ನುರ್ಡಗಿ (ಟರ್ಕಿ): ಭೀಕರ ಭೂಕಂಪನಕ್ಕೆ ನಲುಗಿರುವ ಟರ್ಕಿ, ಸಿರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಭಾರತ 7 ವಿಮಾನಗಳಲ್ಲಿ ಅಗತ್ಯ ಸಾಮಗ್ರಿಗಳನ್ನು ನೀಡಿ ಕಷ್ಟಕಾಲದಲ್ಲಿ ಔದಾರ್ಯ ಮೆರೆದಿದೆ. ನೂರಕ್ಕೂ ಅಧಿಕ ಎನ್ಡಿಆರ್ಎಫ್ ಸಿಬ್ಬಂದಿ ಅವಶೇಷಗಳಡಿ ಸಿಲುಕಿದ ಜನರ ರಕ್ಷಣೆ ಮಾಡುತ್ತಿದೆ. ಪಡೆಯೊಂದಿಗೆ ಟರ್ಕಿಗೆ ತೆರಳಿರುವ ಶ್ವಾನದಳದ ರೋಮಿಯೋ ಮತ್ತು ಜೂಲಿ 6 ವರ್ಷದ ಬಾಲಕಿಯನ್ನು ಅಚ್ಚರಿಯ ರೀತಿಯಲ್ಲಿ ಕಾಪಾಡಿವೆ.
ಕಂಪನಕ್ಕೆ ತತ್ತರಿಸಿರುವ ನುರ್ಡಗಿ ಎಂಬಲ್ಲಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿವೆ. ದೊಡ್ಡ ಕಟ್ಟಡದಡಿ ಸಿಲುಕಿದ್ದ 6 ವರ್ಷದ ಬಾಲಕಿಯನ್ನು ಪತ್ತೆ ಮಾಡಲು ಸಿಬ್ಬಂದಿ ವಿಫಲವಾಗಿತ್ತು. ಆದರೆ, ಅವಶೇಷಗಳಡಿ ಇದ್ದ ಬಾಲಕಿಯನ್ನು ಶ್ವಾನದಳದ ರೋಮಿಯೋ ಮತ್ತು ಜೂಲಿ ಪತ್ತೆ ಮಾಡಿವೆ. ಇವು ನೀಡಿದ ಗುರುತಿನ ಆಧಾರದ ಮೇಲೆ ಎನ್ಡಿಆರ್ಎಫ್ ಪಡೆ ಅಗೆದಾಗ ಬಾಲಕಿ ಸಿಕ್ಕಿದ್ದು ಜೀವಂತವಾಗಿ ರಕ್ಷಿಸಲಾಗಿದೆ.
ಅವಶೇಷಗಳಡಿಯಿಂದ ರಕ್ಷಿಸಲಾದ ಬಾಲಕಿಯನ್ನು ಬೆರೆನ್ ಎಂದು ಗುರುತಿಸಲಾಗಿದೆ. ಬಾಲಕಿಯನ್ನು ರಕ್ಷಣೆ ಮಾಡಿದ್ದನ್ನು ಸಿಬ್ಬಂದಿ ಕುಂದನ್ ಹೇಳುವಂತೆ, ನುರ್ಡಗಿ ಪ್ರದೇಶದಲ್ಲಿ ಅವಶೇಷಗಳಡಿ ಜನರು ಸಿಲುಕಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ಅಲ್ಲಿನ ಸರ್ಕಾರ ಕೋರಿತು. ಅದರಂತೆ ಕಾರ್ಯಪ್ರವೃತ್ತರಾದ ನಮ್ಮ ಪಡೆ ಶೋಧ ನಡೆಸುತ್ತಿತ್ತು. ಈ ವೇಳೆ ತೀಕ್ಷ್ಣಮತಿಯಾದ ಜೂಲಿಯನ್ನು ಅವಶೇಷಗಳಡಿ ಕರೆದೊಯ್ದಾಗ ಕಟ್ಟಡದಡಿ ಮನುಷ್ಯರು ಸಿಲುಕಿದ್ದನ್ನು ಗುರುತಿಸಿದ ಅದು ಬೊಗಳಲು ಶುರು ಮಾಡಿತು.
