ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಅವರ ಪತ್ನಿ ಔತಣ ನೀಡಲಿದ್ದಾರೆ. ಅಮೆರಿಕದ ಪ್ರಥಮ ಮಹಿಳೆ ಹಾಗೂ ಪ್ರಜೆ ನೀಡುವ ಶ್ವೇತಭವನದ ಔತಣಕೂಟಕ್ಕೆ 400 ಅತಿಥಿಗಳನ್ನು ಆಹ್ವಾನಿಸಲಾಗಿದೆ.
ಈ ಔತಣಕೂಟದಲ್ಲಿ ವಿಶೇಷವಾಗಿ ಸಿರಿಧಾನ್ಯ, ಕಾರ್ನ್ ಕರ್ನಲ್ ಸಲಾಡ್ ಮತ್ತು ಸ್ಟಫ್ಡ್ ಮಶ್ರೂಮ್‌ಗಳು ಪ್ರಮುಖವಾಗಿ ಔತಣಕೂಟದ ಮೆನುವಿನಲ್ಲಿ ಟಾಪ್ ಸ್ಥಾನ ಪಡೆದುಕೊಂಡಿವೆ. ಹೇಳಿ ಕೇಳಿ ನಮ್ಮ ಪ್ರಧಾನ ಮಂತ್ರಿ ಸಸ್ಯಾಹಾರಿ. ಈ ಅಂಶವನ್ನು ಗಮನಿಸಿರುವ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್, ಸಸ್ಯಾಹಾರಿ ಪಾಕಪದ್ಧತಿಯಲ್ಲಿ ಪರಿಣತಿ ಹೊಂದಿರುವ ಬಾಣಸಿಗ ನೀನಾ ಕರ್ಟಿಸ್ ಅವರನ್ನು ಶ್ವೇತಭವನದ ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ಮತ್ತು ಅದ್ಭುತವಾದ ಸಸ್ಯಾಹಾರಿ ಮೆನುವನ್ನು ತಯಾರಿಸುವ ಜವಾಬ್ದಾರಿ ನೀಡಿದ್ದಾರೆ.
ಮೋದಿಗೆ ನೀಡುವ ಔತಣಕೂಟದಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ: ಶ್ವೇತಭವನದ ಸೌತ್ ಲಾನ್‌ನಲ್ಲಿ ವಿಶೇಷವಾಗಿ ಅಲಂಕರಿಸಿದ ಪೆವಿಲಿಯನ್‌ನಲ್ಲಿ ಭೋಜನಕ್ಕೆ 400 ಕ್ಕೂ ಹೆಚ್ಚು ಅತಿಥಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ ಬೈಡನ್ ಹೇಳಿದರು. ಭೋಜನದ ಮೊದಲ ಕೋರ್ಸ್ ಮ್ಯಾರಿನೇಡ್ ರಾಗಿ, ಹುರಿದ ಕಾರ್ನ್ ಕರ್ನಲ್ ಸಲಾಡ್, ಕಲ್ಲಂಗಡಿ ಮತ್ತು ಕಟುವಾದ ಆವಕಾಡೊ ಸಾಸ್ ಒಳಗೊಂಡಿರುತ್ತದೆ. ಮುಖ್ಯ ಕೋರ್ಸ್ ಸ್ಟಫ್ಡ್ ಪೋರ್ಟೊಬೆಲ್ಲೊ ಅಣಬೆಗಳು ಮತ್ತು ಕೆನೆ ಕೇಸರಿ - ಇನ್ಫ್ಯೂಸ್ಡ್ ರಿಸೊಟ್ಟೊವನ್ನು ಒಳಗೊಂಡಿರಲಿದೆ.
