ಮ್ಯಾನ್ಮಾರ್: ಮ್ಯಾನ್ಮಾರ್ ಮಿಲಿಟರಿ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಅಲ್ಲಿನ ಸೇನೆ ವೈಮಾನಿಕ ಬಾಂಬ್ ದಾಳಿ ನಡೆಸಿದ್ದು, ಭೀಕರ ದುರಂತದಲ್ಲಿ ಮಕ್ಕಳು ಸೇರಿದಂತೆ 100 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಈ ದಾಳಿಗೆ ವಿಶ್ವದೆಲ್ಲೆಡೆಯಿಂದ ಬಲವಾದ ಖಂಡನೆ ವ್ಯಕ್ತವಾಗುತ್ತಿದೆ.
ದೇಶದ 2ನೇ ದೊಡ್ಡ ನಗರವಾದ ಮ್ಯಾಂಡಲೆಯ ಉತ್ತರಕ್ಕಿರುವ 100 ಕಿ.ಮೀ ದೂರದಲ್ಲಿನ ಸಾಗಯಿಂಗ್ ಪ್ರದೇಶದಲ್ಲಿ ಸೇನೆ ವಿರುದ್ಧ ಚಳವಳಿ ತೀವ್ರವಾಗಿ ನಡೆಯುತ್ತಿದೆ. ಇದನ್ನೇ ಗುರಿಯಾಗಿಸಿಕೊಂಡು ಸೇನಾಪಡೆ ಮಂಗಳವಾರ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಮೃತರಲ್ಲಿ ಕೆಲವರು ಹೋರಾಟಗಾರರಾಗಿದ್ದರೆ, ಇನ್ನು ಕೆಲವರು ನಾಗರಿಕರು ಸಹಿತ ಪ್ರಾಣ ಕಳೆದುಕೊಂಡಿದ್ದಾರೆ.
ಹಳ್ಳಿಯಲ್ಲಿ ದೇಶವಿರೋಧಿ ಚಟುವಟಿಕೆ ನಡೆಸಲಾಗುತ್ತಿತ್ತು. ಅಲ್ಲದೇ, ಮಿಲಿಟರಿ ಆಡಳಿತದ ವಿರುದ್ಧ ಕಚೇರಿಯನ್ನು ಆರಂಭಿಸಿ ಮಂಗಳವಾ ಬೆಳಗ್ಗೆ ಉದ್ಘಾಟನೆ ಮಾಡುವ ಯೋಜನೆ ರೂಪಿಸಿದ್ದರು. ಈ ಕಾರಣಕ್ಕಾಗಿ ದಾಳಿ ನಡೆಸಲಾಗಿದೆ ಎಂದು ಸೇನಾಡಳಿತ ವಕ್ತಾರ ಜಾವ್ ಮಿನ್ ಟುನ್ ತಿಳಿಸಿದ್ದಾರೆ.
ದಾಳಿಯಲ್ಲಿ ಮಕ್ಕಳು, ಹೋರಾಟಗಾರರು ಸೇರಿದಂತೆ 100 ಮಂದಿ ಸಾವನ್ನಪ್ಪಿದ್ದಾರೆ. 30 ಮಂದಿ ಗಾಯಗೊಂಡಿದ್ದಾರೆ. ದೇಶವನ್ನು ಸೇನಾಡಳಿತ ತನ್ನ ವಶಕ್ಕೆ ಪಡೆದ ಬಳಿಕ ನಡೆಯುತ್ತಿರುವ ಮಾರಣಾಂತಿಕ ದಾಳಿ ಇದಾಗಿದೆ. ಪ್ರತಿಭಟನಾಕಾರರ ವಿರುದ್ಧ ಪ್ರತಿರೋಧ ಪಡೆಗಳನ್ನು ರಚಿಸಲಾಗಿದ್ದು, ಉತ್ತಮ ಶಸ್ತ್ರಸಜ್ಜಿತ, ವಾಯುದಾಳಿಗಳನ್ನು ನಡೆಸುವ ಕಾರ್ಯತಂತ್ರವನ್ನು ಮಿಲಿಟರಿ ಹೆಚ್ಚಿಸಿದೆ.
ಸಾಗಯಿಂಗ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಸಾವಿನ ಸಂಖ್ಯೆ ನಿಖರವಾಗಿ ತಿಳಿದುಬಂದಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಹಳ್ಳಿಯ ಫೋಟೋಗಳಲ್ಲಿ ಹಲವು ಹೆಣಗಳನ್ನು ಕಾಣಬಹುದು. ವಿರೂಪಗೊಂಡ ದೇಹಗಳೂ ಇದರಲ್ಲಿವೆ. ನಾಶವಾದ ಕಟ್ಟಡ, ಸುಟ್ಟುಹೋದ ಮೋಟಾರ್ ಸೈಕಲ್‌ಗಳು ಮತ್ತು ಭಗ್ನಾವಶೇಷಗಳು ಕಾಣಿಸುತ್ತಿವೆ.
