ಫ್ಲೋರಿಡಾ (ಅಮೆರಿಕ): ಫ್ಲೋರಿಡಾ ನಗರದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 10 ಮಂದಿ ಗಾಯಗೊಂಡಿದ್ದು, ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಲೇಕೆಲ್ಯಾಂಡ್ ಪೊಲೀಸ್ ಇಲಾಖೆ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಕಡು ನೀಲಿ ಬಣ್ಣದ ಸೆಡಾನ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿದ್ದಾರೆ. ಮೇಲ್ನೋಟಕ್ಕೆ ಉದ್ದೇಶ ಪೂರ್ವಕವಾಗಿ ನಡೆಸಿದ ಕೃತ್ಯದಂತೆ ಗೋಚರಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದ ಬಳಿ ಕಾರನ್ನು ನಿಧಾನಗತಿಯಲ್ಲಿ ಚಲಾಯಿಸಿದ ದುಷ್ಕರ್ಮಿಗಳು ಕಾರಿನ ನಾಲ್ಕು ಕಿಟಕಿಗಳ ಮೂಲಕ ನಾಲ್ಕು ಜನರು ಗುಂಡು ಹಾರಿಸಿದ್ದಾರೆ. ನೆರೆದಿದ್ದ ಗುಂಪಿನ ಮೇಲೆ ಕಾರಿನ ಎರಡು ಬದಿಯಿಂದಲೂ ದಾಳಿ ನಡೆಸಿದ್ದಾರೆ. ನಾಲ್ವರು ಮುಖ ಮುಚ್ಚಿಕೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಪೊಲೀಸರಿಗೆ ತಿಳಿಯುತ್ತಿದ್ದಂತೆ ದುಷ್ಕರ್ಮಿಗಳು ತಮ್ಮ ಕಾರಿನ ವೇಗ ಹೆಚ್ಚಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಸುಳಿವು ಸಿಕ್ಕವರು ತಕ್ಷಣ ಮಾಹಿತಿ ನೀಡುವಂತೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಲೊವಾ ಅವೆನ್ಯೂ ನಾರ್ಥ್ ಮತ್ತು ಪ್ಲಮ್ ಸ್ಟ್ರೀಟ್ನಲ್ಲಿ ಮಧ್ಯಾಹ್ನ 3.43ರ ಸಮಯದಲ್ಲಿ ಈ ಶೂಟಿಂಗ್ ನಡೆದಿದೆ. ಕಾರಿನಲ್ಲಿದ್ದ ದುಷ್ಕರ್ಮಿಗಳೆಲ್ಲರೂ 20 ರಿಂದ 35 ವಯಸ್ಸಿನವರೆಂದು ಗೊತ್ತಾಗಿದೆ. ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿ ಡ್ರಗ್ಸ್ ಪತ್ತೆ: ಈ ಘಟನೆ ನಡೆದ ಸ್ಥಳದಲ್ಲಿ ಡ್ರಗ್ಸ್ ಕೂಡ ಪತ್ತೆಯಾಗಿದೆ. ಇಲ್ಲಿ ನಾರ್ಕೋಟಿಕ್ (ಡ್ರಗ್ಸ್ ಮಾದರಿ ವಸ್ತು) ಮಾರಾಟ ಮಾಡಲಾಗಿದೆಯೇ ಅಥವಾ ಡ್ರಗ್ಸ್ ಅನ್ನು ಈ ವೇಳೆ ಮಾರಾಟ ಮಾಡಲಾಗುತ್ತಿತ್ತೇ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ನನ್ನ 34 ವರ್ಷದ ಸೇವೆಯಲ್ಲಿ ಈ ರೀತಿಯ ಹಲವು ರೀತಿಯ ಗುಂಡಿನ ದಾಳಿ ಪ್ರಕರಣಗಳನ್ನು ನೋಡಿದ್ದೇನೆ. ಆದರೆ ಏಕಕಾಲದಲ್ಲಿ ಹೆಚ್ಚು ಮಂದಿಯ ಮೇಲೆ ದಾಳಿ ನಡೆದ ಘಟನೆ ನೋಡಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.
ಅಮೆರಿಕದಲ್ಲಿ ಇತ್ತೀಚೆಗೆ ನಡೆದ 3 ಪ್ರತ್ಯೇಕ ಗುಂಡಿನ ದಾಳಿ ಪ್ರಕರಣಗಳಲ್ಲಿ ಇಬ್ಬರು ವಿದ್ಯಾರ್ಥಿಗಳೂ ಸೇರಿ ಒಟ್ಟು 9 ಮಂದಿ ಸಾವನ್ನಪ್ಪಿದ್ದರು. ಉತ್ತರ ಕ್ಯಾಲಿಫೋರ್ನಿಯಾ ಮತ್ತು ಐಯೋವಾದಲ್ಲಿ ಕೇವಲ 48 ಗಂಟೆಗಳ ಅಂತರದಲ್ಲಿ ಪ್ರಕರಣಗಳು ನಡೆದಿದ್ದವು. ಇದಕ್ಕೆ ಮೊದಲು ಲಾಸ್ ಏಂಜಲೀಸ್ನಲ್ಲಿ ನಡೆಯುತ್ತಿದ್ದ ಚೀನಿ ಹೊಸವರ್ಷಾಚರಣೆಯ ಮೇಲೂ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಈ ಘಟನೆಯಲ್ಲಿ 11 ಮಂದಿ ಮೃತಪಟ್ಟಿದ್ದರು. ಇದೀಗ ಮತ್ತೊಂದು ದಾಳಿಗೆ ಫ್ಲೋರಿಡಾ ನಡುಗಿದೆ. ಅಮೆರಿಕದಲ್ಲಿ ಗುಂಡಿನ ಮೊರೆತ ಪದೇ ಪದೇ ಕೇಳಿಬರುತ್ತಿದೆ.
ಇದನ್ನೂ ಓದಿ: ಆತ್ಮಾಹುತಿ ದಾಳಿಗೆ 17 ಮಂದಿ ಬಲಿ.. ಪೇಶಾವರದಲ್ಲಿ ಮಾರಣಹೋಮ