ಟೋಕಿಯೊ (ಜಪಾನ್): ಉತ್ತರ ಕೊರಿಯಾ ಹಾರಿಸಿದ ಖಂಡಾಂತರ ಕ್ಷಿಪಣಿಯೊಂದು ಟೋಕಿಯೋ ಮೇಲೆ ಹಾದು ಹೋಗಿದ್ದು, ನಾಗರಿಕರು ರಕ್ಷಣಾ ಶಿಬಿರಗಳಲ್ಲಿ ಆಶ್ರಯ ಪಡೆಯುವಂತೆ ಜಪಾನ್ ಸರ್ಕಾರ ಸೂಚಿಸಿದೆ. ಮಂಗಳವಾರ ಬೆಳಗ್ಗೆ ಜಪಾನ್‌ನ ಉತ್ತರದ ಮುಖ್ಯ ದ್ವೀಪವಾದ ಹೊಕ್ಕೈಡೊ ಮತ್ತು ದೇಶದ ಈಶಾನ್ಯ ಪ್ರಾಂತ್ಯದ ಅಮೋರಿಯಲ್ಲಿನ ನಿವಾಸಿಗಳು ತಮ್ಮ ಕಟ್ಟಡಗಳ ಒಳಗೇ ಇರುವಂತೆ ಸರ್ಕಾರ ಎಚ್ಚರಿಕೆ ನೀಡಿದೆ ಎಂದು ಸ್ಥಳೀಯ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ.
ಈ ಕುರಿತಂತೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಹಿರೊಕಾಜು ಮಾಟ್ಸುನೊ, ಈಶಾನ್ಯ ಜಪಾನ್ ಆಕಾಶದಲ್ಲಿ ದಾಟಿದ ನಂತರ ಕ್ಷಿಪಣಿಯು ಜಪಾನ್‌ನ ವಿಶೇಷ ಆರ್ಥಿಕ ವಲಯದ ಹೊರಗೆ ಪೆಸಿಫಿಕ್ ಮಹಾಸಾಗರದಲ್ಲಿ ಬೆಳಗ್ಗೆ 7:44 ರ ಸುಮಾರಿಗೆ (ಸ್ಥಳೀಯ ಕಾಲಮಾನ) ಬಿದ್ದಿದೆ ಎಂದು ತಿಳಿದುಬಂದಿದೆ.
ಉತ್ತರ ಕೊರಿಯಾ ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉತ್ತರ ಪ್ರಾಂತ್ಯದ ಜಗಂಗ್‌ನ ಮುಪ್ಯೊಂಗ್-ರಿಯಿಂದ ಪೂರ್ವಕ್ಕೆ ಹಾರಿಸಿತು ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಹೇಳಿದೆ. ವಿಮಾನ ಅಥವಾ ಹಡಗುಗಳಿಗೆ ಹಾನಿಯಾದ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿಗಳು ಬಂದಿಲ್ಲ ಎಂದು ಜಪಾನಿನ ಸರ್ಕಾರಿ ಮೂಲ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವಾರ ನಡೆದ ಅಮೆರಿಕ ಮತ್ತು ದಕ್ಷಿಣ ಕೊರಿಯಾಗಳ ಜಂಟಿ ನೌಕಾಪಡೆ ಯುದ್ಧ ಅಭ್ಯಾಸಗಳ ವಿರುದ್ಧ ಪ್ರತಿಭಟನೆ ತೋರಲು ಉತ್ತರ ಕೊರಿಯಾ ಕ್ಷಿಪಣಿಗಳನ್ನು ಹಾರಿಸಿದೆ ಎಂದು ತಿಳಿದು ಬಂದಿದೆ.