ರಿಯೋ ಡಿ ಜನೈರೋ( ಬ್ರೆಜಿಲ್) : ವಿಚ್ಛೇದನದ ಮೂಲಕ ಬೇಡವಾದ ಮದುವೆ ಸಂಬಂಧವನ್ನು ಕೊನೆಗೊಳಿಸಿದ ನಂತರ ಆ ಖುಷಿಯಲ್ಲಿ ಚಿತ್ರ ವಿಚಿತ್ರವಾಗಿ, ವಿಲಕ್ಷಣವಾಗಿ ಸಂಭ್ರಮಾಚರಣೆ ಮಾಡುವುದು ಇತ್ತೀಚೆಗೆ ಹೊಸ ಫ್ಯಾಷನ್ ಆಗುತ್ತಿದೆ. ಸಂಬಂಧವೊಂದನ್ನು ಕಡಿದುಕೊಂಡಾಗ ಆ ಸಂದರ್ಭವನ್ನು ಮತ್ತಷ್ಟು ಖುಷಿಯಾಗಿಸಲು ಜನ ಏನನ್ನಾದರೂ ಮಾಡಬೇಕು ಅಂದುಕೊಳ್ಳುತ್ತಾರೆ. ಇದೇ ರೀತಿ ತನ್ನ ವಿವಾಹ ಬಂಧನವನ್ನು ಅಂತ್ಯಗೊಳಿಸಿಕೊಂಡ ವ್ಯಕ್ತಿಯೊಬ್ಬ ಸಂಭ್ರಮಾಚರಣೆ ಮಾಡಲು ಹೋಗಿ ಕುತ್ತಿಗೆಯಲ್ಲಿನ ಮೂಳೆ ಮುರಿದುಕೊಂಡ ಘಟನೆ ಜರುಗಿದೆ.
ಈ ಘಟನೆ ನಡೆದಿದ್ದು ಬ್ರೆಜಿಲ್ನಲ್ಲಿ. ರಫಾಲೆ ಡೋಸ್ ಸಾಂಟೋಸ್ ತೋಸ್ತಾ ಎಂಬಾತ ಬ್ರೆಜಿಲ್ನ ಕಾಂಪೊ ಮಾಗ್ರೊ ಬಳಿಯ ಲಾಗು ಅಜುಲ್ (ಬ್ಲೂ ಲಗೂನ್) ನಲ್ಲಿ ಖುಷಿಯಲ್ಲಿ ಬಂಗೀ ಜಂಪಿಂಗ್ ಮಾಡಲು ಹೋಗಿದ್ದ. ಆದರೆ, ವಿವಾಹ ವಿಚ್ಛೇದನದ ಸಂಭ್ರಮಾಚರಣೆ ಮಾಡುವುದು ಹಾಗಿರಲಿ, ಇವಾಗ ಈತ ಸಾವಿನಿಂದ ಜಸ್ಟ್ ಪಾರಾಗಿ ಬಂದಿರುವುದು ದೊಡ್ಡ ವಿಷಯವಾಗಿದೆ. ಲಾಗು ಅಜುಲ್ನಲ್ಲಿ ಬಳಕೆಯಲ್ಲಿಲ್ಲದ ಕ್ವಾರಿಯೊಂದರಲ್ಲಿ ಈತ ಬ್ರಿಜ್ ಸ್ವಿಂಗ್ (ಸೇತುವೆ ಮಾದರಿಯಲ್ಲಿ ನೇತಾಡುವ) ಸಾಹಸ ಮಾಡಲು ಮುಂದಾಗಿದ್ದ.
