ಲಂಡನ್ : ಗುಜರಾತಿನಲ್ಲಿ 11 ವರ್ಷದ ದತ್ತು ಮಗ ಮತ್ತು ಆತನ ಸೋದರಳಿಯನನ್ನು ಕೊಲೆ ಮಾಡಿ, ನಾಲ್ಕು ವರ್ಷಗಳ ಹಿಂದೆ ಗಡಿಪಾರು ಶಿಕ್ಷೆಯಿಂದ ಪಾರಾಗಿದ್ದ ಭಾರತೀಯ ಮೂಲದ ದಂಪತಿ ಈಗ ಮತ್ತೆ ಹೊಸ ಅಪರಾಧಗಳ ಆರೋಪದ ಮೇಲೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಆರತಿ ಧೀರ್ (58) ಮತ್ತು ಅವರ ಪತಿ ಕವಲ್ ರೈಜಾದಾ (35) ವಿರುದ್ಧ ಈಗ ಯುಕೆಯ ರಾಷ್ಟ್ರೀಯ ಅಪರಾಧ ಸಂಸ್ಥೆ (ಎನ್ಸಿಎ) ಹೊಸ ಆರೋಪಗಳನ್ನು ಹೊರಿಸಿದೆ. ಆಸ್ಟ್ರೇಲಿಯಾಕ್ಕೆ ಕೊಕೇನ್ ರಫ್ತು ಮಾಡಿದ ಒಂದು ಪ್ರಕರಣ ಮತ್ತು 12 ಅಕ್ರಮ ಹಣ ವರ್ಗಾವಣೆ ಆರೋಪಗಳನ್ನು ಇವರ ವಿರುದ್ಧ ಹೊರಿಸಲಾಗಿದ್ದು, ಅಕ್ಟೋಬರ್ 30 ರಂದು ಲಂಡನ್ ನ ಸೌತ್ ವಾರ್ಕ್ ಕ್ರೌನ್ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಲಿದೆ.
"ಆರತಿ ಧೀರ್ ಮತ್ತು ಕವಲ್ಜಿತ್ ಸಿಂಗ್ ರೈಜಾದಾ ಇಬ್ಬರ ವಿರುದ್ಧ ಆಸ್ಟ್ರೇಲಿಯಾಕ್ಕೆ ಕೊಕೇನ್ ರಫ್ತು ಮಾಡಿದ ಒಂದು ಪ್ರಕರಣ ಮತ್ತು ಅಕ್ರಮ ಹಣ ವರ್ಗಾವಣೆಯ 12 ಆರೋಪಗಳನ್ನು ಹೊರಿಸಲಾಗಿದೆ" ಎಂದು ಎನ್ಸಿಎ ವಕ್ತಾರರು ತಿಳಿಸಿದ್ದಾರೆ. "ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಆದರೆ ವಿಚಾರಣೆಯು ಅಕ್ಟೋಬರ್ 30 ರಂದು ಸೌತ್ ವಾರ್ಕ್ ಕ್ರೌನ್ ನ್ಯಾಯಾಲಯದಲ್ಲಿ ಪ್ರಾರಂಭವಾಗಲಿದೆ" ಎಂದು ವಕ್ತಾರರು ಹೇಳಿದರು.
ಯುರೋಪಿಯನ್ ಕನ್ವೆನ್ಷನ್ ಆನ್ ಹ್ಯೂಮನ್ ರೈಟ್ಸ್ನ ಆರ್ಟಿಕಲ್ 3 ರ ಅಡಿಯಲ್ಲಿ ಮಾನವ ಹಕ್ಕುಗಳ ಆಧಾರದ ಮೇಲೆ ಇವರಿಬ್ಬರನ್ನು ಹಸ್ತಾಂತರಿಸುವ ಭಾರತದ ಮನವಿಯನ್ನು ಲಂಡನ್ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 2019 ರ ಜುಲೈನಲ್ಲಿ ತಿರಸ್ಕರಿಸಿತ್ತು. ನ್ಯಾಯಾಧೀಶೆ ಎಮ್ಮಾ ಅರ್ಬುತ್ನಾಟ್ ಅವರು ಧೀರ್ ಮತ್ತು ರೈಜಾದಾ ಇಬ್ಬರನ್ನೂ ಬಿಡುಗಡೆ ಮಾಡಿದ್ದರು. ಅವರನ್ನು ಗಡೀಪಾರು ಮಾಡಿದರೆ ಅವರು ಭಾರತದಲ್ಲಿ ದೊಡ್ಡ ಮಟ್ಟದ ಶಿಕ್ಷೆಗೆ ಒಳಗಾಗಬಹುದು ಎಂದು ನ್ಯಾಯಾಧೀಶೆ ಆಗ ಹೇಳಿದ್ದರು.
ಮೇಲ್ನೋಟಕ್ಕೆ ಲಭ್ಯವಿರುವ ಸಾಕ್ಷಿಗಳ ಪ್ರಕಾರ ಧೀರ್ ಮತ್ತು ರೈಜಾದಾ ಇತರರೊಂದಿಗೆ ಸೇರಿಕೊಂಡು ಅಪರಾಧ ಕೃತ್ಯ ಎಸಗಿರುವುದು ಕಂಡು ಬರುತ್ತಿದೆ ಎಂಬುದನ್ನು ನ್ಯಾಯಾಧೀಶೆ ಉಲ್ಲೇಖಿಸಿದ್ದರು. ಆದರೆ ಭಾರತದಲ್ಲಿ ಇಬ್ಬರಿಗೂ ಗಲ್ಲು ಶಿಕ್ಷೆಯಾಗುವ ಸಾಧ್ಯತೆಗಳಿರುವುದರಿಂದ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು ನ್ಯಾಯಾಧೀಶೆ ನಿರಾಕರಿಸಿದ್ದರು.
1.3 ಕೋಟಿ ಮೊತ್ತದ ಜೀವವಿಮಾ ಹಣವನ್ನು ಪಡೆದುಕೊಳ್ಳುವ ದುರುದ್ದೇಶದಿಂದ ಆರೋಪಿಗಳು ಭಾರತದಲ್ಲಿ ಗೋಪಾಲ್ ಎಂಬ ಮಗುವನ್ನು ದತ್ತು ಪಡೆದು, ಆ ಮಗುವನ್ನು ಕೊಲೆ ಮಾಡಿದ್ದಾರೆ ಎಂದು ಗುಜರಾತ್ ಪೊಲೀಸರು ಆರೋಪ ಪಟ್ಟಿ ದಾಖಲಿಸಿದ್ದಾರೆ.
ಇದನ್ನೂ ಓದಿ : ಟ್ರಂಪ್ ನನಗೆ ಪಕ್ಷಿಯ ಪಂಜರ ಕಳುಹಿಸಿದ್ದಾರೆ ಎಂದ ನಿಕ್ಕಿ ಹ್ಯಾಲೆ