ದಕ್ಷಿಣ ಶಾನ್ (ಮ್ಯಾನ್ಮಾರ್): ಫೆಬ್ರವರಿ 2021ರಲ್ಲಿ ಆಂಗ್ ಸಾನ್ ಸೂಕಿ ನೇತೃತ್ವದ ಸರ್ಕಾರವನ್ನು ಪದಚ್ಯುತಗೊಳಿಸಿದ ನಂತರ ಮ್ಯಾನ್ಮಾರ್ ದೇಶ ಮಿಲಿಟರಿ ಆಡಳಿತದಲ್ಲಿದೆ. ಅಂದಿನಿಂದ ಪ್ರಜಾಪ್ರಭುತ್ವ ಪರ ಬಂಡಾಯ ಗುಂಪುಗಳು ಮತ್ತು ಆಡಳಿತಾರೂಢ ಸೇನೆಯ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆಯುತ್ತಿವೆ. ಈಗ ಬಂಡುಕೋರರು ಮತ್ತು ಮಿಲಿಟರಿ ಬೆಂಬಲಿತ ಜುಂಟಾ ನಡುವೆ ಗುಂಡಿನ ಚಕಮಕಿ ನಡೆದಿರುವುದು ಬೆಳಕಿಗೆ ಬಂದಿದೆ.
ಘಟನೆಯಲ್ಲಿ ದಕ್ಷಿಣ ಶಾನ್ ರಾಜ್ಯದಲ್ಲಿ 29 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ಮೂವರು ಬೌದ್ಧ ಸನ್ಯಾಸಿಗಳಿದ್ದಾರೆ. ಬಂಡಾಯ ಗುಂಪುಗಳು ಮತ್ತು ಸೇನೆ ಹತ್ಯಾಕಾಂಡದ ಬಗ್ಗೆ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿವೆ. ಘಟನೆಯ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೌದ್ಧ ವಿಹಾರ ಕಟ್ಟಡದ ಗೋಡೆ ಮೇಲೆ ಗುಂಡಿನ ದಾಳಿಯ ಗುರುತುಗಳನ್ನು ಈ ಫೋಟೋದಲ್ಲಿ ಕಾಣಬಹುದು. ಬೌದ್ಧ ಸನ್ಯಾಸಿಗಳು ಮತ್ತು ಇತರರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಾಣುತ್ತದೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಈ ತಿಂಗಳ ಆರಂಭದಲ್ಲಿ ಸಾಗಯಿಂಗ್ ಪ್ರದೇಶದ ಮಿಯಿನ್ಮು ಟೌನ್‌ಶಿಪ್‌ನಲ್ಲಿ ಮಿಲಿಟರಿ ಪಡೆಗಳು 17 ಗ್ರಾಮಸ್ಥರನ್ನು ಕೊಂದು ಹಾಕಿದ್ದು, ವಾರಗಳ ನಂತರ ನನ್ನ್ಯಾಂಟ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಿಲಿಟರಿ ವಿರೋಧಿ ಆಡಳಿತ ಕರೇನಿ ನ್ಯಾಶನಲಿಟೀಸ್ ಡಿಫೆನ್ಸ್ ಫೋರ್ಸ್ (ಕೆಎನ್‌ಡಿಎಫ್) ಮೃತಪಟ್ಟವರ ಕುರಿತ ಫೋಟೋಗಳನ್ನು ಪ್ರಕಟಿಸಿದೆ.
ಒಟ್ಟು 22 ಮೃತದೇಹಗಳು ಪತ್ತೆಯಾಗಿವೆ. ಬೌದ್ಧ ವಿಹಾರ ಹಿಂಭಾಗದಲ್ಲಿ ಇನ್ನೂ ಏಳು ಮೃತದೇಹಗಳಿವೆ. ಅವುಗಳನ್ನು ಹೊರತರಲು ಸಾಧ್ಯವಾಗಿಲ್ಲ ಎಂದು ಕೆಎನ್‌ಡಿಎಫ್ ವಕ್ತಾರರು ತಿಳಿಸಿದ್ದಾರೆ. ಮಿಲಿಟರಿ ನಾಯಕ ಮಿನ್ ಆಂಗ್ ಹ್ಲೈಂಗ್ ಅಧಿಕಾರ ವಶಪಡಿಸಿಕೊಂಡ ನಂತರ ಮ್ಯಾನ್ಮಾರ್‌ನಲ್ಲಿ ರಾಜಕೀಯ ಹಿಂಸಾಚಾರ ತೀವ್ರವಾಗುತ್ತಿದೆ. 55 ಮಿಲಿಯನ್ ಜನರಿರುವ ಆಗ್ನೇಯ ಏಷ್ಯಾ ರಾಷ್ಟ್ರವು ಕಾರ್ಯನಿರ್ವಹಿಸುವ ಪ್ರಜಾಪ್ರಭುತ್ವವಾಗುವ ಯಾವುದೇ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ.