ಅತಿಥಿಗಳ ಮೆನುವಿನ ಪ್ರಕಾರ ಸುಮಾಕ್ - ಹುರಿದ ಸಮುದ್ರ ಬಾಸ್, ನಿಂಬೆ - ಡಿಲ್ ಮೊಸರು ಸಾಸ್, ಕ್ರಿಸ್ಪ್ಡ್ ಸಿರಿಧಾನ್ಯದ ಕೇಕ್ಗಳು ಮತ್ತು ಸಿಹಿತಿಂಡಿಗಾಗಿ ಗುಲಾಬಿ ಮತ್ತು ಏಲಕ್ಕಿ ತುಂಬಿದ ಸ್ಟ್ರಾಬೆರಿ ಶಾರ್ಟ್‌ಕೇಕ್ ನೀಡಲಾಗುತ್ತದೆ. ಸ್ಟೋನ್ ಟವರ್ ಚಾರ್ಡೋನ್ನೆ "ಕ್ರಿಸ್ಟಿ" 2021, ಪಟೇಲ್ ರೆಡ್ ಬ್ಲೆಂಡ್ 2019 ಮತ್ತು ಡೊಮೈನ್ ಕಾರ್ನೆರೋಸ್ ಬ್ರೂಟ್ ರೋಸ್ ಪಟ್ಟಿಯಲ್ಲಿರುವ ವೈನ್‌ಗಳಾಗಿವೆ.
ಶಾಖಾಹಾರಿ ಎಕ್ಸ್ಪರ್ಟ್ಗಳಿಂದ ಮೆನು ರೆಡಿ: "ಅಮೆರಿಕದ ಪ್ರಥಮ ಮಹಿಳೆಯೊಂದಿಗೆ ಕೆಲಸ ಮಾಡಲು ಮತ್ತು ಅವರ ಪಾಕಶಾಲೆಯಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿರುವುದು ನಿಜವಾಗಿಯೂ ಸಂತಸ ತಂದಿದೆ. ನಾವು ನಿಜವಾಗಿಯೂ ಅಮೆರಿಕನ್ ಪಾಕಪದ್ಧತಿಯಲ್ಲಿ ಅತ್ಯುತ್ತಮವಾದುದನ್ನು ತಯಾರಿಸಿದ್ದೇವೆ. ಭಾರತೀಯ ಸಾಂಪ್ರದಾಯಿಕ ಆಹಾರಗಳನ್ನೂ ತಯಾರಿಸಲಾಗುತ್ತದೆ ಎಂದು ಕ್ಯಾಲಿಫೋರ್ನಿಯಾ ಮೂಲದ ಚೆಫ್ ಕರ್ಟಿಸ್ ಹೇಳಿದ್ದಾರೆ.
"ಭಾರತವು ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವರ್ಷವನ್ನು ಆಚರಿಸಲು ಸನ್ನದ್ಧವಾಗಿದೆ. ಈ ಬಗ್ಗೆ ನಾವು ತುಂಬಾ ಉತ್ಸುಕರಾಗಿದ್ದೇವೆ. ಸಿರಿಧಾನ್ಯ ನಮ್ಮ ವಿಶೇಷ ಮೆನುವಿನಲ್ಲಿ ಭಾರತೀಯ ಪಾಕಪದ್ಧತಿಯ ಅಂಶಗಳಿಗೆ ಅನುಗುಣವಾಗಿ ಸೇರ್ಪಡೆ ಮಾಡಿದ್ದೇವೆ ಎಂದು ಚೆಪ್ ಕರ್ಟಿಸ್ ಹೇಳಿದ್ದಾರೆ.
