ಕೈರೋ (ಈಜಿಪ್ಟ್): ಉತ್ತರ ಆಫ್ರಿಕಾದ ದೇಶ ಲಿಬಿಯಾದ ಪೂರ್ವಭಾಗಗಳಲ್ಲಿ ಭೀಕರ ಪ್ರವಾಹದ ಅಬ್ಬರಕ್ಕೆ ಸಿಲುಕಿ ಸುಮಾರು 5,000ಕ್ಕೆ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಸಾವಿರಾರು ನಿವಾಸಿಗಳು ನಾಪತ್ತೆಯಾಗಿದ್ದಾರೆ. ಕರಾವಳಿ ಪಟ್ಟಣಗಳಲ್ಲಿ ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಮೆಡಿಟರೇನಿಯನ್ ಚಂಡಮಾರುತ ಡೇನಿಯನ್‌ನಿಂದಾಗಿ ಭೀಕರ ಪ್ರವಾಹ ಉಂಟಾಗಿದೆ.
ಲಿಬಿಯಾದ ಪೂರ್ವ ನಗರವಾದ ಡರ್ನಾದಲ್ಲಿ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದರವ ಅವಶೇಷಗಳನ್ನು ಅಗೆದು ಹೊರ ತೆಗೆಯಲಾಗುತ್ತಿದೆ. ರಕ್ಷಣಾ ಪಡೆ ಸಿಬ್ಬಂದಿ ನೂರಾರು ಶವಗಳನ್ನು ಹೊರತೆಗೆದಿದ್ದಾರೆ. ಪ್ರವಾಹದ ನೀರು ಅಣೆಕಟ್ಟೆಯನ್ನು ಧ್ವಂಸ ಮಾಡಿದ್ದು, ಈ ಮಹಾ ದುರಂತದಲ್ಲಿ ಸುಮಾರು 10,000 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಹೊರ ತೆಗೆಯಲಾದ ಕನಿಷ್ಠ 700 ಶವಗಳನ್ನು ಇಲ್ಲಿಯವರೆಗೆ ಸಮಾಧಿ ಮಾಡಲಾಗಿದೆ ಎಂದು ಪೂರ್ವ ಲಿಬಿಯಾದ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ಡರ್ನಾ ಆಂಬ್ಯುಲೆನ್ಸ್ ಪ್ರಾಧಿಕಾರವು ಪ್ರಸ್ತುತ ಸಾವಿನ ಸಂಖ್ಯೆಯನ್ನು 5000ಕ್ಕೂ ಹೆಚ್ಚು ಎಂದು ಹೇಳಿದೆ.
ಆದರೆ, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟೀಸ್‌ನ ಲಿಬಿಯಾ ರಾಯಭಾರಿ ತಮೆರ್ ರಂಜಾನ್ ಹೇಳಿದ್ದಾರೆ. ಕನಿಷ್ಠ 10,000 ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ಅವರು ಟುನೀಶಿಯಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡಿದ್ದಾರೆ. ಲಿಬಿಯಾದಲ್ಲಿನ ಪರಿಸ್ಥಿತಿಯು ಮೊರಾಕೊದಲ್ಲಿನ ಪರಿಸ್ಥಿತಿಯಂತೆ ವಿನಾಶಕಾರಿಯಾಗಿದೆ ಎಂದು ರಂಜಾನ್ ಹೇಳಿದ್ದಾರೆ.
ಇಬ್ಬಾಗವಾದ ಲಿಬಿಯಾ: ಒಂದು ದಶಕಕ್ಕೂ ಹೆಚ್ಚು ಕಾಲ ಲಿಬಿಯಾದ ಡೆರ್ನಾ ನಗರ ಇಸ್ಲಾಮಿಕ್ ಉಗ್ರಗಾಮಿಗಳ ಹಿಡಿತದಲ್ಲಿದ್ದು, ನುಲುಗಿಹೋಗಿತ್ತು. ಇದೀಗ ಭಾರಿ ಪ್ರವಾಹಕ್ಕೆ ಸಿಲುಕಿದೆ. ಲಿಬಿಯಾ ಎರಡು ಪ್ರತಿಸ್ಪರ್ಧಿ ಆಡಳಿತಗಳ ನಡುವೆ ವಿಭಜಿಸಲ್ಪಟ್ಟಿದೆ. ಪೂರ್ವ ಮತ್ತು ಪಶ್ಚಿಮ ಭಾಗಗಳಾಗಿ ಇಬ್ಭಾಗವಾಗಿದೆ.
ನಗರದ ನಿವಾಸಿಗಳು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋಗಳು ಪ್ರಾಕೃತಿಕ ವಿಕೋಪದ ಭೀಕರತೆಯನ್ನು ತೋರಿಸುತ್ತವೆ. ಪರ್ವತಗಳಿಂದ ನಗರ ಕೇಂದ್ರದ ಮೂಲಕ ಹರಿಯುವ ನದಿಯುದ್ದಕ್ಕೂ ವಸತಿ ಪ್ರದೇಶಗಳು ಸಂಪೂರ್ಣ ನಾಶವಾಗಿವೆ. ಬಹುಮಹಡಿ ಅಪಾರ್ಟ್‌ಮೆಂಟ್ ಕಟ್ಟಡಗಳು ಭಾಗಶಃ ಕುಸಿದಿವೆ.
ತುರ್ತು ಪರಿಸ್ಥಿತಿ ಘೋಷಣೆ: ಸೋಮವಾರ ಅಲ್-ಮಸಾರ್ ಟೆಲಿವಿಷನ್ ಸ್ಟೇಷನ್‌ಗೆ ದೂರವಾಣಿ ಮೂಲಕ ಮಾತನಾಡಿದ ಪೂರ್ವ ಲಿಬಿಯಾ ಸರ್ಕಾರದ ಪ್ರಧಾನಿ ಒಸ್ಸಾಮಾ ಹಮದ್, ''ಡರ್ನಾದಲ್ಲಿ ಭೀಕರ ಪ್ರವಾಹಕ್ಕೆ 5 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನರು ಕಾಣೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಡರ್ನಾವನ್ನು ವಿಪತ್ತು ವಲಯ ಎಂದು ಘೋಷಿಸಲಾಗಿದೆ" ಎಂದು ಹೇಳಿದ್ದಾರೆ.
ಪೂರ್ವದಲ್ಲಿ ನೆಲೆಗೊಂಡಿರುವ ದೇಶದ ಸಶಸ್ತ್ರ ಪಡೆಗಳ ವಕ್ತಾರ ಅಹ್ಮದ್ ಅಲ್-ಮೊಸ್ಮರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, "ಅಂದಾಜು 10 ರಿಂದ 11 ಸಾವಿರ ಜನರು ಕಾಣೆಯಾಗಿರುವ ಮಾಹಿತಿ ದೊರೆತಿದೆ. ಎರಡು ಅಣೆಕಟ್ಟುಗಳ ಕುಸಿತದಿಂದಾಗಿ ದುರಂತದ ತೀವ್ರತೆ ಹೆಚ್ಚಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನೈಜೀರಿಯಾದಲ್ಲಿ ದೋಣಿ ಮುಳುಗಿ 24 ಮಂದಿ ಸಾವು, ಹಲವರು ನಾಪತ್ತೆ