷೀಯ ನೇಮಕಾತಿಯನ್ನು ಮಾಡಲಾಯಿತು. ಈ ಬಾರಿ ಬೈಡನ್ ಸರ್ಕಾರದ ಬಹುತೇಕ ಎಲ್ಲಾ ಇಲಾಖೆಗಳು ಮತ್ತು ಏಜೆನ್ಸಿಗಳಿಗೆ ಭಾರತೀಯ-ಅಮೆರಿಕನ್ನರನ್ನು ನೇಮಿಸಿದ್ದಾರೆ.
"ಭಾರತೀಯ-ಅಮೆರಿಕನ್ನರು ಸೇವಾ (ಸೇವೆ) ಪ್ರಜ್ಞೆ ಹೊಂದಿದ್ದಾರೆ. ಇದು ಖಾಸಗಿ ವಲಯದ ಬದಲಿಗೆ ಸಾರ್ವಜನಿಕ ಸೇವೆಯಲ್ಲಿ ಸ್ಥಾನಗಳನ್ನು ಪಡೆಯಲು ಸಹಾಯಕ" ಎಂದು ಸಿಲಿಕಾನ್ ವ್ಯಾಲಿ ಮೂಲದ ಉದ್ಯಮಿ, ಲೋಕೋಪಕಾರಿ ಮತ್ತು ಸಾಹಸೋದ್ಯಮ ಬಂಡವಾಳಗಾರ ಎಂ.ಆರ್.ರಂಗಸ್ವಾಮಿ ಹೇಳಿದ್ದಾರೆ. ರಂಗಸ್ವಾಮಿ ಅವರು ಇಂಡಿಯಾಸ್ಪೋರಾದ ಸಂಸ್ಥಾಪಕರು ಮತ್ತು ಮುಖ್ಯಸ್ಥರು.
ಸೆನೆಟರ್ ಆದಗಿನಿಂದಲೂ ಸಮುದಾಯದೊಂದಿಗೆ ನಿಕಟ ಸಂಬಂಧವನ್ನು ಉಳಿಸಿಕೊಂಡಿರುವ ಬೈಡನ್ ಅವರು ತಮ್ಮ ಭಾರತೀಯ ಸಂಬಂಧದ ಬಗ್ಗೆ ಆಗಾಗ್ಗೆ ಮಾತನಾಡುತ್ತಾರೆ. ಅವರು 2020ರಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದರು.
ಇದನ್ನೂ ಓದಿ: ಹೊಸ ಭಾಷ್ಯ ಬರೆಯಲು ಸಜ್ಜಾದ ಕಮಲಾ ಹ್ಯಾರಿಸ್.. ಶ್ವೇತಭವನದಲ್ಲಿನ್ಮೇಲೆ 'ಕಪ್ಪು' ಬಂಗಾರ!
ಯುವ ವೇದಾಂತ್ ಪಟೇಲ್ ಈಗ ರಾಜ್ಯ ಇಲಾಖೆಯಲ್ಲಿ ಉಪವಕ್ತಾರರಾಗಿದ್ದರೆ, ಗರಿಮಾ ವರ್ಮಾ ಉಪಾಧ್ಯಕ್ಷರ ಕಚೇರಿಯಲ್ಲಿ ಡಿಜಿಟಲ್ ನಿರ್ದೇಶಕರಾಗಿದ್ದಾರೆ. ಅಲ್ಲದೇ ಬೈಡನ್ ಅವರು ಹಲವಾರು ಭಾರತೀಯ-ಅಮೆರಿಕನ್ನರನ್ನು ಪ್ರಮುಖ ರಾಯಭಾರಿ ಸ್ಥಾನಗಳಿಗೆ ನಾಮನಿರ್ದೇಶನ ಮಾಡಿದ್ದಾರೆ. ಇಂಡಿಯಾಸ್ಪೊರಾ ಸಿದ್ಧಪಡಿಸಿದ ಪಟ್ಟಿಯ ಪ್ರಕಾರ, 40 ಕ್ಕೂ ಹೆಚ್ಚು ಭಾರತೀಯ - ಅಮೆರಿಕನ್ನರು ದೇಶಾದ್ಯಂತ ವಿವಿಧ ಕಚೇರಿಗಳಿಗೆ ಆಯ್ಕೆಯಾಗಿದ್ದಾರೆ. ನಾಲ್ವರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿದ್ದಾರೆ. ಅವರುಗಳೆಂದರೆ..
- ಡಾ. ಅಮಿ ಬೇರಾ
- ರೋ ಖನ್ನಾ
- ರಾಜಾ ಕೃಷ್ಣಮೂರ್ತಿ
- ಪ್ರಮೀಳಾ ಜಯಪಾಲ್ ಸೇರಿದ್ದಾರೆ.
ಭಾರತೀಯ - ಅಮೆರಿಕನ್ನರಾದ ಗೂಗಲ್‌ನ ಸುಂದರ್ ಪಿಚೈ ಮತ್ತು ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ ನೇತೃತ್ವದಲ್ಲಿ, 24ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರು ಯುಎಸ್ ಕಂಪನಿಗಳ ಮುಖ್ಯಸ್ಥರಾಗಿದ್ದಾರೆ. ಇವರಲ್ಲಿ ಅಡೋಬ್‌ನ ಶಾಂತನು ನಾರಾಯಣ್, ಜನರಲ್ ಅಟಾಮಿಕ್ಸ್‌ನ ವಿವೇಕ್ ಲಾಲ್, ಡೆಲಾಯ್ಟ್‌ನ ಪುನಿತ್ ರೆಂಜನ್, ಫೆಡೆಕ್ಸ್‌ನ ರಾಜ್ ಸುಬ್ರಮಣ್ಯಂ ಸೇರಿದ್ದಾರೆ.