ಹೈದರಾಬಾದ್: ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದ ಯುವತಿಯೊಬ್ಬಳು ಜನ ಸಾಮಾನ್ಯರೊಬ್ಬನನ್ನು ಪ್ರೀತಿಸುತ್ತಿದ್ದಳು. ಹೆತ್ತವರು ನಿರಾಕರಿಸಿದರೂ ಆಕೆ, ತಾನು ಪ್ರೀತಿಸುತ್ತಿದ್ದ ಯುವಕನನ್ನೇ ಮದುವೆ ಆಗುವುದಾಗಿ ಹಠ ಹಿಡಿದಳು. ಆತನನ್ನೇ ವರಿಸಲು ಸಿದ್ಧವಾಗಿದ್ದಳು. ಅದಲ್ಲದೇ, ಸಾವಿರಾರು ಕೋಟಿ ಮೌಲ್ಯದ ಪೂರ್ವಿಕರ ಆಸ್ತಿ ಅಥವಾ ಪ್ರೇಮ ವಿವಾಹವನ್ನು ಆಯ್ಕೆ ಮಾಡಿಕೊಳ್ಳುವಂತೆ ಆಕೆಯ ಪೋಷಕರು ಕೇಳಿದರು. ಆದರೆ, ಅವಳು ಎರಡನೇಯದನ್ನು ಆರಿಸಿಕೊಂಡಿದ್ದಾಳೆ.
ಆ ಹುಡುಗಿ ಮಲೇಷಿಯಾದ ಉದ್ಯಮಿಯೊಬ್ಬನ ಪುತ್ರಿ. ತನ್ನ ಪ್ರಿಯತಮನಿಗಾಗಿ ಎಲ್ಲವನ್ನೂ ತ್ಯಜಿಸಿ ಮನೆಯಿಂದ ಹೊರ ಬಂದಿದ್ದಾಳೆ. ತನಗೆ ಇಷ್ಟವಾದ ಜೀವನ ಆಯ್ಕೆ ಮಾಡಿಕೊಂಡು ಮುಂದೆ ಹೆಜ್ಜೆ ಇಟ್ಟಿದ್ದಾಳೆ.
ತನ್ನ ಪ್ರೀತಿಗಾಗಿ 2,000 ಕೋಟಿ ರೂ. ಆಸ್ತಿ ಬಿಟ್ಟುಕೊಟ್ಟ ಯುವತಿ: ಮಲೇಷ್ಯಾದ ಯುವತಿ ಏಂಜೆಲಿನ್ ಫ್ರಾನ್ಸಿಸ್ ಖೂ, ಪ್ರಸಿದ್ಧ ಉದ್ಯಮಿ ಖೂ ಕೇ ಪೆಂಗ್ ಹಾಗೂ ಮಲೇಷ್ಯಾ ಪಾಲಿನ್ ಚಾಯ್ ಅವರ ಪುತ್ರಿ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ, ಅವಳು ಜೆಡಿಡಿಯಾ ಫ್ರಾನ್ಸಿಸ್ ಎಂಬ ಸ್ನೇಹಿತನನ್ನು ಪ್ರೀತಿಸುತ್ತಿದ್ದಳು. ಮದುವೆಯಾಗಲು ಸಿದ್ಧವಾಗಿದ್ದ ಆಕೆ ಈ ವಿಚಾರವನ್ನು ಪೋಷಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಳು. ಆದರೆ, ಅವರು ನಿರಾಕರಿಸಿದರು. ಆರ್ಥಿಕವಾಗಿ ಎರಡು ಕುಟುಂಬಗಳ ನಡುವೆ ಅಗಾಧವಾದ ವ್ಯತ್ಯಾಸವಿದೆ.
