ಲಾಹೋರ್(ಪಾಕಿಸ್ತಾನ): ಅಮಾಯಕರ ಹತ್ಯೆಗಳಿಗೆ ಸಂಚು ರೂಪಿಸಿ ಭಯೋತ್ಪಾದನೆ ಹುಟ್ಟುಹಾಕಿದ ಪಾಕಿಸ್ತಾನದ ಭಯೋತ್ಪಾದಕರು ಈಗ ತಾವೇ ಕಂಡಕಂಡಲ್ಲಿ ಕೊಲೆಯಾಗುತ್ತಿದ್ದಾರೆ. ಕೆಲವು ಅಪರಿಚಿತರು ಒಬ್ಬರ ಹಿಂದೊಬ್ಬರಂತೆ ಅವರನ್ನು ಕೊಂದು ಹಾಕುತ್ತಿರುವುದರಿಂದ ಅನೇಕರು ರಹಸ್ಯ ಸ್ಥಳಗಳಲ್ಲೇ ಅಡಗಿ ಕುಳಿತಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಅಕ್ರಮ್ ಖಾನ್ ಘಾಜಿಯನ್ನು ಕೆಲವು ಅಪರಿಚಿತರು ಗುಂಡಿಕ್ಕಿ ಹತ್ಯೆಗೈದಿದ್ದರು. ಕಳೆದ 20 ತಿಂಗಳಲ್ಲಿ ಹತ್ಯೆಗೀಡಾದ 19ನೇ ಭಯೋತ್ಪಾದಕ ಈತ.
2018-2020ರ ನಡುವೆ ಅಕ್ರಮ್ ಖಾನ್ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಗೆ ಅಗತ್ಯ ನೇಮಕಾತಿಗಳನ್ನು ಮಾಡುತ್ತಿದ್ದ. ಕಳೆದೆರಡು ವರ್ಷಗಳಿಂದ ಕಾಶ್ಮೀರ ಕಣಿವೆಯಲ್ಲಿ ನುಸುಳುತ್ತಿರುವ ಭಯೋತ್ಪಾದಕ ಗುಂಪುಗಳಿಗೆ ಭಾರತದ ವಿರುದ್ಧ ದ್ವೇಷದ ಪಾಠಗಳನ್ನು ಕಲಿಸುತ್ತಿದ್ದನು. ಗುರುವಾರ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬಜಾರ್ ಜಿಲ್ಲೆಯಲ್ಲಿ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಅಕ್ರಮ್ ಖಾನ್‌ನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸಲಾಗಿದೆ. ಈ ವಿಷಯ ಹೊರಬರದಂತೆ ತಡೆಯಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹೇಳಿದೆ ಎನ್ನಲಾಗ್ತಿದೆ.
ಈ ಹತ್ಯೆಯಿಂದ ಎಚ್ಚೆತ್ತ ಪಾಕಿಸ್ತಾನದ ಸಂಸ್ಥೆಗಳು ತನಿಖೆಗಿಳಿದಿವೆ. ಸ್ಥಳೀಯ ಪ್ರತಿಸ್ಪರ್ಧಿಗಳು, ಇತರ ಭಯೋತ್ಪಾದಕ ಗುಂಪುಗಳ ಪಾತ್ರ ಮತ್ತು ಲಷ್ಕರ್ ಆಂತರಿಕ ವಿಭಾಗಗಳಂತಹ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ ಲಷ್ಕರ್‌ನ ಉನ್ನತ ಕಮಾಂಡರ್‌ಗಳು ಹತ್ಯೆಯಾಗುತ್ತಿರುವುದು ಇದು ಎರಡನೇ ಬಾರಿ. ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾವಲ್‌ಕೋಟ್‌ನಲ್ಲಿರುವ ಮಸೀದಿಯ ಹೊರಗೆ ಹಿರಿಯ ಲಷ್ಕರ್ ಕಮಾಂಡರ್ ರಿಯಾಜ್ ಅಹ್ಮದ್‌ನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ನಿಯಂತ್ರಣದಲ್ಲಿ ಲಷ್ಕರ್ ಸಂಘಟನೆ ಕೆಲಸ ಮಾಡುತ್ತಿದೆ. ಈ ವಾರ ಹತ್ಯೆಗೀಡಾದ ಶಾಹಿದ್ ಖ್ವಾಜಾ ಕೂಡ ಲಷ್ಕರ್ ಭಯೋತ್ಪಾದಕನಾಗಿದ್ದ. 2018ರಲ್ಲಿ ಭಾರತದ ಸುಂಜ್ವಾನ್ ಸೇನಾ ಶಿಬಿರದ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಕೂಡಾ ಈತನೇ ಆಗಿದ್ದಾನೆ.
