ಬೀಜಿಂಗ್(ಚೀನಾ) : ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತವನ್ನು ಟೀಕಿಸಿ ಸಂಕಷ್ಟಕ್ಕೀಡಾಗಿರುವ ಮಾಲ್ಡೀವ್ಸ್ ಚೀನಾದ ಬಾಲ ಹಿಡಿದಿದೆ. ಭಾರತದ ಪ್ರವಾಸಿಗರು ದ್ವೀಪರಾಷ್ಟ್ರಕ್ಕೆ ಬಹಿಷ್ಕಾರ ಹಾಕಿದ್ದಕ್ಕೆ ಬೆದರಿದ್ದು, ಚೀನಾದಿಂದ ಪ್ರವಾಸಿಗರನ್ನು ಹೆಚ್ಚೆಚ್ಚು ಕಳುಹಿಸಿಕೊಡಿ ಎಂದು ಅಲ್ಲಿನ ಸರ್ಕಾರಕ್ಕೆ ದುಂಬಾಲು ಬಿದ್ದಿದೆ.
ಐದು ದಿನಗಳ ಚೀನಾ ಪ್ರವಾಸದಲ್ಲಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು, ಮಂಗಳವಾರ ಫುಜಿಯಾನ್ ಪ್ರಾಂತ್ಯದಲ್ಲಿ ಮಾಲ್ಡೀವ್ಸ್ ಬ್ಯುಸಿನೆಸ್ ಫೋರಂನಲ್ಲಿ ಮಾತನಾಡಿ, ಚೀನಾ ನಮ್ಮ (ಮಾಲ್ಡೀವ್ಸ್) ಹತ್ತಿರದ ಮಿತ್ರ. ಉಭಯ ದೇಶಗಳ ನಡುವೆ ಹೆಚ್ಚಿನ ವಹಿವಾಟುಗಳು ನಡೆಯಬೇಕು. ನಮ್ಮ ಮೊದಲ ಆದ್ಯತೆ ಚೀನಾಕ್ಕೆ ಇರಲಿದ್ದು, ನಮ್ಮ ದೇಶಕ್ಕೆ ಇಲ್ಲಿಂದ ಹೆಚ್ಚೆಚ್ಚು ಪ್ರವಾಸಿಗರನ್ನು ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದಾರೆ.
ಚೀನಾ ಜೊತೆ ಪ್ರವಾಸೋದ್ಯಮ ಒಪ್ಪಂದ: ಹಿಂದೂ ಮಹಾಸಾಗರದ ದ್ವೀಪದಲ್ಲಿ ಸಮಗ್ರ ಪ್ರವಾಸೋದ್ಯಮ ವಲಯವನ್ನು ಅಭಿವೃದ್ಧಿಪಡಿಸಲು ಉಭಯ ದೇಶಗಳು 50 ಮಿಲಿಯನ್ ಡಾಲರ್ ಯೋಜನೆಗೆ ಸಹಿ ಹಾಕಿವೆ ಎಂದು ವರದಿಯಾಗಿದೆ. ಜೊತೆಗೆ 2014 ರಲ್ಲಿ ಚೀನಾ ಪ್ರಾರಂಭಿಸಿದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (ಬಿಆರ್ಐ) ಯೋಜನೆಗಳನ್ನು ಮಾಲ್ಡೀವ್ಸ್ ಅಧ್ಯಕ್ಷ ಶ್ಲಾಘಿಸಿದ್ದಾರೆ. ಮಾಲ್ಡೀವಿಯನ್ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮೂಲಸೌಕರ್ಯ ಯೋಜನೆಗಳನ್ನು ಇದರಿಂದ ತಲುಪಲಿದೆ ಎಂದಿದ್ದಾರೆ.