ಕೊನೆಗೆ ತನ್ನ ಬಾಯ್ ಫ್ರೆಂಡ್ ಜೊತೆ ಜೀವನ ನಡೆಸಲು ನಿರ್ಧರಿಸಿ ತಾನು ಹುಟ್ಟಿ ಬೆಳೆದ ಮನೆ ಬಿಟ್ಟಿದ್ದಾಳೆ. ಈ ಜೋಡಿ 2008ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಈ ಮೂಲಕ ಹೊಸ ಜೀವನ ಪ್ರಾರಂಭಿಸಿದೆ. ತಮ್ಮ ಪ್ರೀತಿಗಾಗಿ ಏಂಜೆಲಿನ್ ಫ್ರಾನ್ಸಿಸ್ 2,000 ಕೋಟಿ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿ ಬಿಟ್ಟುಕೊಟ್ಟಿರುವುದು ಪ್ರೀತಿ ಆಸ್ತಿಗಿಂತ ದೊಡ್ಡದು ಎಂಬುದನ್ನು ತೋರಿಸಿಕೊಟ್ಟಿದೆ.
ಮದುವೆಯ ನಂತರ ಇಬ್ಬರೂ ಕುಟುಂಬದಿಂದ ದೂರವೇ ಉಳಿದಿದ್ದಾರೆ. ಆದಾಗ್ಯೂ, ಏಂಜೆಲಿನ್ ಫ್ರಾನ್ಸಿಸ್ ಖೂ ಒಮ್ಮೆ ತನ್ನ ಹೆತ್ತವರನ್ನು ಭೇಟಿಯಾಗಬೇಕಾಯಿತು. ಕಾರಣ, ಅವಳ ಪೋಷಕರು ವಿಚ್ಛೇದನ ಪಡೆದಿದ್ದಾರೆ. ಇದಕ್ಕಾಗಿ ಏಂಜೆಲಿನ್ ಫ್ರಾನ್ಸಿಸ್ ಖೂ, ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಹೋಗಿದ್ದಳು. ಕುಟುಂಬಕ್ಕೆ ಮಾಡಿದ ಸೇವೆಗಳಿಗಾಗಿ ಯುವತಿ ತನ್ನ ತಾಯಿಯನ್ನು ಹಾಡಿ ಹೊಗಳಿದ್ದಾಳೆ. ಆದರೆ, ತನ್ನ ತಂದೆಯ ಬಗ್ಗೆ ಯುವತಿ ಬೇಸರ ವ್ಯಕ್ತಪಡಿಸಿದ್ದಾಳೆ. ತಂದೆ- ತಾಯಿ ಇಬ್ಬರೂ ಮತ್ತೆ ಒಂದಾಗುತ್ತಾರೆ ಎಂಬ ಭರವಸೆಯನ್ನು ಆಕೆ ವ್ಯಕ್ತಪಡಿಸಿದ್ದಾಳೆ. ಕುತೂಹಲಕಾರಿಯಾದ ಈ ಜೋಡಿಯ ಪ್ರೇಮಕಥೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇಂದಿನ ಭೌತಿಕ ಜಗತ್ತಿನಲ್ಲಿ ಜನರು, ತಮ್ಮ ಪೂರ್ವಿಕರ ಆಸ್ತಿಯನ್ನು ಪಡೆಯಲು ಮತ್ತು ಗಳಿಸಲು ಯಾವುದೇ ಹಂತಕ್ಕೆ ಇಳಿಯುತ್ತಾರೆ. ಏಂಜಲಿನ್ ಫ್ರಾನ್ಸಿಸ್ ಖೂ ಅವರ ನಿಜವಾದ ಪ್ರೀತಿ ಎಲ್ಲರ ಹೃದಯಗಳನ್ನು ಗೆಲ್ಲುತ್ತದೆ. ಆಕೆಯ ನಿಜವಾದ ಪ್ರೀತಿಯನ್ನು ಸಾಮಾಜಿಕ ಜಾಲತಾಣದ ಬಳಕೆದಾರರು ಶ್ಲಾಘಿಸುತ್ತಿದ್ದಾರೆ.
ಇದನ್ನೂ ಓದಿ: Dowry case: ₹30 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು ಮದುವೆ ಮುಂದೂಡಿದ ವರ; ನೊಂದು ವಿಡಿಯೋ ಮಾಡಿಟ್ಟು ವಧು ಆತ್ಮಹತ್ಯೆ