ಜೀವಂತವಾಗಿ ಬಾಲಕಿಯ ರಕ್ಷಣೆ: ಇದನ್ನು ದೃಢಪಡಿಸಲು ರೋಮಿಯೋನನ್ನು ಕರೆತಂದು ಪರಿಶೀಲಿಸಿದಾಗ ಅದು ಕೂಡ ಬೊಗಳಿತು. ಆಗ ಅವಶೇಷಗಳಡಿ ಯಾರೋ ಇದ್ದಿದ್ದು ತಿಳಿದು ತಕ್ಷಣವೇ ಯಂತ್ರಗಳಿಂದ ಕತ್ತರಿಸಿದಾಗ ಅದರಡಿ ಬಾಲಕಿ ಇರುವುದು ಕಂಡು ಬಂತು. 6 ವರ್ಷದ ಬೆರೆನ್‌ಳನ್ನು ಜೀವಂತವಾಗಿ ಹೊರಕ್ಕೆ ತರಲಾಯಿತು.
ಫೆ.6 ರಂದು ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪನ ನಂತರ ಭಾರತ 'ಆಪರೇಷನ್ ದೋಸ್ತ್' ಹೆಸರಿನಲ್ಲಿ ರಕ್ಷಣಾ ಕಾರ್ಯಾಚರಣೆ ಘೋಷಿಸಿತು. 60 ಪ್ಯಾರಾ ಫೀಲ್ಡ್ ಆಸ್ಪತ್ರೆ ಮತ್ತು ಎನ್ಡಿಆರ್ಎಫ್ ತಂಡವನ್ನು ಕಳುಹಿಸಿತು. ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಬಲ ಕಂಪನಕ್ಕೆ ಇದುವರೆಗೆ 34,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 7 ದಿನಗಳ ನಂತರವೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಟರ್ಕಿ ದೇಶವೊಂದರಲ್ಲೇ 30 ಸಾವಿರದಷ್ಟು ಮಂದಿ ಅಸುನೀಗಿದ್ದರೆ, ಸಿರಿಯಾದಲ್ಲಿ 4 ಸಾವಿರ ಜನರು ಸಮಾಧಿಯಾಗಿದ್ದಾರೆ. ಭೂಕಂಪದಿಂದ 12 ಸಾವಿರಕ್ಕೂ ಅಧಿಕ ಕಟ್ಟಡಗಳು ನಾಶವಾಗಿದ್ದು, ಅವುಗಳ ಇನ್ನಷ್ಟು ಜನರು ಸಿಲುಕಿರುವ ಸಾಧ್ಯತೆ ಇದೆ. ಇದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.
ಸಾವಿನ ಸಂಖ್ಯೆ 50 ಸಾವಿರ ಸಾಧ್ಯತೆ: ಇನ್ನೊಂದೆಡೆ ವಿಶ್ವಸಂಸ್ಥೆ ಆಘಾತಕಾರಿ ಮಾಹಿತಿಯನ್ನು ಹಂಚಿಕೊಂಡಿದೆ. ಭೂಕಂಪನವಾದ ಉಭಯ ದೇಶಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 50 ಸಾವಿರಕ್ಕೆ ಹೆಚ್ಚುವ ಸಾಧ್ಯತೆ ಇದೆ ಎಂದು ಅದು ಹೇಳಿದೆ. ಅವಶೇಷಗಳಡಿ ಸಾವಿರಾರು ಜನರು ಸಿಲುಕಿದ್ದಾರೆ. ದುರಂತ ಘಟಿಸಿ 7 ದಿನಗಳಾಗಿದ್ದು, ಬಿದ್ದ ಕಟ್ಟಡದಡಿ ಸಿಲುಕಿದ ಜನರು ಬದುಕುಳಿದಿರುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಟರ್ಕಿ ಮತ್ತು ಸಿರಿಯಾದಲ್ಲಿ 12 ಸಾವಿರಕ್ಕೂ ಹೆಚ್ಚು ಕಟ್ಟಡಗಳು ನೆಲಸಮಗೊಂಡಿವೆ ಎಂದು ಅಂದಾಜಿಸಲಾಗಿದೆ. ದುರ್ಬಲ ಕಟ್ಟಡಗಳ ನಿರ್ಮಾಣವೇ ಈ ಪ್ರಮಾಣದ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಟರ್ಕಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕಟ್ಟಡಗಳನ್ನು ನಿರ್ಮಿಸಿದ ಗುತ್ತಿಗೆದಾರರ ವಿಚಾರಣೆ ನಡೆಸಲು ಮುಂದಾಗಿದೆ.
ಓದಿ: Turkey Earthquake: 34 ಸಾವಿರ ದಾಟಿದ ಮೃತರ ಸಂಖ್ಯೆ.. ಕಟ್ಟಡಗಳ ಗುತ್ತಿಗೆದಾರರ ವಿಚಾರಣೆ