ಲಾಸ್ ಏಂಜಲೀಸ್: ನಾಸಾದ ಮಾಜಿ ವಿಜ್ಞಾನಿ, 1969 ರಲ್ಲಿ ಚಂದ್ರನ ಮೇಲೆ ಕಾಲಿಟ್ಟು ಬಂದು ಐತಿಹಾಸಿಕ ಮೈಲಿಗಲ್ಲು ನೆಟ್ಟಿದ್ದ ಮೂವರು ಅಮೆರಿಕದ ಗಗನಯಾತ್ರಿಗಳಲ್ಲಿ ಒಬ್ಬರಾದ ಬುಜ್ ಅಲ್ಡ್ರಿನ್ ಅವರು ತಮ್ಮ 93 ನೇ ವಯಸ್ಸಿನಲ್ಲಿ 4 ನೇ ವಿವಾಹವಾಗಿದ್ದಾರೆ. ಈ ಬಗ್ಗೆ ಅವರೇ ಟ್ವೀಟ್ನಲ್ಲಿ ಫೋಟೋಗಳನ್ನು ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ಫೈಟರ್ ಪೈಲಟ್, ಸಕ್ರಿಯ ವಿಜ್ಞಾನಿಯಾಗಿರುವ ಬುಜ್ ಅಲ್ಡ್ರಿನ್ ಅವರು ತಮ್ಮ ದೀರ್ಘಕಾಲದ ಗೆಳತಿಯಾದ ಡಾ ಅಂಕಾ ಫೌರ್ ಅವರೊಂದಿಗಿನ ಪ್ರೀತಿಯನ್ನು ವಿವಾಹ ಬಂಧನಕ್ಕೆ ಒಳಪಡಿಸಿದ್ದಾರೆ. ಇತ್ತೀಚೆಗೆ ಲಾಸ್ ಏಂಜಲೀಸ್ನಲ್ಲಿ ಖಾಸಗಿಯಾಗಿ ತಮ್ಮ ಅತ್ಯಾಪ್ತರ ಸಮ್ಮುಖದಲ್ಲಿ ಬುಜ್ ಅವರು 64 ವರ್ಷದ ಅಂಕಾ ಅವರನ್ನು ವರಿಸಿದ್ದಾರೆ.
ಟ್ವಿಟರ್ನಲ್ಲಿ ಫೋಟೋ ಹಂಚಿಕೊಂಡ ಬುಜ್: ವಿವಾಹವಾದ ಚಿತ್ರಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಬುಜ್ "ನನ್ನ 93 ನೇ ವಯಸ್ಸಿನಲ್ಲಿ ಈ ವೇಳೆ ನಾನು ಬಹುವಾಗಿ ಪ್ರೀತಿಸುವ, ಗೌರವಿಸುವ ಅಂಕಾ ಅವರೊಂದಿಗೆ ಲಾಸ್ ಏಂಜಲೀಸ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇನೆ. ಈ ವಿಚಾರವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಹರಿಹರೆಯದವರು ಪ್ರೀತಿಸಿ ಮನೆಯಿಂದ ಓಡಿಹೋಗುವ ರೀತಿ ನನ್ನ ಮನಸ್ಸು ಇಂದು ನಲಿಯುತ್ತಿದೆ" ಎಂದು ಗಗನಯಾತ್ರಿ ಬರೆದುಕೊಂಡಿದ್ದಾರೆ.
93 ನೇ ವಯಸ್ಸಿನಲ್ಲಿ 4 ನೇ ವಿವಾಹವಾಗುತ್ತಿರುವ ಬುಜ್ರ ಸಾಹಸ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅನೇಕರು ಮದುವೆಗೆ ಶುಭಾಶಯ ಕೋರುವ ಜೊತೆಗೆ "ಮತ್ತೊಮ್ಮೆ ಚಂದ್ರನ ಮೇಲೆ ಕಾಲಿಡಲು ಸಿದ್ಧರಾಗಿದ್ದೀರಾ" ಎಂದು ಕಿಚಾಯಿಸಿದ್ದಾರೆ.
ಮೂರು ಬಾರಿ ವಿವಾಹ ವಿಚ್ಛೇದನ: ಈ ಪೋಸ್ಟ್ 22 ಸಾವಿರಕ್ಕೂ ಹೆಚ್ಚು ಲೈಕ್ಗಳನ್ನು ಕಂಡರೆ, 1.8 ಮಿಲಿಯನ್ ಜನರಿಂದ ವೀಕ್ಷಣೆಗೊಂಡಿದೆ. ಬುಜ್ ಅಲ್ಡ್ರಿನ್ ಅವರಿಗೆ ಇದು 4ನೇ ವಿವಾಹವಾಗಿದ್ದು, ಮೂರು ಬಾರಿ ವಿಚ್ಛೇದನ ಪಡೆದಿದ್ದಾರೆ. 1954 ರಲ್ಲಿ ಜೋಆನ್, 1975 ರಲ್ಲಿ ಬೇವರ್ಲಿ, 1988 ರಲ್ಲಿ ಲೂಯಿಸ್ ಡ್ರಿಗ್ಸ್ ಅವರನ್ನು ಮದುವೆಯಾಗಿದ್ದರು.
ಬದುಕುಳಿದ ಏಕೈಕ ಚಂದ್ರಯಾನಿ ಬುಜ್: ನಾಸಾದ ಗಗನಯಾನಿಗಳಾದ ನೀಲ್ ಆರ್ಮ್ಸ್ಟ್ರಾಂಗ್, ಮಿಚೆಲ್ ಕೋಲಿನ್ಸ್ ಅವರ ಜೊತೆಗೆ 1969 ರಲ್ಲಿ ಬುಜ್ ಅವರು ಅಪೊಲೊ 11 ನೌಕೆಯ ಮೂಲಕ ಚಂದ್ರಯಾನ ಕೈಗೊಂಡು ಮೊದಲ ಬಾರಿಗೆ ಚಂದ್ರನ ಅಂಗಳದಲ್ಲಿ ಪಾದಸ್ಪರ್ಶ ಮಾಡಿ ಬಂದಿದ್ದರು. 1971 ರಲ್ಲಿ ನಾಸಾದಿಂದ ನಿವೃತ್ತರಾಗಿದ್ದರು. ಬಳಿಕ 1998 ರಲ್ಲಿ ಸ್ಪೇಸ್ಶೇರ್ ಎಂಬ ಎನ್ಜಿಒ ತೆರೆದು ಅದರ ಮೂಲಕ ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.
ವಿಶೇಷವೆಂದರೆ ಮಾಜಿ ಗಗನಯಾನಿ ಬುಜ್ ಜೀವಂತ ದಂತಕಥೆಯಾಗಿದ್ದಾರೆ. ಚಂದ್ರನ ಅಂಗಳದಲ್ಲಿ ಕಾಲಿಟ್ಟು ಬಂದ ಮೂವರು ಗಗನಯಾನಿಗಳಲ್ಲಿ ಸದ್ಯ ಬದುಕಿರುವವರು ಬುಜ್ ಅಲ್ಡ್ರಿನ್ ಅವರು ಮಾತ್ರ. ಏನೇ ಆಗಲಿ ಇಳಿವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬುಜ್ಗೆ ಶುಭಾಶಯ ತಿಳಿಸೋಣ.
ಓದಿ: ಬಿಕಾನೇರ್ನಲ್ಲಿ ಕಂಪಿಸಿದ ಭೂಮಿ.. 4 ತಿಂಗಳಲ್ಲಿ 2ನೇ ಸಲ ಪ್ರಕೃತಿ ಮುನಿಸು