ಬ್ರಿಜ್ ಸ್ವಿಂಗ್ ಎಂಬುದು ಸಾಮಾನ್ಯವಾಗಿ ಬಂಗೀ ಜಂಪಿಂಗ್ ರೀತಿಯಲ್ಲೇ ಇರುತ್ತದೆ. ಆದರೆ, ಇದರಲ್ಲಿ ಹ್ಯೂಮನ್ ಪೆಂಡುಲಮ್ ಆಗುವ ಮೊದಲೇ ಕೆಳಕ್ಕೆ ಬೀಳುವ ಹಾಗೂ ದೊಡ್ಡ ವೃತ್ತಾಕಾರದಲ್ಲಿ ನೇತಾಡುವ ಸಾಹಸ ಇರುತ್ತದೆ. ಆದರೆ, ಹೀಗೆ ಮಾಡುವಾಗ ಆಯ ತಪ್ಪಿ 70 ಅಡಿ ಪ್ರಪಾತಕ್ಕೆ ಬಿದ್ದ ಆತನ ಕುತ್ತಿಗೆಯಲ್ಲಿನ ಮೂಳೆಯೊಂದು ತುಂಡಾಗಿದೆ. ಆದರೆ ಹೇಗೋ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಶಾಶ್ವತವಾದ ಗಾಯಗಳೊಂದಿಗೆ ಆಶ್ಚರ್ಯಕರವಾಗಿ ಬದುಕುಳಿದಿರುವ ಆತ ತನ್ನ ಭಯಾನಕ ಅನುಭವವನ್ನು ಹೇಳಿಕೊಂಡಿದ್ದಾನೆ. "ನಾನು ಸಾಮಾನ್ಯವಾಗಿ ತುಂಬಾ ಶಾಂತ ವ್ಯಕ್ತಿಯಾಗಿದ್ದೆ. ಆದರೆ ಇತ್ತೀಚೆಗೆ ಜೀವನದಲ್ಲಿ ನಡೆದ ಕೆಲ ಘಟನೆಗಳ ನಂತರ ನಾನು ಬೇರೆ ರೀತಿ ಆಲೋಚನೆ ಮಾಡತೊಡಗಿದ್ದೆ. ವಿಚ್ಛೇದನದ ನಂತರ, ನಾನು ಸಾಧ್ಯ ಇರುವ ಎಲ್ಲ ರೀತಿಯಲ್ಲಿ ಜೀವನ ಆನಂದಿಸಲು ಬಯಸಿದ್ದೆ. ನಾನು ಬಹಳಷ್ಟು ಹುಚ್ಚುತನದ ಕೆಲಸಗಳನ್ನು ಮಾಡುತ್ತಿದ್ದೆ. ನಾನು ನನ್ನ ಜೀವಕ್ಕೆ ಬೆಲೆ ಕೊಡುತ್ತಿರಲಿಲ್ಲ" ಎಂದು ಆತ ಹೇಳಿಕೊಂಡಿದ್ದಾನೆ.
ಇತ್ತೀಚೆಗಷ್ಟೇ ಮಹಿಳೆಯೊಬ್ಬರು ಫೋಟೋಶೂಟ್‌ನಲ್ಲಿ ಭಾಗವಹಿಸುವ ಮೂಲಕ ವಿಚ್ಛೇದನ ಸಂಭ್ರಮಿಸಿದ್ದರು. ಮಹಿಳೆಯ ಇನ್ ಸ್ಟಾಗ್ರಾಮ್ ಬಯೋ ಪ್ರಕಾರ ಆರ್ಟಿಸ್ಟ್ ಮತ್ತು ಫ್ಯಾಶನ್ ಡಿಸೈನರ್ ಆಗಿರುವ ಶಾಲಿನಿ ಅವರು ಕೆಂಪು ಬಟ್ಟೆಯನ್ನು ಧರಿಸಿರುವ ಮತ್ತು "divorced" ಎಂದು ಬರೆದ ಪ್ಲೆಕಾರ್ಡ್ ಹಿಡಿದಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇತರ ಫೋಟೋಗಳಲ್ಲಿ, ಅವಳು ತನ್ನ ಮತ್ತು ತನ್ನ ಮಾಜಿ ಗಂಡನ ಫೋಟೋವನ್ನು ಹರಿದು ಹಾಕುತ್ತಿರುವುದನ್ನು ಕಾಣಬಹುದು ಮತ್ತು "ನನಗೆ 99 ಸಮಸ್ಯೆಗಳಿವೆ ಆದರೆ ಪತಿ ಎಂಬ ತಾಪತ್ರಯ ಮಾತ್ರ ಇಲ್ಲ" ಎಂದು ಬರೆದ ಸೈನ್‌ಬೋರ್ಡ್‌ನೊಂದಿಗೆ ಪೋಸ್ ನೀಡಿರುವ ಚಿತ್ರ ಇತ್ತೀಚೆಗೆ ಸಾಕಷ್ಟು ವೈರಲ್ ಆಗಿದೆ.
ಇದನ್ನೂ ಓದಿ : ಮುಸ್ಲಿಂ ಕೋಟಾ ಬಗ್ಗೆ ರಾಜಕೀಯ ಹೇಳಿಕೆ ನೀಡದಂತೆ ಸುಪ್ರೀಂ ಕೋರ್ಟ್ ಆದೇಶ