ಸರಣಿ ಹತ್ಯೆಯಿಂದ ಜೈಶ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಗೆ ಭಾರಿ ಪೆಟ್ಟು ಬೀಳುತ್ತಿದೆ. ಕಳೆದ ತಿಂಗಳು ಜೈಶ್ ಮುಖ್ಯಸ್ಥ ಮಸೂದ್ ಅಜರ್ನ ನಿಕಟವರ್ತಿ ದಾವೂದ್ ಮಲಿಕ್ನನ್ನು ಉತ್ತರ ವಜೀರಿಸ್ತಾನದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಹಿಜ್ಬುಲ್ ಮುಖ್ಯಸ್ಥ ಹಫೀಜ್ ಸಯೀದ್‌ನ ಆತ್ಮೀಯ ಸ್ನೇಹಿತ ಮುಫ್ತಿ ಕೈಸರ್ ಫಾರುಕಿಯನ್ನು ಕರಾಚಿಯ ಹೃದಯಭಾಗದಲ್ಲಿ ಹತ್ಯೆ ಮಾಡಲಾಗಿತ್ತು.
ಐಸಿ-814 ವಿಮಾನ ಹೈಜಾಕ್ದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೈಶ್ ಭಯೋತ್ಪಾದಕ ಮಿಸ್ತ್ರಿ ಜಹೂರ್ ಇಬ್ರಾಹಿಂ ಕೂಡ ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಸರಣಿ ಘಟನೆಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಉಸಿರಾಡಲು ಬಿಡುತ್ತಿಲ್ಲ. ಹತ್ತಾರು ಉಗ್ರರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೇ ತಿಂಗಳಲ್ಲಿ ಖಲಿಸ್ತಾನಿ ಕಮಾಂಡೋ ಫೋರ್ಸ್ ಮುಖ್ಯಸ್ಥ ಪರಂಜಿತ್ ಸಿಂಗ್ ಪನ್ವಾರ್‌ನನ್ನು ಲಾಹೋರ್‌ನಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದು ಹಾಕಿದ್ದರು. ಜೈಶ್ ಆತ್ಮಹತ್ಯಾ ದಾಳಿ ಗುಂಪಿನ ಮುಖ್ಯ ನಿರ್ವಾಹಕ ಶಾಹಿದ್ ಲತೀಫ್‌ನನ್ನು ಅಕ್ಟೋಬರ್‌ನಲ್ಲಿ ಅಪರಿಚಿತರು ಕೊಂದಿದ್ದರು. ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆ ಮೇಲೆ ಈತನದ್ದೇ ಉಗ್ರ ಸೇನೆ ದಾಳಿ ನಡೆಸಿ ರಕ್ತಪಾತ ಹರಿಸಿತ್ತು.
ಇದನ್ನೂ ಓದಿ: ಇದೇ ಮೊದಲು! ಕೊಲೆ ಅಪರಾಧಿಗೆ ನೈಟ್ರೋಜನ್ ಹೈಪೋಕ್ಸಿಯಾ ಮೂಲಕ ಮರಣದಂಡನೆ