ಜೆರುಸಲೇಂ : ಹಮಾಸ್ ಉಗ್ರರು ಇಂದು (ಸೋಮವಾರ) ಬಿಡುಗಡೆ ಮಾಡಲಿರುವ ಒತ್ತೆಯಾಳುಗಳ ಪಟ್ಟಿ ತಲುಪಿದೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ತಿಳಿಸಿದೆ. ರಾತ್ರಿ ಬಂದಿರುವ ಪಟ್ಟಿ ಮತ್ತು ಈಗ ಇಸ್ರೇಲ್ ತಾನು ಪರಿಶೀಲಿಸುತ್ತಿರುವ ಪಟ್ಟಿಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಒತ್ತೆಯಾಳುಗಳು ಮತ್ತು ಕಾಣೆಯಾದ ವ್ಯಕ್ತಿಗಳ ಸರ್ಕಾರಿ ಸಂಯೋಜಕರು ಹೇಳಿದ್ದಾರೆ.
ಸೋಮವಾರ ಹಮಾಸ್ ಮತ್ತು ಇಸ್ರೇಲ್ ನಡುವಿನ ಆರಂಭಿಕ ಮಾತುಕತೆ ನಂತರ ಏರ್ಪಟ್ಟ ಕದನ ವಿರಾಮದ ನಾಲ್ಕನೇ ಮತ್ತು ಅಂತಿಮ ದಿನವಾಗಿದೆ. ಭಾನುವಾರದವರೆಗೆ ಎರಡೂ ಪಕ್ಷಗಳು ಕದನ ವಿರಾಮ ವಿಸ್ತರಿಸುವ ಸಾಧ್ಯತೆ ಬಗ್ಗೆ ಚರ್ಚಿಸಿದ್ದವು. ಆದರೆ, ಅಂಥ ಯಾವುದೇ ಒಪ್ಪಂದವನ್ನು ಇನ್ನೂ ಘೋಷಿಸಲಾಗಿಲ್ಲ.
ಈ ಕದನ ವಿರಾಮದಲ್ಲಿ ಈಗಾಗಲೇ ಗಾಜಾದಿಂದ ಇಸ್ರೇಲಿ ಒತ್ತೆಯಾಳುಗಳ ಮೂರು ಗುಂಪುಗಳು ಮತ್ತು ಇಸ್ರೇಲಿ ಜೈಲುಗಳಿಂದ ಬಂಧಿತರ ಪ್ಯಾಲೆಸ್ಟೈನಿಯರ ಮೂರು ಗುಂಪುಗಳನ್ನು ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ನಾಲ್ಕು ದಿನಗಳ ಕದನ ವಿರಾಮ ವಿಸ್ತರಿಸಲು ಪ್ರಯತ್ನಿಸುವುದಾಗಿ ಹಮಾಸ್ ಹೇಳಿದೆ.
ಕತಾರ್ನಲ್ಲಿನ ಮಧ್ಯವರ್ತಿಗಳ ಮೂಲಕ ಇಸ್ರೇಲ್ ಸರ್ಕಾರಕ್ಕೆ ಕಳುಹಿಸಲಾದ ಅಧಿಕೃತ ಹೇಳಿಕೆಯಲ್ಲಿ, ಪ್ಯಾಲೆಸ್ಟೈನ್ ಉಗ್ರಗಾಮಿಗಳ ಗುಂಪು ಮಾನವೀಯ ಕದನ ವಿರಾಮ ಒಪ್ಪಂದದಲ್ಲಿ ನಿಗದಿಪಡಿಸಿದಂತೆ ಸೆರೆವಾಸದಿಂದ ಬಿಡುಗಡೆಯಾದವರ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನಗಳ ಮೂಲಕ ನಾಲ್ಕು ದಿನಗಳ ಅವಧಿ ಮುಗಿದ ನಂತರ ಕದನ ವಿರಾಮವನ್ನು ವಿಸ್ತರಿಸಲು ಬಯಸಿದೆ ಎಂದು ಹೇಳಿದೆ.
ನವೆಂಬರ್ 24 ರಂದು ಗಾಜಾದಲ್ಲಿ ಪ್ರಾರಂಭವಾದ ನಾಲ್ಕು ದಿನಗಳ ಕದನ ವಿರಾಮದ ಅವಧಿಯಲ್ಲಿ ರಫಾ ಗಡಿ ಮೂಲಕ ಪರಿಹಾರ ಸಾಮಗ್ರಿಗಳು ಮತ್ತು ಇಂಧನ ತುಂಬಿದ ಟ್ರಕ್ಗಳು ಗಾಜಾವನ್ನು ತಲುಪಿವೆ.
ಆರಂಭಿಕ ಒಪ್ಪಂದದ ಪ್ರಕಾರ ಹಮಾಸ್ ಒಟ್ಟು 50 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿತ್ತು. ಇವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಅಪ್ರಾಪ್ತರಿದ್ದಾರೆ. ತಾತ್ಕಾಲಿಕ ಕದನ ವಿರಾಮದ ಮೂರನೇ ದಿನದಂದು 14 ಇಸ್ರೇಲಿಗಳು ಮತ್ತು ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ಮೂರನೇ ಬ್ಯಾಚ್ನ ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ರೆಡ್ ಕ್ರಾಸ್ ಗೆ ಹಸ್ತಾಂತರಿಸಿದೆ.
ಇದಕ್ಕೆ ಪ್ರತಿಯಾಗಿ ಸುಮಾರು 150 ಪ್ಯಾಲೆಸ್ಟೈನ್ ಮಹಿಳೆಯರು ಮತ್ತು ಮಕ್ಕಳನ್ನು ಇಸ್ರೇಲಿ ಜೈಲುಗಳಿಂದ ಬಿಡುಗಡೆ ಮಾಡುವುದಾಗಿ ಇಸ್ರೇಲ್ ಭರವಸೆ ನೀಡಿದೆ. ಕದನ ವಿರಾಮ ಪ್ರಾರಂಭವಾದಾಗಿನಿಂದ 67 ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ 39 ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡಿದೆ ಎಂದು ದೇಶದ ಜೈಲು ಇಲಾಖೆ ತಿಳಿಸಿದೆ.
ಇದನ್ನೂ ಓದಿ : ಇಸ್ರೇಲ್ ಪರ ಗೂಢಚಾರಿಕೆ ಆರೋಪ; ವೆಸ್ಟ್ಬ್ಯಾಂಕ್ನಲ್ಲಿ ಇಬ್ಬರು ಶಂಕಿತರ ಕೊಲೆ