ಸಿಯೋಲ್(ದಕ್ಷಿಣ ಕೊರಿಯಾ): ಕೋವಿಡ್ ಸೋಂಕಿತರ ಸಂಖ್ಯೆಯ ವಿಚಾರವಾಗಿ ಅತ್ಯಂತ ಅಚ್ಚರಿಯ ಮಾಹಿತಿ ನೀಡುವ ಉತ್ತರ ಕೊರಿಯಾ ಮತ್ತೊಂದು ಹೊಸ ಸುದ್ದಿಯನ್ನು ಬಹಿರಂಗಪಡಿಸಿದೆ. ಇದೇ ಮೊದಲ ಬಾರಿಗೆ ಕೋವಿಡ್ ವೈರಸ್ನ ರೂಪಾಂತರಿ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ ಎಂದು ಉತ್ತರ ಕೊರಿಯಾ ಸರ್ಕಾರದ ಸುದ್ದಿಸಂಸ್ಥೆ ವರದಿ ಮಾಡಿದೆ. ಒಮಿಕ್ರಾನ್ ಕಾಣಿಸಿಕೊಂಡ ಕಾರಣ ದೇಶದಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾಂಕ್ರಾಮಿಕವನ್ನು ತೊಡೆದು ಹಾಕಲು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪ್ರತಿಜ್ಞೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಒಮಿಕ್ರಾನ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಿಮ್ ಜಾಂಗ್ ಉನ್ ಸೇರಿದಂತೆ ಉನ್ನತಾಧಿಕಾರಿಗಳು ಪಾಲಿಟ್‌ಬ್ಯೂರೊ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ವೈರಸ್ ಕಾಣಿಸಿಕೊಂಡ ಪ್ರದೇಶಗಳನ್ನು ಎರಡು ದಿನಗಳ ಕಾಲ ಲಾಕ್ಡೌನ್ ಮಾಡಲಾಗುತ್ತದೆ ಎಂದು ವರದಿಯಾಗಿದೆ.
ಲಾಕ್ಡೌನ್ ಯಾವಾಗ ಕೊನೆಗೊಳ್ಳುತ್ತದೆ ಎಂಬ ಅರಿವಿಲ್ಲದ ಜನರು ಭಯದಿಂದ ಅನೇಕ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಒಮಿಕ್ರಾನ್ ವೈರಸ್ ಪತ್ತೆಯಾಗುವ ಮೂಲಕ ಉತ್ತರ ಕೊರಿಯಾ ಕೋವಿಡ್ ವೈರಸ್ ಮುಕ್ತ ಎಂಬ ಪಟ್ಟದಿಂದ ಕೆಳಗಿಳಿದಿದೆ ಎಂದು ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇದನ್ನೂ ಓದಿ: ಮೂರ್ಛೆ ಹೋದ ಪೈಲಟ್, ವಿಮಾನವನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡಿದ ಪ್ರಯಾಣಿಕ!