ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟನಿಯೋ ಗುಟೆರಸ್ ಅವರು ಭಾರತದ ಲೆಫ್ಟಿನೆಂಟ್ ಜನರಲ್ ಮೋಹನ್ ಸುಬ್ರಮಣಿಯನ್ ಅವರನ್ನು ದಕ್ಷಿಣ ಸುಡಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಕಮಾಂಡರ್ ಆಗಿ ನೇಮಿಸಿದ್ದಾರೆ. ಭಾರತದ ಲೆ.ಜ.ಶೈಲೇಶ್ ತಿನೈಕರ್ ನಂತರ ದಕ್ಷಿಣ ಸುಡಾನ್‌ನಲ್ಲಿನ ವಿಶ್ವಸಂಸ್ಥೆ ಮಿಷನ್ (ಯುಎನ್‌ಎಂಐಎಸ್‌ಎಸ್)ನ ಫೋರ್ಸ್ ಕಮಾಂಡರ್ ಆಗಿ ಸುಬ್ರಮಣಿಯನ್ ನೇಮಕವಾಗಿದ್ದಾರೆ.
ದ.ಸುಡಾನ್‌ನಲ್ಲಿ ಯುಎನ್ ಮಿಷನ್ 2011ರಲ್ಲಿ ಶುರುವಾಗಿತ್ತು. ಶಾಂತಿಪಾಲನಾ ಪಡೆಯ 17,982 ಸಿಬ್ಬಂದಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತವು 2,385 ಸೈನಿಕರನ್ನು ಮತ್ತು 30 ಪೊಲೀಸ್ ಸಿಬ್ಬಂದಿಯನ್ನು ಇದಕ್ಕಾಗಿ ಕಳುಹಿಸಿಕೊಟ್ಟಿದೆ. ರುವಾಂಡಾ 2,643, ನೇಪಾಳ 1,751 ಮತ್ತು ಬಾಂಗ್ಲಾದೇಶ 1,627 ಸೈನಿಕರನ್ನು ನಿಯೋಜಿಸಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಶಾಂತಿ ಮತ್ತು ಭದ್ರತೆಯ ಉದ್ದೇಶದಿಂದ ಶಾಂತಿಪಾಲನಾ ಪಡೆ ರಚಿಸಿದ್ದು, ನಂತರದ ದಿನಗಳಲ್ಲಿ ನಾಗರಿಕ ರಕ್ಷಣೆ ಮತ್ತು ಮಾನವ ಹಕ್ಕುಗಳ ಮೇಲ್ವಿಚಾರಣೆ ಹಾಗೂ ಮಾನವೀಯ ನೆರವು ಅಂಶಗಳನ್ನು ಸೇರ್ಪಡಿಸಿತು.
ಭಾರತೀಯ ಸೇನಾಪಡೆಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿರುವ ಮೋಹನ್ ಸುಬ್ರಮಣಿಯನ್ ಇದೀಗ 16 ಸಾವಿರ ಸೈನಿಕರ ನೇತೃತ್ವ ವಹಿಸಲಿದ್ದಾರೆ. ಇವರು ಈ ವರ್ಷದ ಫೆಬ್ರವರಿಯಲ್ಲಿ ನೇಮಕಗೊಂಡ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನ (ಡಿಎಸ್‌ಎಸ್‌ಸಿ) ಕಮಾಂಡೆಂಟ್ ಆಗಿದ್ದರು. ತಮಿಳುನಾಡಿನ ಅಮರಾವತಿ ನಗರದಲ್ಲಿರುವ ಸೈನಿಕ ಶಾಲೆ, ಖಡಕ್ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಅಧ್ಯಯನ ಮಾಡಿದ್ದಾರೆ. 2000ರಲ್ಲಿ ಸಿಯೆರಾ ಲಿಯೋನ್‌ನಲ್ಲಿ ಯುಎನ್ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಿದ್ದ ಅನುಭವಿ.
ಇದನ್ನೂ ಓದಿ: ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್ ಸಚಿವ ಸ್ಥಾನಕ್ಕೆ ರಾಜೀನಾಮೆ; ಬ್ರಿಟನ್ ಸರ್ಕಾರಕ್ಕೆ ಹಿನ್ನಡೆ