ಕೇಪ್ ಕೆನವೆರಲ್(ಯುಎಸ್‌ಎ): ಈ ವರ್ಷದ ಎರಡನೇ ಹಾಗೂ ಕೊನೆಯ ಚಂದ್ರಗ್ರಹಣ ನಾಳೆ ಸಂಭವಿಸುತ್ತಿದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿದೆ. ವಿಶೇಷ ಅಂದ್ರೆ (2025) ಮುಂದಿನ ಮೂರು ವರ್ಷಗಳವರೆಗೆ ಇಂತಹ ಗ್ರಹಣ ಸಂಭವಿಸುವುದಿಲ್ಲ.
ಸಂಪೂರ್ಣ ಚಂದ್ರ ಗ್ರಹಣವು ಉತ್ತರ ಅಮೆರಿಕದಾದ್ಯಂತ ಮುಂಜಾನೆ ಗೋಚರಿಸುತ್ತದೆ. ಏಷ್ಯಾ, ಉತ್ತರ ಮತ್ತು ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ, ಉತ್ತರ ಅಟ್ಲಾಂಟಿಕ್ ಮಹಾಸಾಗರ, ಪೆಸಿಫಿಕ್ ಮಹಾಸಾಗರದ ಸಮೀಪದಲ್ಲಿ ಜನರು ತಮ್ಮ ಕಣ್ಣುಗಳಿಂದ ನೇರವಾಗಿ ಈ ಆಕಾಶ ವಿದ್ಯಮಾನವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.
ಬೆಳಗ್ಗೆ 5:16 ನಿಂದ 6:41 ವರೆಗೆ ಒಟ್ಟು ಒಂದೂವರೆ ಗಂಟೆಗಳವರೆಗೆ ಗ್ರಹಣ ಇರುತ್ತದೆ. ರಕ್ತ ಚಂದ್ರ ಎಂದು ಕರೆಯಲ್ಪಡುವ ಈ ಗ್ರಹಣವು, ಭೂಮಿಯ ಸೂರ್ಯಾಸ್ತ ಮತ್ತು ಸೂರ್ಯೋದಯಗಳ ಬೆಳಕಿನಿಂದ ಕೆಂಪು, ಕಿತ್ತಳೆ ಬಣ್ಣದಲ್ಲಿ ಕಾಣಿಸುತ್ತದೆ. ಕಳೆದ 3 ವರ್ಷದ ಹಿಂದೆ ಸಹ ಸಂಪೂರ್ಣ ಚಂದ್ರಗ್ರಹಣ ಸಂಭವಿಸಿತ್ತು.
ಖಗೋಳ ಶಾಸ್ತ್ರಜ್ಞರ ಪ್ರಕಾರ, 2022 ರ ಸೂರ್ಯಗ್ರಹಣ ಸಂಭವಿಸಿದ ಹದಿನೈದು ದಿನಗಳ ನಂತರ ನಡೆಯುತ್ತಿರುವ ಸಂಪೂರ್ಣ ಚಂದ್ರಗ್ರಹಣವು ನವೆಂಬರ್ 8 ರಂದು ದೇಶ ಮತ್ತು ವಿಶ್ವದ ಅನೇಕ ಭಾಗಗಳಲ್ಲಿ ಗೋಚರಿಸುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಂದ್ರ ಗ್ರಹಣ : ಮಂಗಳವಾರ ಚಾಮುಂಡೇಶ್ವರಿ ತಾಯಿ ದರ್ಶನವಿಲ್ಲ
ಚಂದ್ರ ಗ್ರಹಣ ಎಂದರೇನು?: ಭೂಮಿಯು ಚಂದ್ರ ಮತ್ತು ಸೂರ್ಯನ ನಡುವೆ ಬಂದಾಗ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ ಮತ್ತು ಚಂದ್ರನು ಗೋಚರಿಸುವುದಿಲ್ಲ. ಈ ಸ್ಥಿತಿಯನ್ನು ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. ಚಂದ್ರನು ಭೂಮಿಯ ಸುತ್ತ ಸುತ್ತುತ್ತಿರುವುದರಿಂದ ಭೂಮಿಯ ನೆರಳಿನಲ್ಲಿ ದೀರ್ಘಕಾಲ ಉಳಿಯುವುದಿಲ್ಲ ಮತ್ತು ಕಡಿಮೆ ಸಮಯದಲ್ಲಿ ಭೂಮಿಯ ನೆರಳಿನಿಂದ ಹೊರಬರುತ್ತದೆ. ಚಂದ್ರನು ಭೂಮಿಯ ನೆರಳಿನಿಂದ ಆವೃತವಾಗಿರುವ ಅವಧಿಯನ್ನು ಗ್ರಹಣದ ಅವಧಿ ಎಂದು ಪರಿಗಣಿಸಲಾಗುತ್ತದೆ.