ಇಸ್ಲಾಮಾಬಾದ್(ಪಾಕಿಸ್ತಾನ): ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅಲ್ಲಿನ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿದೆ ಎಂದು ಸ್ಪೀಕರ್ ಖಾಸಿಂ ಸೂರಿ ತಿಳಿಸಿದ್ದಾರೆ. ಪ್ರತಿಪಕ್ಷದ ನಾಯಕ ಶೆಹಬಾಜ್ ಷರೀಫ್ ಅವರು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸುವ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಮಾರ್ಚ್ 31ರಿಂದ ಇದರ ಮೇಲಿನ ಚರ್ಚೆ ಆರಂಭಗೊಳ್ಳಲಿದೆ.
ಕಳೆದ ನಾಲ್ಕು ವರ್ಷಗಳಿಂದ ಪಾಕಿಸ್ತಾನದ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಇಮ್ರಾನ್ ಖಾನ್ ಮೇಲೆ ಭ್ರಷ್ಟಾಚಾರ, ವಿದೇಶಿ ದೇಣಿಗೆ ದುರುಪಯೋಗ ಸೇರಿದಂತೆ ಅನೇಕ ರೀತಿಯ ಗಂಭೀರ ಆರೋಪಗಳು ಕೇಳಿ ಬಂದಿದೆ.
2018ರಲ್ಲಿ ಅಧಿಕಾರಕ್ಕೆ ಬಂದಿರುವ ಇಮ್ರಾನ್ ಖಾನ್ಗೆ ತಮ್ಮ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಅನೇಕ ಮುಖಂಡರು ತಿರುಗಿ ಬಿದ್ದಿದ್ದು, ಹೀಗಾಗಿ ರಾಜಕೀಯ ಅಸ್ಥಿರತೆ ಎದುರಿಸುತ್ತಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಲು ಮುಂದಾಗಿರುವ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿವೆ.
ಇದನ್ನೂ ಓದಿ: ಸರ್ಕಾರವನ್ನು ಉರುಳಿಸುವ ಷಡ್ಯಂತ್ರದಲ್ಲಿ ವಿದೇಶಿ ಶಕ್ತಿಗಳ ಕೈವಾಡ: ಪಾಕ್ ಪ್ರಧಾನಿ ಇಮ್ರಾನ್ ಖಾನ್
342 ಸದಸ್ಯ ಬಲದ ಪಾಕಿಸ್ತಾನದ ಸಂಸತ್ತಿನಲ್ಲಿ ಪಿಟಿಐ 155 ಸ್ಥಾನ ಹೊಂದಿದ್ದು, 2018ರಲ್ಲಿ ಮಿತ್ರ ಪಕ್ಷಗಳು ಬೆಂಬಲ ಘೋಷಣೆ ಮಾಡಿದ್ದರಿಂದ 178 ಸ್ಥಾನ ಪಡೆದುಕೊಂಡಿದ್ದ ಇಮ್ರಾನ್ ಖಾನ್ ಪ್ರಧಾನಿ ಹುದ್ದೆಗೇರಿದ್ದರು. ಇದಾದ ಬಳಿಕ ಸ್ವಪಕ್ಷೀಯರು ಹಾಗೂ ಮಿತ್ರಪಕ್ಷಗಳು ಅವರ ವಿರುದ್ಧ ತಿರುಗಿಬಿದ್ದಿದ್ದು, ಕೆಲವೊಂದು ಮಿತ್ರಪಕ್ಷಗಳು ಅವರಿಗೆ ನೀಡಿರುವ ಬೆಂಬಲ ವಾಪಸ್ ಪಡೆದುಕೊಂಡಿವೆ. ಹೀಗಾಗಿ ಪ್ರಧಾನಿ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿ ಇಮ್ರಾನ್ ಖಾನ್ ಇದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ಇಮ್ರಾನ್ ಖಾನ್, ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ಮೂಲಕ ಸರ್ಕಾರವನ್ನು ಪತನಗೊಳಿಸಲು ವಿದೇಶಿ ಶಕ್ತಿಗಳು ಇದರಲ್ಲಿ ಭಾಗಿಯಾಗಿದ್ದು, ನಮ್ಮ ಮೇಲೆ ಒತ್ತಡ ಹೇರಲು ಯಾವ ಯಾವ ಸ್ಥಳಗಳಿಂದ ಪ್ರಯತ್ನಗಳು ನಡೆಯುತ್ತಿವೆ ಎಂಬುದು ತಿಳಿದಿದೆ. ನಮಗೆ ಬೆದರಿಕೆ ಹಾಕಲಾಗಿದೆ. ನಾವು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.