ಮಿನ್ನಿಯಾಪೊಲಿಸ್: ಉಕ್ರೇನ್-ರಷ್ಯಾ ಯುದ್ಧದಲ್ಲಿ ಅನಾಥವಾಗಿದ್ದ ನಾಲ್ಕು ಸಿಂಹದ ಮರಿಗಳು ಸುರಕ್ಷಿತವಾಗಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ (ಯುಎಸ್‌ಎ) ಮಿನ್ನೇಸೋಟ ಪ್ರಾಣಿಧಾಮಕ್ಕೆ ಆಗಮಿಸಿದ್ದು, ಅವುಗಳಿಗೆ ಶಾಶ್ವತ ನೆಲೆ ಒದಗಿಸುವುದಾಗಿ ಇಲ್ಲಿನ ಅಭಯಾರಣ್ಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ತಾರಸ್ ಎಂಬ ಗಂಡು ಮರಿ ಮತ್ತು ನಾಲ್ಕರಿಂದ ಐದು ತಿಂಗಳ ವಯಸ್ಸಿನ ಸ್ಟೆಫಾನಿಯಾ, ಲೆಸ್ಯಾ ಮತ್ತು ಪ್ರದ ಎಂಬ ಮೂರು ಹೆಣ್ಣು ಸಿಂಹದ ಮರಿಗಳು ಪೋಲೆಂಡ್‌ನ ಪೊಜ್ನಾನ್ ಮೃಗಾಲಯದಲ್ಲಿ ಕಳೆದ ಮೂರು ವಾರಗಳನ್ನು ಕಳೆದಿದ್ದವು. ಯುದ್ಧದಲ್ಲಿ ಪ್ರಾಣಿಗಳನ್ನು ರಕ್ಷಿಸುವ ಕೆಲಸ ನಡೆಯುತ್ತಿದ್ದು, ಬಾಂಬ್ ಸ್ಫೋಟಗಳು ಮತ್ತು ಡ್ರೋನ್ ದಾಳಿ ನಡುವೆಯೂ ಬದುಕಿದ ನಾಲ್ಕು ಮರಿಗಳನ್ನು ಅಂತಿಮವಾಗಿ ಮಂಗಳವಾರ ಇಲ್ಲಿನ ಪ್ರಾಣಿಧಾಮಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಇಂಟರ್ನ್ಯಾಷನಲ್ ಫಂಡ್ ಫಾರ್ ಅನಿಮಲ್ ವೆಲ್ಫೇರ್ ತಿಳಿಸಿದೆ.
ಇದನ್ನೂ ಓದಿ: ಶಿವಮೊಗ್ಗ: ಸಿಂಹದ ಜೊತೆ ಕಾದಾಟ ನಡೆಸಿ ಗಾಯಗೊಂಡಿದ್ದ ಸಿಂಹಿಣಿ ಸಾವು!
ಮಿನ್ನಿಯಾಪೊಲಿಸ್‌ನ ಉತ್ತರಕ್ಕೆ ಸುಮಾರು 90 ಮೈಲುಗಳಷ್ಟು (145 ಕಿಲೋಮೀಟರ್) ದೂರದಲ್ಲಿರುವ ಸ್ಯಾಂಡ್‌ಸ್ಟೋನ್‌ನಲ್ಲಿರುವ ವೈಲ್ಡ್‌ಕ್ಯಾಟ್ ಅಭಯಾರಣ್ಯದಲ್ಲಿ ಈ ಸಿಂಹದ ಮರಿಗಳಿಗೆ ಆಶ್ರಯ ನೀಡಲಾಗಿದೆ. ಪೋಲೆಂಡ್‌ನಿಂದ ಯುಎಸ್‌ಗೆ ಹಿಂತಿರುಗುತ್ತಿದ್ದ ವಿಮಾನದಲ್ಲಿ ಮರಿಗಳನ್ನು ಕರೆತರಲಾಯಿತು. ಅಭಯಾರಣ್ಯದ ಸಿಬ್ಬಂದಿ ಮರಿಗಳಿಗೆ ಸೂಕ್ತ ವಾತಾವರಣ ಕಲ್ಪಿಸಿದ್ದಾರೆ. ಪಶುವೈದ್ಯರು ಸಹ ಪ್ರಾಣಿಗಳ ಆರೋಗ್ಯ ವಿಚಾರಿಸಿದ್ದಾರೆ. ನಾಲ್ಕು ಮರಿಗಳು ಆರೋಗ್ಯವಾಗಿವೆ. ಜೊತೆಗೆ ನ್ಯೂಯಾರ್ಕ್ ಮೂಲದ ಆಂಡ್ರ್ಯೂಸಬಿನ್ ಫ್ಯಾಮಿಲಿ ಫೌಂಡೇಶನ್ ವಿಮಾನದ ಮೂಲಕ ಮರಿಗಳನ್ನು ಸಾಗಿಸುವುದಕ್ಕೆ ಭಾಗಶಃ ಹಣ ನೀಡಿದೆ.
ಇದನ್ನೂ ಓದಿ: ತಾವರೆಕೊಪ್ಪ ಹುಲಿ ಸಿಂಹಧಾಮದ ದೀರ್ಘಾಯುಷಿ ಹನುಮ ಇನ್ನಿಲ್ಲ
ಇನ್ನು ವೈಲ್ಡ್‌ಕ್ಯಾಟ್ ಅಭಯಾರಣ್ಯವು ಸುಮಾರು 130 ಸಿಂಹಗಳು, ಹುಲಿಗಳು, ಚಿರತೆಗಳು ಮತ್ತು ಇತರ ಕಾಡುಬೆಕ್ಕುಗಳು ಸೇರಿದಂತೆ ಕೆಲವು ವಿದೇಶಿ ಸಾಕುಪ್ರಾಣಿಗಳಿಗೆ ಆಶ್ರಯ ನೀಡುತ್ತಿದೆ.