ಕೀವ್ : ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಆರಂಭವಾಗಿನಿಂದ ಈವರೆಗೆ 11ಮಿಲಿಯನ್‌ಗಿಂತ ಹೆಚ್ಚು ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ ಎಂದು ಯುಎನ್ ಹೇಳಿದೆ. ಇತ್ತೀಚಿನ ಯುಎನ್ ಅಂಕಿ-ಅಂಶಗಳ ಪ್ರಕಾರ ಫೆಬ್ರವರಿ 24ರಂದು ರಷ್ಯಾ-ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾದ ನಂತರ ಉಕ್ರೇನ್‌ನಿಂದ 5.1 ಮಿಲಿಯನ್ ಜನರು ನೆರೆಯ ದೇಶಗಳಿಗೆ ತೆರಳಿದರೆ, ಇನ್ನೂ 6.48 ಮಿಲಿಯನ್ ಜನರು ಯುದ್ಧ ಪೀಡಿತ ರಾಷ್ಟ್ರದೊಳಗೆ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಬಹಿರಂಗಪಡಿಸಿದೆ.
5.1 ಮಿಲಿಯನ್ ಜನರಲ್ಲಿ ಪೋಲೆಂಡ್ಗೆ 2,867,241 ನಿರಾಶ್ರಿತರು ತೆರಳಿದ್ದಾರೆ. ಉಳಿದಂತೆ ರೊಮೇನಿಯಾಗೆ 769,616, ರಷ್ಯಾ 578,255, ಹಂಗೇರಿ 480,974, ಮೊಲ್ಡೊವಾ 430,170, ಸ್ಲೋವಾಕಿಯಾ 349,286 ಮತ್ತು ಬೆಲಾರಸ್ 3,900 ಮಂದಿ ಪಲಾಯಾನ ಮಾಡಿದ್ದಾರೆ. ಏಪ್ರಿಲ್ 21ರ ಹೊತ್ತಿಗೆ ಜೆಕ್ ಗಣರಾಜ್ಯವು ಉಕ್ರೇನಿಯನ್ ನಿರಾಶ್ರಿತರಿಗೆ 304,039 ತುರ್ತು ವೀಸಾಗಳನ್ನು ನೀಡಿದೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ 102 ನಾಗರಿಕರು ಸಾವು ; 5 ಲಕ್ಷ ನಿರಾಶ್ರಿತರು ಉಕ್ರೇನ್‌ನಿಂದ ಪಲಾಯನ : ವಿಶ್ವಸಂಸ್ಥೆ
ಸ್ಥಳಾಂತರಗೊಂಡವರಲ್ಲಿ ಹೆಚ್ಚಿನವರು ದುರ್ಬಲರು, ಗರ್ಭಿಣಿಯರು, ಬಾಣಂತಿಯರು, ವಯಸ್ಸಾದವರು, ವಿಕಲಾಂಗರು, ದೀರ್ಘಕಾಲದ ಕಾಯಿಲೆಯಿಂದ ಬಳಲುತಿದ್ದವರು ಸೇರಿದ್ದಾರೆ. ಸಮೀಕ್ಷೆಯ ಪ್ರಕಾರ, ಆಂತರಿಕವಾಗಿ ಸ್ಥಳಾಂತರಿಸಲ್ಪಟ್ಟ ಜನರಲ್ಲಿ ಶೇ. 53ಕ್ಕಿಂತ ಹೆಚ್ಚು ಮಹಿಳೆಯರು ಸೇರಿದ್ದಾರೆ.
ಯುರೋಪಿಯನ್ ಯೂನಿಯನ್ (ಇಯು) ಉಕ್ರೇನಿಯನ್ ನಿರಾಶ್ರಿತರಿಗೆ ತನ್ನ 27 ಸದಸ್ಯ ರಾಷ್ಟ್ರಗಳಲ್ಲಿ ಮೂರು ವರ್ಷಗಳವರೆಗೆ ಉಳಿಯಲು ಮತ್ತು ಕೆಲಸ ಮಾಡುವ ಹಕ್ಕನ್ನು ನೀಡಿದೆ ಎಂದು ಬಿಬಿಸಿ ವರದಿ ಮಾಡಿದೆ. ಅವರು ಸಾಮಾಜಿಕ ಕಲ್ಯಾಣ ಮತ್ತು ವಸತಿ, ವೈದ್ಯಕೀಯ ಚಿಕಿತ್ಸೆ ಮತ್ತು ಶಾಲೆಗಳಿಗೆ ಪ್ರವೇಶ ಪಡೆಯಬಹುದು ಎಂದು ತಿಳಿಸಲಾಗಿದೆ. ಇನ್ನು ಯುಕೆ ಉಕ್ರೇನಿಯನ್ನರಿಗೆ ಕುಟುಂಬ ವೀಸಾ ಯೋಜನೆಯನ್ನು ಪ್ರಾರಂಭಿಸಿದೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ: ಖಾರ್ಕಿವ್ ನಗರದಿಂದ ಮಹಾ ಪಲಾಯನ