ಜೆರುಸಲೇಂ: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಕದನ ವಿರಾಮದ ಸಮಯದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ಗಾಜಾ ಪಟ್ಟಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಇಸ್ರೇಲಿ ಸೈನಿಕರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ಈ ಕುರಿತು ಇಸ್ರೇಲ್ ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.
ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಪ್ರಧಾನಿ ಕಚೇರಿಯಿಂದ ಹೊರಡಿಸಲಾದ ಹೇಳಿಕೆಯಂತೆ, ನೆತನ್ಯಾಹು ಅವರು ಸೈನಿಕರು ಮತ್ತು ಕಮಾಂಡರ್‌ಗಳೊಂದಿಗೆ ಮಾತನಾಡಿದ್ದಾರೆ. ಹಮಾಸ್‌ನ ಸುರಂಗಗಳ ಪೈಕಿ ಒಂದಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಯುದ್ಧದ ಎಲ್ಲಾ ಗುರಿಗಳನ್ನು ಸಾಧಿಸುವ ಶಕ್ತಿ, ಇಚ್ಛೆ ಮತ್ತು ನಿರ್ಣಯವನ್ನು ನಾವು ಹೊಂದಿದ್ದು, ಅದನ್ನು ಸಾಧಿಸಿಯೇ ತೀರುತ್ತೇವೆ. ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಕೊನೆಯವರೆಗೂ ಹೋರಾಟ ಮುಂದುವರೆಸೋಣ ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ.
ಸೈನಿಕರಿಗೆ ಕಿವಿಮಾತು ಹೇಳಿದ ನೆತನ್ಯಾಹು, "ನಾನು ನಮ್ಮ ವೀರ ಸೈನಿಕರೊಂದಿಗೆ ಗಾಜಾ ಪಟ್ಟಿಯಲ್ಲಿದ್ದೇವೆ. ನಮ್ಮ ಒತ್ತೆಯಾಳುಗಳನ್ನು ಹಿಂದಿರುಗಿಸಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅವರೆಲ್ಲರನ್ನೂ ವಾಪಸ್ ತವರಿಗೆ ಕರೆತರುತ್ತೇವೆ. ಈ ಯುದ್ಧದಲ್ಲಿ ನಮಗೆ ಮೂರು ಗುರಿಗಳಿವೆ, ಮೊದಲನೇಯದು ಹಮಾಸ್ ಅನ್ನು ತೊಡೆದುಹಾಕುವುದು, ಎರಡನೇಯದು ನಮ್ಮ ಎಲ್ಲಾ ಒತ್ತೆಯಾಳುಗಳನ್ನು ವಾಪಸ್ ಹಿಂತಿರುಗಿಸುವುದು ಮತ್ತು ಕೊನೆಯದಾಗಿ ಗಾಜಾವು ಇಸ್ರೇಲ್ ರಾಜ್ಯಕ್ಕೆ ಬೆದರಿಕೆ ಹಾಕದಿರುವುದನ್ನು ಖಚಿತಪಡಿಸಿಕೊಳ್ಳಬೇಕು" ಎಂದರು.
ಇದನ್ನೂ ಓದಿ: ಇಸ್ರೇಲ್ ಪರ ಗೂಢಚಾರಿಕೆ ಆರೋಪ ; ವೆಸ್ಟ್ಬ್ಯಾಂಕ್ನಲ್ಲಿ ಇಬ್ಬರು ಶಂಕಿತರ ಕೊಲೆ
ಇಸ್ರೇಲಿ ಪ್ರಧಾನಮಂತ್ರಿ ಜೊತೆಯಲ್ಲಿ ಅವರ ಚೀಫ್ ಆಫ್ ಸ್ಟಾಫ್ ಟ್ಜಾಚಿ ಬ್ರೇವರ್‌ಮನ್, ರಾಷ್ಟ್ರೀಯ ಭದ್ರತಾ ಮಂಡಳಿಯ ನಿರ್ದೇಶಕ ತ್ಜಾಚಿ ಹನೆಗ್ಬಿ, ಮಿಲಿಟರಿ ಕಾರ್ಯದರ್ಶಿ ಮೇಜರ್-ಜನರಲ್ ಅವಿ ಗಿಲ್ ಮತ್ತು ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ಉಪ ಮುಖ್ಯಸ್ಥ ಮೇಜರ್ ಜನರಲ್ ಅಮೀರ್ ಬರಮ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಹಮಾಸ್-ಇಸ್ರೇಲ್ ಕದನ ವಿರಾಮ ಒಪ್ಪಂದ : ಮತ್ತೆ 17 ಒತ್ತೆಯಾಳುಗಳ ಬಿಡುಗಡೆ, ಈಜಿಪ್ಟ್‌ಗೆ ರವಾನೆ
ಕತಾರ್, ಈಜಿಪ್ಟ್ ಮತ್ತು ಯುನೈಟೆಡ್ ಸ್ಟೇಟ್ಸ್ ಮಧ್ಯಸ್ಥಿಕೆಯಲ್ಲಿ ತಾತ್ಕಾಲಿಕ ನಾಲ್ಕು ದಿನಗಳ "ವಿರಾಮ"ದಲ್ಲಿ ಇಸ್ರೇಲ್ ಮತ್ತು ಹಮಾಸ್ ಒತ್ತೆಯಾಳುಗಳನ್ನು ವಿನಿಮಯ ಮಾಡಿಕೊಳ್ಳುತ್ತಿವೆ. ಈ ಮಧ್ಯೆ, ಕದನ ವಿರಾಮ ಒಪ್ಪಂದದ ಭಾಗವಾಗಿ ಹಮಾಸ್ ಉಗ್ರರು ಭಾನುವಾರ 14 ಇಸ್ರೇಲಿಗಳು ಸೇರಿದಂತೆ ಒಟ್ಟು 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರು. ಹೀಗಾಗಿ, ಹಮಾಸ್ ಮೂರನೇ ಗುಂಪಿನ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ರೆಡ್ ಕ್ರಾಸ್ ಪ್ರತಿನಿಧಿಗಳು ಬಿಡುಗಡೆಯಾದ ಗುಂಪನ್ನು ಭಾನುವಾರ ತಡರಾತ್ರಿ ಗಾಜಾದಿಂದ ಹೊರಗೆ ಸ್ಥಳಾಂತರಿಸಿದರು. ಕೆಲವನ್ನು ನೇರವಾಗಿ ಇಸ್ರೇಲ್‌ಗೆ ಹಸ್ತಾಂತರಿಸಲಾಯಿತು, ಇತರರನ್ನು ಈಜಿಪ್ಟ್ ಮೂಲಕ ಕಳುಹಿಸಲಾಯಿತು. ಒತ್ತೆಯಾಳುಗಳಲ್ಲಿ ಒಬ್ಬನನ್ನು ನೇರವಾಗಿ ಇಸ್ರೇಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಮಿಲಿಟರಿ ಹೇಳಿದೆ.
ಇದನ್ನೂ ಓದಿ: ಕದನ ವಿರಾಮದ ನಂತರ ಮತ್ತೆ ಯುದ್ಧ ಆರಂಭಿಸುತ್ತೇವೆ ; ಇಸ್ರೇಲ್ ಸೇನಾಪಡೆ ಮುಖ್ಯಸ್ಥ