ದಂಗೆಯ ನಂತರ ಪ್ರಜಾಪ್ರಭುತ್ವ-ಪರ ಪ್ರತಿಭಟನಾಕಾರರ ವಿರುದ್ಧ ಮಿಲಿಯರಿ ಕ್ರೂರ ದಬ್ಬಾಳಿಕೆ ನಡೆಸಿದೆ. ಅಷ್ಟೇ ಅಲ್ಲ, ಅನೇಕ ನಾಗರಿಕರನ್ನು ಬೀದಿಯಲ್ಲಿ ಗುಂಡು ಹಾರಿಸಿ ಕೊಲ್ಲಲಾಗಿದೆ. ರಾತ್ರಿ ವೇಳೆ ನಡೆದ ದಾಳಿಯಲ್ಲಿ ಪ್ರತಿಭಟನಾಕಾರರನ್ನು ಅಪಹರಿಸಲಾಗಿದೆ. ಅಷ್ಟೇ ಅಲ್ಲ, ಅವರನ್ನು ಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಪ್ರಜಾಪ್ರಭುತ್ವ-ಪರ ಪ್ರತಿಭಟನಾಕಾರರು ಮಾಡುತ್ತಿದ್ದಾರೆ.
ಇನ್ನು ಮ್ಯಾನ್ಮಾರ್‌ನ ಸೇನೆಯ ವಕ್ತಾರ ಮೇಜರ್ ಜನರಲ್ ಜಾವ್ ಮಿನ್ ತುನ್ ಅವರು ಈ ಹತ್ಯಾಕಾಂಡಕ್ಕೆ ಸೇನೆ ಹೊಣೆ ಎಂಬ ಆರೋಪವನ್ನು ತಿರಸ್ಕರಿಸಿದ್ದಾರೆ. ಮಂಗಳವಾರ ಮ್ಯಾನ್ಮಾರ್‌ನ ಸರ್ಕಾರಿ ಪತ್ರಿಕೆ ಪ್ರಕಟಿಸಿದ ಪ್ರಕಾರ, ಬೌದ್ಧ ವಿಹಾರದಲ್ಲಿ ನಡೆದ ಹಿಂಸಾಚಾರಕ್ಕೆ ಭಯೋತ್ಪಾದಕ ಗುಂಪುಗಳು ಕಾರಣ. ಹತ್ಯಾಕಾಂಡದ ಹಿಂದೆ ಕರೆನ್ ನ್ಯಾಷನಲ್ ಪೊಲೀಸ್ ಫೋರ್ಸ್ (ಕೆಎನ್‌ಪಿಎಫ್), ಪೀಪಲ್ಸ್ ಡಿಫೆನ್ಸ್ ಫೋರ್ಸ್ (ಪಿಡಿಎಫ್) ಮತ್ತು ಕರೆನ್ನಿ ನ್ಯಾಷನಲ್ ಪ್ರೋಗ್ರೆಸ್ಸಿವ್ ಪಕ್ಷ (ಕೆಎನ್‌ಪಿಪಿ) ಅವರ ಕೈವಾಡವಿದೆ ಎಂದು ತುನ್ ಆರೋಪಿಸಿದ್ದಾರೆ.
ಅಡ್ವೊಕಸಿ ಗ್ರೂಪ್ ಅಸಿಸ್ಟೆನ್ಸ್ ಅಸೋಸಿಯೇಷನ್ ಫಾರ್ ಪೊಲಿಟಿಕಲ್ ಪ್ರಿಸನರ್ಸ್ (ಎಎಪಿಪಿ) ಪ್ರಕಾರ, ಜುಂಟಾ ವಿರುದ್ಧದ ದಂಗೆಯಿಂದ ಮ್ಯಾನ್ಮಾರ್‌ನಲ್ಲಿ ಇಲ್ಲಿಯವರೆಗೆ ಕನಿಷ್ಠ 2,900 ಜನರನ್ನು ಪಡೆಗಳು ಕೊಂದಿವೆ. 17,500ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಈವರಲ್ಲಿ ಹಲವರು ಇನ್ನೂ ಬಂಧನದಲ್ಲಿದ್ದಾರೆ. ಯುದ್ಧಾಪರಾಧಗಳಾದ ಸಾಮೂಹಿಕ ಹತ್ಯೆಗಳು ಮತ್ತು ಯುದ್ಧಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ನಾಗರಿಕರ ವಿರುದ್ಧ ವಾಯುದಾಳಿ ಮಾಡುತ್ತಿದೆ ಎಂಬ ಆರೋಪವನ್ನು ಪ್ರತಿರೋಧ ಗುಂಪುಗಳು ಮಾಡುತ್ತಿವೆ. ಆದರೆ ಜುಂಟಾ ಈ ಆರೋಪವನ್ನು ನಿರಾಕರಿಸುತ್ತಲೇ ಬರುತ್ತಿದೆ.
ಇದನ್ನೂ ಓದಿ: ಚೀನಾ, ರಷ್ಯಾ, ಇರಾನ್ನಿಂದ ಜಂಟಿ ನೌಕಾ ಸಮರಾಭ್ಯಾಸ..