ಹೀಗಿದೆ ಭೋಜನಕೂಟ ನಡೆಯುವ ಸ್ಥಳದಲ್ಲಿನ ವ್ಯವಸ್ಥೆ: ಪ್ರತಿ ಅತಿಥಿಯ ಇಷ್ಟದ ಅನುಸಾರ ಭೋಜನಗಳನ್ನು ಆಯ್ಕೆ ಮಾಡಲಾಗಿದೆ ಎಂದು ಶ್ವೇತಭವನದ ಸಾಮಾಜಿಕ ಕಾರ್ಯದರ್ಶಿ ಕಾರ್ಲೋಸ್ ಎಲಿಜಾಂಡೋ ಹೇಳಿದ್ದಾರೆ. ಭೋಜನಕೂಟ ಸ್ಥಳದ ಅಲಂಕಾರವು ಭಾರತೀಯ ಧ್ವಜ ಸೇರಿದಂತೆ ಯುಎಸ್ ಮತ್ತು ಭಾರತದ ಸಂಪ್ರದಾಯ ಮತ್ತು ಸಂಸ್ಕೃತಿಗಳನ್ನು ಗೌರವಿಸುವ ಅಂಶಗಳನ್ನು ಒಳಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
" ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲಿನಿಂದ ನಮಗೆ ವಿನ್ಯಾಸದ ಸ್ಫೂರ್ತಿ ಸಿಕ್ಕಿತು. ಕಾರ್ಯಕ್ರಮಗಳ ಆಹ್ವಾನದಿಂದ ಮಂಟಪದವರೆಗೆ, ನವಿಲು ಹೇಗೆ ತನ್ನ ಗರಿ ಬಿಚ್ಚಿ ಹಾರಾಡಿದಾಗ, ಅದರ ವರ್ಣರಂಜಿತ ಸೌಂದರ್ಯ, ಗಾಂಭೀರ್ಯ ಮತ್ತು ಶಕ್ತಿ ಅನಾವರಣ ಆಗುತ್ತದೆಯೋ ಹಾಗೆ, ನಾವು ಔತಣಕೂಟದ ವ್ಯವಸ್ಥೆಯನ್ನು ನಿರ್ಮಿಸಲು ಬಯಸಿದ್ದೇವೆ, ಹಾಗೆಯೇ ತಯಾರಿ ಮಾಡಿದ್ದೇವೆ‘‘ ಎಂದು ಶ್ವೇತಭವನದ ಸಾಮಾಜಿಕ ಕಾರ್ಯದರ್ಶಿ ಕಾರ್ಲೋಸ್ ಹೇಳಿದ್ದಾರೆ.
ಪ್ರತಿ ಟೇಬಲ್‌ನಲ್ಲಿ ದೊಡ್ಡ ಮತ್ತು ಸಣ್ಣ ಹೂದಾನಿಗಳಲ್ಲಿ ಹೂವುಗಳ ಜೋಡಣೆ ಮಾಡಲಾಗಿದೆ. ಹೂವುಗಳ ಬಣ್ಣವು ಭಾರತದ ಧ್ವಜದ ಕೇಸರಿ ಮತ್ತು ಅದು ಪ್ರತಿನಿಧಿಸುವ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಸುತ್ತಲೂ ಕಮಲದ ಹೂವುಗಳು ಭಾರತದ ಪ್ರಮುಖ ಸಂಕೇತಗಳಾಗಿವೆ ಎಂದು ಶ್ವೇತಭವನದ ಕಾರ್ಯದರ್ಶಿಗಳು ಔತಣಕೂಟದ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೋದಿ ಅವರು ನ್ಯೂಯಾರ್ಕ್‌ನಿಂದ ಇಂದು ವಾಷಿಂಗ್ಟನ್ಗೆ ಆಗಮಿಸಿದ್ದಾರೆ. ನಿನ್ನೆ ನ್ಯೂಯಾರ್ಕ್ನ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯ ಲಾನ್‌ನಲ್ಲಿ ವಿಶ್ವಯೋಗ ದಿನದ ನೇತೃತ್ವವನ್ನು ಮೋದಿ ವಹಿಸಿಕೊಂಡಿದ್ದರು. ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಆಹ್ವಾನದ ಮೇರೆಗೆ ಮೋದಿ ಅವರು ಜೂನ್ 21 ರಿಂದ 24 ರವರೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.
ಇದನ್ನು ಓದಿ: ಮೋದಿಯನ್ನು ಆತ್ಮೀಯವಾಗಿ ಬರಮಾಡಿಕೊಂಡ ಅಮೆರಿಕ ಅಧ್ಯಕ್ಷ.. ಬೈಡನ್ ದಂಪತಿಯಿಂದ ಉಡುಗೊರೆ ಪಡೆಯಲಿರುವ ಪ್ರಧಾನಿ