ಇಸ್ಲಾಮಾಬಾದ್: ಫಲಪ್ರದ, ರಚನಾತ್ಮಕ ಮಾತುಕತೆಗೆ ಸೂಕ್ತ ವಾತಾವರಣ ಇಲ್ಲದ ಕಾರಣ ಭಾರತದೊಂದಿಗೆ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಪಾಕಿಸ್ತಾನ ಹೇಳಿದೆ. ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರ ಉರುಳಿದ ಬಳಿಕ ಷರೀಫ್ ನೇತೃತ್ವದ ಆಡಳಿತ ರಚನೆಯಾಗಿರುವ ಮಧ್ಯೆಯೇ ಭಾರತ- ಪಾಕಿಸ್ತಾನದ ಸಂಬಂಧದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಕಚೇರಿಯ ವಕ್ತಾರ ಅಸಿಮ್ ಇಫ್ತಿಕರ್, ಭಾರತದೊಂದಿಗೆ ವ್ಯಾಪಾರ, ವಹಿವಾಟು ಯಥಾವತ್ತಾಗಿ ನಡೆಯಲಿದೆ. ನೆರೆ ರಾಷ್ಟ್ರದ ಜೊತೆಗಿನ ಉತ್ತಮ ಸಂಬಂಧವನ್ನು ಉಳಿಸಿಕೊಂಡು ಹೋಗಲಾಗುವುದು ಎಂದರು.
ಭಾರತದೊಂದಿಗಿನ ರಾಷ್ಟ್ರೀಯ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಪಡಿಸುವ ನೀತಿಯನ್ನು ಎಲ್ಲ ಸರ್ಕಾರಗಳು ಅನುಸರಿಸಿವೆ. ರಾಜತಾಂತ್ರಿಕತೆಯ ಬಾಗಿಲನ್ನು ಎಂದಿಗೂ ಮುಚ್ಚುವುದಿಲ್ಲ. ಆದರೆ, ಸದ್ಯಕ್ಕೆ ಉಭಯ ರಾಷ್ಟ್ರಗಳ ಮಧ್ಯೆ ಶಾಂತಿ ಸಭೆ ನಡೆಸುವ ಪರವಾದ ವಾತಾವರಣವಿಲ್ಲ. ಹೀಗಾಗಿ ಮಾತುಕತೆಗಳು ನಿಂತು ಹೋಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿನ ರಾಯಭಾಗಿ ಕಚೇರಿಯಲ್ಲಿ ವ್ಯಾಪಾರಿ ಮುಖ್ಯಸ್ಥನನ್ನು ಪಾಕಿಸ್ತಾನ ನೇಮಿಸಿದ್ದು, ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಉಭಯ ರಾಷ್ಟ್ರಗಳ ಮಧ್ಯೆ ಶಾಂತಿ ಮಾತುಕತೆಗಳು ನಡೆಯಲಿವೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.