ಮಿಲ್ವಾಕೀ(ಅಮೆರಿಕ): 2021ರ ಜನವರಿ 6 ರಂದು ಕ್ಯಾಪಿಟಲ್ ಹಿಲ್ ಮೇಲೆ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿಯಲ್ಲಿ ಮಹಿಳೆ, ಪೊಲೀಸ್ ಸಿಬ್ಬಂದಿ ಸೇರಿ ಐವರು ಮೃತಪಟ್ಟಿದ್ದರು. ಈ ದಾಳಿಯಲ್ಲಿ ತಮ್ಮ ಬೆಂಬಲಿಗರಿಗೆ ಟ್ರಂಪ್ ಪ್ರಚೋದನೆ ನೀಡಿದ್ದು, ದಾಳಿಯಲ್ಲಿ ಅವರ ಪಾತ್ರವಿರುವ ಕಾರಣದಿಂದ ಮುಂದಿನ ವರ್ಷ ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಡೊನಾಲ್ಡ್ ಟ್ರಂಪ್ ಅರ್ನಹರು ಎಂದು ಕೊಲೊರಾಡೊ ಕೋರ್ಟ್ ನಿನ್ನೆ ತೀರ್ಪು ನೀಡಿದೆ.
ಇದರ ಬೆನ್ನಲ್ಲೇ ಅಧ್ಯಕ್ಷ ಜೋ ಬೈಡನ್ ಟ್ರಂಪ್ ವಿರುದ್ಧ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಟ್ರಂಪ್ ಅವರು 2020ರ ಚುನಾವಣಾ ಸೋಲನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿರುವ ದಂಗೆಕೋರ ಎಂದು ಸ್ವಯಂ - ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. ಅಮೆರಿಕದ ಮಿಲ್ವಾಕೀಯಲ್ಲಿ ಆರ್ಥಿಕತೆಗೆ ಸಂಬಂಧಿಸಿದ ಕಾರ್ಯಕ್ರಮಕ್ಕಾಗಿ ಬಂದಿದ್ದ ಬೈಡನ್ ಈ ಹೇಳಿಕೆಯನ್ನು ನೀಡಿದರು.
ಚುನಾವಣೆಗೆ ಟ್ರಂಪ್ ಅವರನ್ನು ಅನರ್ಹಗೊಳಿಸಿರುವುದಕ್ಕೆ ಸಂವಿಧಾನದ 14 ನೇ ತಿದ್ದುಪಡಿ ಅನ್ವಯಿಸುತ್ತದೆಯೋ ಇಲ್ಲವೋ. ಆದರೆ, ನಾವು ನ್ಯಾಯಾಲಯಕ್ಕೆ ತೀರ್ಪು ತೆಗೆದುಕೊಳ್ಳಲು ಬಿಡುತ್ತೇವೆ. ಅಧ್ಯಕ್ಷ ಸ್ಥಾನಕ್ಕೆ ಅನರ್ಹಗೊಳಿಸಬೇಕೋ ಬೇಡವೋ ಎಂಬುದು ನ್ಯಾಯಾಲಯದ ಮೇಲೆ ಅವಲಂಬಿತವಾಗಿದೆ. ಆದರೆ, ಟ್ರಂಪ್ ಕ್ಯಾಪಿಟಲ್ ಹಿಲ್ ಮೇಲೆ ನಡೆದ ದಂಗೆಯನ್ನು ಖಂಡಿತವಾಗಿಯೂ ಬೆಂಬಲಿಸಿದ್ದಾರೆ, ಇದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ ಎಂದು ಏರ್ ಫೋರ್ಸ್ ಒನ್‌ನಿಂದ ಹೊರ ಬಂದ ಬಳಿಕ ಟಾರ್ಮ್ಯಾಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹೇಳಿದರು.
ಮುಂದುವರೆದು, ಅಮೆರಿಕಕ್ಕೆ ಬರುತ್ತಿರು ವಲಸಿಗರು ರಾಷ್ಟ್ರದ ರಕ್ತವನ್ನು ವಿಷಪೂರಿತಗೊಳಿಸುತ್ತಿದ್ದಾರೆ ಎಂಬ ಟ್ರಂಪ್ ಹೇಳಿಕೆಯನ್ನು ವಿರೋಧಿಸಿದ ಬೈಡನ್ 'ವಲಸೆಗಾರರು ನಮ್ಮ ದೇಶದ ರಕ್ತವನ್ನು ಕಲುಷಿತಗೊಳಿಸುತ್ತಿದ್ದಾರೆ ಎಂಬುದನ್ನು ನಾನು ನಂಬುವುದಿಲ್ಲ' ಎಂದು ವಿಸ್ಕಾನ್ಸಿನ್ ಬ್ಲಾಕ್ ಚೇಂಬರ್ ಆಫ್ ಕಾಮರ್ಸ್‌ನಲ್ಲಿ ಭಾಷಣ ಮಾಡುವ ವೇಳೆ ಹೇಳಿದ್ದಾರೆ. ನಮ್ಮ ರಾಷ್ಟ್ರದಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿದಾಗ ದೇಶ ಮತ್ತು ದೇಶದ ಆರ್ಥಿಕತೆ ಅಭಿವೃದ್ಧಿ ಹೊಂದುತ್ತದೆ ಎಂದು ಟಾಂಗ್ ನೀಡಿದ್ದಾರೆ.
ಇನ್ನು ಅಮೆರಿಕದಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯನ್ನು ಅನರ್ಹಗೊಳಿಸಲು 14 ನೇ ತಿದ್ದುಪಡಿಯ ಸೆಕ್ಷನ್ 3 ಅನ್ನು ಬಳಸಿರುವುದು ಇತಿಹಾಸದಲ್ಲಿಯೇ ಇದೇ ಮೊದಲು. ಕೊಲೊರಾಡೋ ನ್ಯಾಯಾಲಯ, ತನ್ನ 4-3 ಬಹುಮತದ ತೀರ್ಪಿನಲ್ಲಿ, 14 ನೇ ತಿದ್ದುಪಡಿಯ ಸೆಕ್ಷನ್ 3 ರ ಅಡಿಯಲ್ಲಿ ಟ್ರಂಪ್ ಅಧ್ಯಕ್ಷ ಸ್ಥಾನವನ್ನು ಹೊಂದಲು ಅನರ್ಹರಾಗಿದ್ದಾರೆ ಎಂದು ತೀರ್ಪು ನೀಡಿದೆ. ಇದಕ್ಕೆ ಅಮೆರಿಕದ ರಿಪಬ್ಲಿಕನ್ ಪಕ್ಷವು ವಿರೋಧ ವ್ಯಕ್ತಪಡಿಸಿದ್ದು, ಡೊನಾಲ್ಡ್ ಟ್ರಂಪ್ ಪರ ವಕೀಲರು ಅಮೆರಿಕ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಯೋಜಿಸಿದ್ದಾರೆ ಎಂದು ಬೈಡನ್ ಹೇಳಿದರು.
ಇದನ್ನೂ ಓದಿ: ಅಣ್ವಸ್ತ್ರ ಬಳಕೆಯ ಬೆದರಿಕೆ ಹಾಕಿದ ಉತ್ತರ ಕೊರಿಯಾ ಅಧ್ಯಕ್ಷ: ಅಮೆರಿಕ, ದಕ್ಷಿಣ ಕೊರಿಯಾಕ್ಕೆ ಎಚ್ಚರಿಕೆ ಸಂದೇಶ ರವಾನೆ