ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಗ್ಯ ಅತ್ಯುತ್ತಮವಾಗಿದೆ ಮತ್ತು ಅವರ ಅರಿವಿನ ಸಾಮರ್ಥ್ಯಗಳು ಅಸಾಧಾರಣವಾಗಿವೆ ಎಂದು ಪ್ರಕಟಣೆ ನೀಡಿರುವ ಟ್ರಂಪ್ ಅವರ ಚುನಾವಣಾ ನಿರ್ವಾಹಕರು ಈ ಕುರಿತಾದ ವೈದ್ಯಕೀಯ ಪರೀಕ್ಷಾ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಟ್ರಂಪ್ ಅವರು ಆಗಾಗ ಆಡುವ ತಪ್ಪು ಮಾತುಗಳು ಹಾಗೂ ಅವರ ವಯಸ್ಸಿನ ಬಗ್ಗೆ ಚರ್ಚೆಗಳು ನಡೆದಿರುವ ಮಧ್ಯೆ ಅವರ ಚುನಾವಣಾ ನಿರ್ವಾಹಕರು ಟ್ರಂಪ್ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ಡಾಕ್ಟರ್ ಸರ್ಟಿಫಿಕೇಟ್ ತೋರಿಸಿದ್ದಾರೆ.
2021 ರಿಂದ ಟ್ರಂಪ್ ಅವರ ವೈಯಕ್ತಿಕ ವೈದ್ಯರೆಂದು ಹೇಳಿಕೊಂಡಿರುವ ಬ್ರೂಸ್ ಅರಾನ್ವಾಲ್ಡ್ ಸೋಮವಾರ ಟ್ರಂಪ್ ಅವರ ಆರೋಗ್ಯ ವರದಿ ನೀಡಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ತೀರಾ ಇತ್ತೀಚೆಗೆ ಅಂದರೆ ಸೆಪ್ಟೆಂಬರ್ 13 ರಂದು ಟ್ರಂಪ್ ಅವರಿಗೆ ಸಮಗ್ರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಅವರ ಹೃದಯರಕ್ತನಾಳದ ಪರೀಕ್ಷೆಗಳಲ್ಲಿ ಎಲ್ಲವೂ ಸಾಮಾನ್ಯವಾಗಿದ್ದು, ಕ್ಯಾನ್ಸರ್ ಸ್ಕ್ರೀನಿಂಗ್ ಪರೀಕ್ಷೆಗಳು ನಕಾರಾತ್ಮಕವಾಗಿದ್ದವು ಮತ್ತು ಟ್ರಂಪ್ ತಮ್ಮ ತೂಕವನ್ನು ಕಡಿಮೆ ಮಾಡಿದ್ದಾರೆ ಎಂದು ಅರಾನ್ವಾಲ್ಡ್ ಬರೆದಿದ್ದಾರೆ.
ಆದಾಗ್ಯೂ ಟ್ರಂಪ್ ಮೇಲೆ ಯಾವೆಲ್ಲ ಆರೋಗ್ಯ ಪರೀಕ್ಷೆಗಳನ್ನು ನಡೆಸಲಾಗಿದೆ ಎಂಬ ಮಾಹಿತಿ ಈ ವರದಿಯಲ್ಲಿ ಇಲ್ಲ. ಟ್ರಂಪ್ ಅವರ ವೈದ್ಯರು ಈ ಹಿಂದೆ ಹಂಚಿಕೊಂಡ ಅವರ ಎತ್ತರ ಮತ್ತು ತೂಕ, ಕೊಲೆಸ್ಟ್ರಾಲ್ ಮಟ್ಟ ಅಥವಾ ರಕ್ತದೊತ್ತಡದಂತಹ ಮೂಲಭೂತ ಮಾಹಿತಿಯನ್ನು ಸಹ ಇದು ಒಳಗೊಂಡಿಲ್ಲ. 2015 ರಲ್ಲಿ ಟ್ರಂಪ್ ಅವರ ಅಂದಿನ ಪ್ರಚಾರ ನಿರ್ವಾಹಕರು ಹೆರಾಲ್ಡ್ ಬಾರ್ನ್ಸ್ಟೀನ್ ಬರೆದ ಇದೇ ರೀತಿಯ ವರದಿಯನ್ನು ಬಿಡುಗಡೆ ಮಾಡಿದ್ದರು. ಅವರ ದೈಹಿಕ ಶಕ್ತಿ ಮತ್ತು ತ್ರಾಣ ಅಸಾಧಾರಣವಾಗಿದೆ ಎಂದು ವರದಿ ಹೇಳಿತ್ತು. ಆದರೆ ಟ್ರಂಪ್ ಅವರೇ ವರದಿಯಲ್ಲಿ ಏನು ಬರೆಯಬೇಕೆಂಬುದನ್ನು ನನಗೆ ಹೇಳಿದ್ದರು ಎಂದು ಕೆಲಕಾಲದ ನಂತರ ಬಾರ್ನ್ಸ್ಟೀನ್ ಹೇಳಿಕೊಂಡಿದ್ದರು.
2024 ರ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಅಭ್ಯರ್ಥಿಯಾಗಿರುವ ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಅವರು ಹಾಲಿ ಅಧ್ಯಕ್ಷ ಜೋ ಬೈಡನ್ ಮತ್ತು ಟ್ರಂಪ್ ಮತ್ತೊಂದು ಅವಧಿಗೆ ಶ್ವೇತಭವನಕ್ಕೆ ಸ್ಪರ್ಧಿಸಲು ತುಂಬಾ ವೃದ್ಧರಾಗಿದ್ದಾರೆ ಎಂದು ಹೇಳಿದ ಒಂದು ದಿನದ ನಂತರ ಸೋಮವಾರ ಈ ಹೇಳಿಕೆ ಬಿಡುಗಡೆಯಾಗಿದೆ.
ಭಾನುವಾರ ಸಿಎನ್ಎನ್ ಜೊತೆ ಮಾತನಾಡಿದ 45 ವರ್ಷದ ಡಿಸಾಂಟಿಸ್, ಅಧ್ಯಕ್ಷ ಸ್ಥಾನವು 80ರ ಅಂಚಿನಲ್ಲಿರುವ ವೃದ್ಧರ ಕೆಲಸವಲ್ಲ ಎಂದಿದ್ದರು. ಸೋಮವಾರ 81 ನೇ ವರ್ಷಕ್ಕೆ ಕಾಲಿಟ್ಟ ಬೈಡನ್ 2021 ರ ಜನವರಿಯಲ್ಲಿ ಶ್ವೇತಭವನವನ್ನು ಪ್ರವೇಶಿಸಿದಾಗ 78 ನೇ ವಯಸ್ಸಿನಲ್ಲಿ ದೇಶದ ಅತ್ಯಂತ ಹಿರಿಯ ಅಧ್ಯಕ್ಷರಾಗಿದ್ದರು. ಇನ್ನು ಟ್ರಂಪ್ 2017 ರಲ್ಲಿ 71 ನೇ ವಯಸ್ಸಿನಲ್ಲಿ ಅಧಿಕಾರ ವಹಿಸಿಕೊಂಡಿದ್ದರು.
ಇದನ್ನೂ ಓದಿ : ರಾಜಸ್ಥಾನ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ; ಜಾತಿ ಗಣತಿ ಭರವಸೆ