ಟೋಕಿಯೋ(ಜಪಾನ್): ಕಳೆದ ವಾರ ಜಪಾನ್‌ನ ಪಶ್ಚಿಮ ಕರಾವಳಿಯಲ್ಲಿ ಸಂಭವಿಸಿದ ಭೂಕಂಪ ಮತ್ತು ಸಣ್ಣ ಪ್ರಮಾಣದ ಸುನಾಮಿಯು ಭಾರಿ ಅನಾಹುತ ಸೃಷ್ಟಿಸಿದ್ದು, ಮೃತರ ಸಂಖ್ಯೆ 126ಕ್ಕೆ ಏರಿಕೆ ಕಂಡಿದೆ. ಇನ್ನೂ 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ನೂರಾರು ಮನೆಗಳು ಧರಾಶಾಹಿಯಾಗಿವೆ. ರಸ್ತೆಗಳು ಬಿರುಕು ಬಿಟ್ಟು ಸಂಪರ್ಕ ಕಡಿದುಕೊಂಡಿವೆ. ಇದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ವಾಜಿಮಾ ನಗರವೊಂದರಲ್ಲಿ 69 ಸಾವುಗಳು ಸಂಭವಿಸಿವೆ. ಸುಜು ಎಂಬಲ್ಲಿ 38 ಜನರು ಬಲಿಯಾಗಿದ್ದಾರೆ. 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇವರಲ್ಲಿ 27 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 200ಕ್ಕೂ ಅಧಿಕ ಜನರು ಇನ್ನೂ ಪತ್ತೆಯಾಗಿಲ್ಲ. ಕುಸಿದು ಬಿದ್ದ ಮನೆಯೊಂದರ ಕೆಳಗೆ 11 ಮಂದಿ ಸಿಲುಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ವರದಿಯಾಗಿದೆ.
ಸತತ ಮಳೆ, ಹಿಮಪಾತ ಅಡ್ಡಿ: ಭೂಕಂಪ ಉಂಟಾದ ಬಳಿಕ, ಸುನಾಮಿ ಕೆಲ ಪ್ರದೇಶಗಳಲ್ಲಿ ಅನಾಹುತ ಸೃಷ್ಟಿಸಿದೆ. ಇದೀಗ ಸತತವಾಗಿ ಬೀಳುತ್ತಿರುವ ಮಳೆ ಮತ್ತು ಹಿಮಪಾತದಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಂಪನದಿಂದ ರಸ್ತೆಗಳು ಬಾಯ್ತೆರೆದುಕೊಂಡಿವೆ. ಕೆಲ ಪ್ರದೇಶಗಳಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಬಿರಗಳಲ್ಲಿ 30 ಸಾವಿರ ಜನರು: ಹಾನಿಗೀಡಾದ ಪ್ರದೇಶಗಳ 30 ಸಾವಿರಕ್ಕೂ ಅಧಿಕ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ನೀರು, ಆಹಾರ, ಔಷಧಿಗಳನ್ನು ಪೂರೈಕೆ ಮಾಡಲಾಗುತ್ತಿದೆ. ಕರಾವಳಿ ಪ್ರದೇಶದಲ್ಲಿ ಕಡಿತವಾಗಿದ್ದ ವಿದ್ಯುತ್ ಸಂಪರ್ಕವನ್ನು ಕ್ರಮೇಣವಾಗಿ ಪುನಃಸ್ಥಾಪಿಸಲಾಗಿದೆ. ನೀರಿನ ಸರಬರಾಜು ಇನ್ನೂ ಪೂರ್ಣಗೊಂಡಿಲ್ಲ.
ಹಾನಿಗೀಡಾದ ಪ್ರದೇಶದಲ್ಲಿ ನಡೆಸಲಾದ ವೈಮಾನಿಕ ಸಮೀಕ್ಷೆಯಲ್ಲಿ 100ಕ್ಕೂ ಹೆಚ್ಚು ಭೂಕುಸಿತಗಳನ್ನು ಪತ್ತೆ ಹಚ್ಚಲಾಗಿದೆ. ನಗರಗಳನ್ನು ಸಂಪರ್ಕಿಸುವ ಕೆಲವು ಪ್ರಮುಖ ರಸ್ತೆಗಳು ಕಡಿತವಾಗಿವೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಉತ್ತರ ಕೊರಿಯಾದ ಕಿಮ್ ಕಳವಳ: ಭೂಕಂಪನ ಮತ್ತು ಸುನಾಮಿ ಸೃಷ್ಟಿಸಿರುವ ಹಾನಿಗೆ ನೆರೆಯ ರಾಷ್ಟ್ರ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತೀವ್ರ ಕಳವಳ ಮತ್ತು ಸಂತಾಪ ಸೂಚಿಸಿದ್ದಾರೆ. ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ಕಿಮ್ ಮಾತುಕತೆ ನಡೆಸಿದ್ದಾಗಿ ಕೊರಿಯಾದ ಮಾಧ್ಯಮ ವರದಿಗಳು ತಿಳಿಸಿವೆ.
1995ರಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪದ ಬಳಿಕ ಇದೇ ಮೊದಲ ಬಾರಿಗೆ ಉತ್ತರ ಕೊರಿಯಾ, ಜಪಾನ್‌ನಲ್ಲಿ ಉಂಟಾದ ಹಾನಿಗೆ ಮನ ಮಿಡಿದಿದೆ. ಈವರೆಗೂ ಅದು ಕನಿಷ್ಠ ಕಳವಳವನ್ನೂ ವ್ಯಕ್ತಪಡಿಸುತ್ತಿರಲಿಲ್ಲ. ಅಮೆರಿಕ, ಭಾರತ ಸೇರಿದಂತೆ ಹಲವು ಮಿತ್ರ ರಾಷ್ಟ್ರಗಳು ಸಹಾಯದ ಭರವಸೆ ನೀಡಿವೆ.
ಇದನ್ನೂ ಓದಿ: ಜಪಾನ್ ಭೂಕಂಪನ: 57ಕ್ಕೇರಿದ ಸಾವಿನ ಸಂಖ್ಯೆ, 200ಕ್ಕೂ ಹೆಚ್ಚು ಮನೆಗಳಿಗೆ ಹಾನಿ