ಸೇನೆಯ ವಿರುದ್ಧದ ಹೋರಾಟಕ್ಕಾಗಿ ನಿರ್ಮಾಣ ಮಾಡಲಾಗಿದ್ದ ಕಚೇರಿಯನ್ನು ದಾಳಿಯಲ್ಲಿ ಹೊಡೆದುರುಳಿಸಲಾಗಿದೆ. ಅದರ ಕಟ್ಟಡವು ಸುಟ್ಟು ಕರಕಲಾಗಿರುವುದು ಕಂಡುಬಂದಿದೆ. 1948 ರಲ್ಲಿ ಸ್ವಾತಂತ್ರ್ಯದ ನಂತರ ನಿಯಂತ್ರಣಕ್ಕಾಗಿ ಜನರ ವಿರುದ್ಧವೇ ಅಲ್ಲಿನ ಮಿಲಿಟರಿ ಪಡೆ ಕ್ರೂರ ದಾಳಿ ನಡೆಸುತ್ತಲೇ ಇದೆ.
ದಂಗೆಯ ನಂತರ, ಸೈನ್ಯವನ್ನು ಅಧಿಕಾರದಿಂದ ಹೊರಹಾಕಲು ರಾಷ್ಟ್ರೀಯ ಅಭಿಯಾನದಲ್ಲಿ ಪ್ರಜಾಪ್ರಭುತ್ವ-ಪರ ಪಡೆಗಳು ಕೆಲವು ಸಶಸ್ತ್ರ ಜನಾಂಗೀಯ ಗುಂಪುಗಳೊಂದಿಗೆ ಒಂದಾಗಿವೆ, ಮಿಲಿಟರಿ ಎದುರಿಸಿದ ಅತ್ಯಂತ ಏಕೀಕೃತ ಪ್ರತಿರೋಧ ಚಳುವಳಿಯನ್ನು ಸೃಷ್ಟಿಸಿದೆ. ಬಂಡುಕೋರ ಪಡೆಗಳು ಹೆಚ್ಚು ಹೆಚ್ಚು ಶಸ್ತ್ರಸಜ್ಜಿತವಾಗುತ್ತಿದ್ದಂತೆ, ಕಳೆದ ತಿಂಗಳು ಮಠದಲ್ಲಿ ಸನ್ಯಾಸಿಗಳು ಮತ್ತು ನಾಗರಿಕರ ಹತ್ಯೆ ಸೇರಿದಂತೆ ಮಾರಣಾಂತಿಕ ವಾಯುದಾಳಿಗಳನ್ನು ನಡೆಸುವ ಮತ್ತು ನಾಗರಿಕರ ಮೇಲೆ ದಾಳಿ ಮಾಡುವ ತನ್ನ ಕಾರ್ಯತಂತ್ರವನ್ನು ಮಿಲಿಟರಿ ದ್ವಿಗುಣಗೊಳಿಸಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥ ವೋಲ್ಕರ್ ಟರ್ಕ್ ಅವರು ವೈಮಾನಿಕ ದಾಳಿಯಿಂದ ನನಗೆ ಗಾಬರಿಯಾಗಿದೆ. ವಿಶ್ವದ ಎಲ್ಲಾ ದೇಶಗಳು ದಾಳಿಯ ಹೊಣೆಗಾರರನ್ನು ಖಂಡಿಸಿ ನ್ಯಾಯಕ್ಕೆ ಒತ್ತಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ಮ್ಯಾನ್ಮಾರ್‌ನಲ್ಲಿ ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರ್ಕಾರ ಪದ್ಯಚುತಗೊಳಿಸಿ 2021ರ ಫೆಬ್ರುವರಿಯಲ್ಲಿ ಸೇನೆ ಅಧಿಕಾರಿ ಹಿಡಿದಿತ್ತು. ಅಲ್ಲದೆ ಜನರ ಪ್ರತಿಭಟನೆ ಹತ್ತಿಕ್ಕಲು ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ಈವರೆಗೆ ಮಿಲಿಟರಿ ದಾಳಿಗೆ 3,000ಕ್ಕೂ ಹೆಚ್ಚು ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಅಂದಾಜಿಸಲಾಗಿದೆ.