ಕೋವಿಡ್ ಪೂರ್ವ ಚೀನಾ ನಮ್ಮ (ಮಾಲ್ಡೀವ್ಸ್‌ನ) ಮೊದಲ ಮಾರುಕಟ್ಟೆಯಾಗಿತ್ತು. ಈಗ ಚೀನಾ ಮತ್ತೆ ಆ ಸ್ಥಾನವನ್ನು ಮರಳಿ ಪಡೆಯಲು ನಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕು ಎಂಬುದಾಗಿ ಹೇಳಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಭಾರತದ ಜೊತೆ ಕಿತ್ತಾಡಿದ ಮಾಲ್ಡೀವ್ಸ್: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೊಬಗಿನ ಬಗ್ಗೆ ಚಿತ್ರ, ವಿಡಿಯೋಗಳನ್ನು ಹಂಚಿಕೊಂಡಿದ್ದರು. ಭಾರತೀಯರು ಈ ಸ್ಥಳವನ್ನು ಪ್ರವಾಸದ ಭಾಗವಾಗಿ ಮಾಡಿಕೊಳ್ಳಲು ಉತ್ತಮವಾಗಿದೆ ಎಂದು ಹೇಳಿದ್ದರು. ಇಷ್ಟಕ್ಕೆ ಕುಪಿತಗೊಂಡ ಮಾಲ್ಡೀವ್ಸ್‌ನ ಕೆಲ ಸಚಿವರು, ಪ್ರಧಾನಿ ಮೋದಿ ವಿರುದ್ಧ ವೈಯಕ್ತಿಕವಾಗಿ ವಾಗ್ದಾಳಿ ಮಾಡಿದ್ದರು. ಇದು ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿದೆ.
ಮಾಲ್ಡೀವ್ಸ್ ಪ್ರವಾಸಕ್ಕೆ ಭಾರತೀಯರು ಬಹಿಷ್ಕಾರ ಹಾಕಿದ್ದಾರೆ. ಟೂರ್ ಆಪರೇಟರ್ಸ್ ದ್ವೀಪರಾಷ್ಟ್ರಕ್ಕೆ ವಿಮಾನ ಸಂಚಾರಗಳನ್ನು ರದ್ದು ಮಾಡಿದ್ದಾರೆ. ಸೆಲೆಬ್ರಿಟಿಗಳು ಭಾರತದ ಪ್ರವಾಸಿಗ ತಾಣಗಳನ್ನು ಮೊದಲ ಆಯ್ಕೆ ಮಾಡಿಕೊಳ್ಳಬೇಕು ಎಂದು ಮಾಲ್ಡೀವ್ಸ್ ವಿರುದ್ಧ ತಿರುಗಿಬಿದ್ದಿದ್ದಾರೆ. ಇದು ಮಾಲ್ಡೀವ್ಸ್ ಅನ್ನು ಕಂಗಾಲು ಮಾಡಿದೆ.
ಅಂಕಿ ಅಂಶದ ಪ್ರಕಾರ, ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್‌ಗೆ ಭೇಟಿ ನೀಡುತ್ತಾರೆ. 2018 ರಲ್ಲಿ ಭಾರತದಿಂದ ಅನೇಕ ಪ್ರವಾಸಿಗರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು. ಭಾರತವು ಮಾಲ್ಡೀವ್ಸ್‌ಗೆ ಪ್ರವಾಸಿಗರ ಆಗಮನದ 5ನೇ ಅತಿದೊಡ್ಡ ಮೂಲವಾಗಿದೆ. 14,84,274 ಪ್ರವಾಸಿಗರಲ್ಲಿ ಸುಮಾರು 6.1% (90,474 ಕ್ಕಿಂತ ಹೆಚ್ಚು) ಪ್ರವಾಸಿಗರು ಭಾರತದಿಂದ ಬಂದವರು. 2018 ಕ್ಕೆ ಹೋಲಿಸಿದರೆ 2019ರಲ್ಲಿ ಭಾರತದಿಂದ ಮಾಲ್ಡೀವ್ಸ್‌ಗೆ ಹೋಗುವ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ. 2019 ರಲ್ಲಿ 1,66,030 ಪ್ರವಾಸಿಗರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು.
ಇದನ್ನೂ ಓದಿ: ರಾಜತಾಂತ್ರಿಕ ಬಿಕ್ಕಟ್ಟು: ಚೀನಾ ಪ್ರವಾಸದ ಬಳಿಕ ಭಾರತಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಭೇಟಿ ಸಾಧ್ಯತೆ