ಕಠ್ಮಂಡು(ನೇಪಾಳ): ನೇಪಾಳ ಸುಪ್ರೀಂ ಕೋರ್ಟ್ ಸಲಿಂಗ ವಿವಾಹವನ್ನು ಕಾನೂನುಬದ್ಧ ಎಂದು ಘೋಷಿಸಿದ ಐದು ತಿಂಗಳ ನಂತರ ದೇಶವು ಬುಧವಾರ ಔಪಚಾರಿಕವಾಗಿ ಅಂತಹ ವಿವಾಹವನ್ನು ನೋಂದಾಯಿಸಲು ಪ್ರಾರಂಭಿಸಿತು. ಅಷ್ಟೇ ಅಲ್ಲ, ನೇಪಾಳ ಸಲಿಂಗ ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿದ ಮೊದಲ ದಕ್ಷಿಣ ಏಷ್ಯಾ ರಾಷ್ಟ್ರವಾಯಿತು.
ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಕೆಲಸ ಮಾಡುವ ಸಂಸ್ಥೆಯಾದ 'ಬ್ಲೂ ಡೈಮಂಡ್ ಸೊಸೈಟಿ' ಅಧ್ಯಕ್ಷ ಸಂಜಿಬ್ ಗುರುಂಗ್ (ಪಿಂಕಿ) ಪ್ರಕಾರ, 35 ವರ್ಷದ ಟ್ರಾನ್ಸ್‌ಜೆಂಡರ್ ಮಾಯಾ ಗುರುಂಗ್ ಮತ್ತು 27 ವರ್ಷದ ಯುವಕ ಸುರೇಂದ್ರ ಪಾಂಡೆ ಕಾನೂನುಬದ್ಧವಾಗಿ ವಿವಾಹವಾದರು. ಈ ವಿವಾಹವನ್ನು ಪಶ್ಚಿಮ ನೇಪಾಳದ ಲಾಮ್‌ಜಂಗ್ ಜಿಲ್ಲೆಯ ಡೋರ್ಡಿ ಗ್ರಾಮೀಣ ಪುರಸಭೆಯಲ್ಲಿ ನೋಂದಾಯಿಸಲಾಗಿದೆ.
2007ರಲ್ಲಿ ಸಲಿಂಗ ವಿವಾಹಕ್ಕೆ ಅನುಮತಿ: 2007ರಲ್ಲಿ ನೇಪಾಳದ ಸುಪ್ರೀಂ ಕೋರ್ಟ್ ಸಲಿಂಗ ವಿವಾಹಕ್ಕೆ ಅನುಮತಿ ನೀಡಿತ್ತು.ದೇಶದ ಸಂವಿಧಾನವು ಲೈಂಗಿಕ ದೃಷ್ಟಿಕೋನದ ಆಧಾರದಡಿ ಯಾವುದೇ ತಾರತಮ್ಯ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತದೆ.
ಗುರುಂಗ್ ಸೇರಿದಂತೆ ಅನೇಕ ಜನರು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ಪರಿಗಣಿಸಿ, ನೇಪಾಳದಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲು ಸುಪ್ರೀಂ ಕೋರ್ಟ್ ಕೆಲ ತಿಂಗಳ ಹಿಂದೆ ಮಧ್ಯಂತರ ಆದೇಶ ಹೊರಡಿಸಿತ್ತು. ಆದರೆ, ಸಲಿಂಗ ವಿವಾಹವನ್ನು ತಾತ್ಕಾಲಿಕವಾಗಿ ನೋಂದಾಯಿಸುವ ಐತಿಹಾಸಿಕ ಆದೇಶದ ಹೊರತಾಗಿಯೂ, ನಾಲ್ಕು ತಿಂಗಳ ಹಿಂದೆ ಕಠ್ಮಂಡು ಜಿಲ್ಲಾ ನ್ಯಾಯಾಲಯವು ಅಗತ್ಯ ಕಾನೂನುಗಳ ಕೊರತೆಯನ್ನು ಉಲ್ಲೇಖಿಸಿ ಈ ಕ್ರಮವನ್ನು ತಿರಸ್ಕರಿಸಿತ್ತು. ಅದೇ ಸಮಯದಲ್ಲಿ ಸುರೇಂದ್ರ ಪಾಂಡೆ ಮತ್ತು ಮಾಯಾ ಅವರ ವಿವಾಹದ ಅರ್ಜಿಯನ್ನು ತಿರಸ್ಕರಿಸಲಾಯಿತು. ಆ ಬಳಿಕ ಬುಧವಾರ (ಡಿ.29) ಔಪಚಾರಿಕವಾಗಿ ಅಂತಹ ವಿವಾಹವನ್ನು ಇದೇ ಮೊದಲ ಬಾರಿಗೆ ನೋಂದಾಯಿಸಲಾಗಿದೆ.
ತೃತೀಯ ಲಿಂಗಿ ಪಿಂಕಿ ಪ್ರತಿಕ್ರಿಯೆ: ''ಸಲಿಂಗ ವಿವಾಹದ ನೋಂದಣಿ ಮಾಡಿಸಿಕೊಂಡಿರುವ ವಿಷಯವನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು. ಇದು ನೇಪಾಳದ ತೃತೀಯ ಲಿಂಗಿಗಳ ಸಮುದಾಯದ ದೊಡ್ಡ ಸಾಧನೆ. ನೇಪಾಳ ಮಾತ್ರವಲ್ಲದೆ ಇಡೀ ದಕ್ಷಿಣ ಏಷ್ಯಾದಲ್ಲಿಯೇ ಮೊದಲ ಪ್ರಕರಣವಾಗಿದ್ದು, ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ'' ಎಂದು ತೃತೀಯ ಲಿಂಗಿ ಪಿಂಕಿ ಪ್ರತಿಕ್ರಿಯೆ ನೀಡಿದರು.
"ತಮ್ಮ ಕುಟುಂಬದ ಒಪ್ಪಿಗೆಯೊಂದಿಗೆ ಸಾಂಪ್ರದಾಯಿಕ ರೀತಿಯಲ್ಲಿ ವಿವಾಹವಾಗಿರುವ ನವಲಪರಸಿ ಜಿಲ್ಲೆಯ ನಿವಾಸಿ ಸುರೇಂದ್ರ ಮತ್ತು ಲಾಮ್‌ಜಂಗ್ ಜಿಲ್ಲೆಯ ಮಾಯಾ ಕಳೆದ ಆರು ವರ್ಷಗಳಿಂದ ಪತಿ-ಪತ್ನಿಯಾಗಿ ಒಟ್ಟಿಗೆ ವಾಸಿಸುತ್ತಿದ್ದಾರೆ. ಅನೇಕ ತೃತೀಯ ಲಿಂಗ ದಂಪತಿಗಳು ತಮ್ಮ ಗುರುತು ಮತ್ತು ಹಕ್ಕುಗಳಿಲ್ಲದೆ ಬದುಕುತ್ತಿದ್ದಾರೆ. ಇದು ಅವರಿಗೆ ಸಾಕಷ್ಟು ಸಹಾಯ ಮಾಡಲಿದೆ. ಈ ಸಮುದಾಯದ ಇತರ ಜನರಿಗೆ ತಮ್ಮ ಮದುವೆಯನ್ನು ಕಾನೂನುಬದ್ಧಗೊಳಿಸಲು ಈಗ ಬಾಗಿಲು ತೆರೆದಿದೆ'' ಎಂದು ಅವರು ಹೇಳಿದರು.
ತೃತೀಯ ಲಿಂಗಿ ಮಾಯಾ ಹೇಳಿಕೆ: ಪ್ರಸ್ತುತ ಈ ಮದುವೆಯನ್ನು ತಾತ್ಕಾಲಿಕವಾಗಿ ನೋಂದಾಯಿಸಲಾಗಿದೆ. ಅಗತ್ಯ ಕಾನೂನುಗಳನ್ನು ರೂಪಿಸಿದ ನಂತರ, ಅದು ಸ್ವಯಂಚಾಲಿತವಾಗಿ ಶಾಶ್ವತ ಮಾನ್ಯತೆ ಪಡೆಯುತ್ತದೆ. ಮದುವೆ ನಂತರ ಮಾತನಾಡಿದ ಮಾಯಾ, ''ಇದು ಇಬ್ಬರಿಗೂ ಸಂಭ್ರಮದ ಕ್ಷಣವಾಗಿದೆ. ನಮ್ಮ ಮದುವೆಯನ್ನು ಔಪಚಾರಿಕವಾಗಿ ನೋಂದಾಯಿಸಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ನಾವು ಈಗ ಅದನ್ನು ನೃತ್ಯ ಮತ್ತು ಪಾರ್ಟಿ ಮಾಡುವ ಮೂಲಕ ಸಂಭ್ರಮವನ್ನು ಆಚರಿಸುತ್ತಿದ್ದೇವೆ" ಎಂದು ಸಂತಸ ವ್ಯಕ್ತಪಡಿಸಿದರು.
"ಸುರೇಂದ್ರ ಮತ್ತು ನಾನು ಈ ಸಂದರ್ಭವನ್ನು ಒಟ್ಟಿಗೆ ಖುಷಿಯಿಂದ ಆಚರಿಸಲು ಲಾಮ್‌ಜಂಗ್‌ನ ದೋರ್ಡಿಯಲ್ಲಿ ಸೇರಿದ್ದೇವೆ. ನಮ್ಮ ಎರಡು ಕುಟುಂಬದವರು ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ. ನಮ್ಮ ಮದುವೆಯನ್ನು ನೋಂದಾಯಿಸುವ ನಿರ್ಧಾರದಿಂದ ನಮಗೆ ಹೆಮ್ಮೆ ಅನಿಸಿದೆ'' ಎಂದು ಮಾಯಾ ಹೇಳಿದರು.
ಇದನ್ನೂ ಓದಿ: ಭಾರತಕ್ಕೆ APEC ಸದಸ್ಯತ್ವ: ಅವಕಾಶ ಮತ್ತು ಸವಾಲುಗಳು