ಹೈದರಾಬಾದ್: ಉಕ್ರೇನ್ ಮತ್ತು ರಷ್ಯಾ ನಡುವೆ ಒಂದು ವರ್ಷದಿಂದ ಯುದ್ಧ ಮುಂದುವರೆದಿದೆ. ಇದರ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಉಕ್ರೇನ್ ಯತ್ನಿಸಿದೆ ಎಂದು ರಷ್ಯಾ ಬುಧವಾರ ಗಂಭೀರ ಆರೋಪ ಮಾಡಿತ್ತು. ಇದು ಜಗತ್ತಿನಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದೇ ವೇಳೆ, ಪುಟಿನ್ ಅವರ ಸರ್ಕಾರಿ ನಿವಾಸ 'ಕ್ರೆಮ್ಲಿನ್' ಮೇಲಿನ ದಾಳಿಯು ಆಂತರಿಕವಾಗಿ ನಡೆಸಲಾಗಿದ್ದು, ಇದೊಂದು ಉದ್ದೇಶಪೂರ್ವಕ ದಾಳಿ ಎಂದು ಯುದ್ಧಗಳ ಅಧ್ಯಯನ ಸಂಸ್ಥೆಯೊಂದು (Institute for the Study of War) ವರದಿ ಮಾಡಿದೆ.
ಉಕ್ರೇನ್ ರಾತ್ರೋರಾತ್ರಿ ಕ್ರೆಮ್ಲಿನ್ ಮೇಲೆ ಎರಡು ಡ್ರೋನ್ ಹಾರಿಸಿ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಯೋಜಿಸಿತ್ತು ಎಂದು ರಷ್ಯಾ ಅಧಿಕಾರಿಗಳು ಹೇಳಿದ್ದರು. ಇದಕ್ಕೆ ಫಿನ್‌ಲ್ಯಾಂಡ್‌ನಲ್ಲಿ ಪ್ರತಿಕ್ರಿಯಿಸಿದ್ದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, "ನಾವು ಪುಟಿನ್ ಅಥವಾ ಮಾಸ್ಕೋ ಮೇಲೆ ದಾಳಿ ಮಾಡುವುದಿಲ್ಲ. ನಾವು ನಮ್ಮ ಭೂಪ್ರದೇಶದಲ್ಲಿ ಹೋರಾಡುತ್ತೇವೆ. ನಮ್ಮ ಹಳ್ಳಿಗಳು ಮತ್ತು ನಗರಗಳನ್ನು ರಕ್ಷಿಸುತ್ತಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ.
'ಕ್ರೆಮ್ಲಿನ್' ಮೇಲಿನ ದಾಳಿ ಕುರಿತು ಯುದ್ಧಗಳ ಅಧ್ಯಯನ ಸಂಸ್ಥೆ ವರದಿಯೊಂದನ್ನು ಮಾಡಿದ್ದು, ಮೇ 3ರ ಕ್ರೆಮ್ಲಿನ್ ದಾಳಿ (Kremlin Strike)ಯು ಆಂತರಿಕ ಮತ್ತು ಉದ್ದೇಶಪೂರ್ವಕವಾಗಿ ನಡೆಸಲಾಗಿದೆ ಎಂಬುವುದಕ್ಕೆ ಹಲವಾರು ಸೂಚಕಗಳು ಇವೆ. ಮುಂಬರುವ ದಿನಗಳಲ್ಲಿ ಬೃಹತ್ ದಾಳಿ ಸಮರ್ಥಿಸಲು ರಷ್ಯಾ ಇದನ್ನು ನೆಪವಾಗಿ ಬಳಸಿಕೊಳ್ಳಬಹುದು ಎಂಬ ಉಕ್ರೇನ್ ಸಮರ್ಥನೆಯನ್ನು ಇದು ದೃಢಪಡಿಸುತ್ತದೆ ಎಂದು ಹೇಳಿದೆ.
ವಾಯು ರಕ್ಷಣಾ ವ್ಯವಸ್ಥೆ: ಮಾಸ್ಕೋ ಸೇರಿದಂತೆ ರಷ್ಯಾದ ದೇಶೀಯ ವಾಯು ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಅಧಿಕಾರಿಗಳು ಇತ್ತೀಚೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ನಗರದ ಸುತ್ತಲೂ ವಾಯು ರಕ್ಷಣಾ ವಲಯಗಳನ್ನು ರಚಿಸಲು ಮಾಸ್ಕೋ ಬಳಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ಇರಿಸಲಾಗಿದೆ ಎಂಬುವುದರ ಮೇಲೆ ಈ ವರದಿ ಬೆಳಕು ಚೆಲ್ಲಿದೆ. ಇದಕ್ಕೆ ಸಂಬಂಧ ಪಟ್ಟ ನಕ್ಷೆಗಳನ್ನೂ ಈ ಸಂಸ್ಥೆ ಹಂಚಿಕೊಂಡಿದೆ.
ಹೀಗಾಗಿ ಕ್ರೆಮ್ಲಿನ್ ಮೇಲೆ ಹಾರಿಸಲಾಗಿದೆ ಎಂಬ ಎರಡು ಡ್ರೋನ್‌ಗಳು, ವಾಯು ರಕ್ಷಣೆಯ ಬಹು ಹಂತವನ್ನು ಭೇದಿಸಿರಬಹುದು ಮತ್ತು ಕ್ರೆಮ್ಲಿನ್‌ನ ಹೃದಯ ಭಾಗದಲ್ಲಿ ಸ್ಫೋಟಿಸಬಹುದು ಅಥವಾ ಹೊಡೆದುರುಳಿಸಿರುವುದು ಎಂಬುವುದು ಅತ್ಯಂತ ಅಸಂಭವವಾಗಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ. ಈ ಘಟನೆ ಬಗ್ಗೆ ಕ್ರೆಮ್ಲಿನ್ ತಕ್ಷಣವೇ ಸುಸಂಬದ್ಧ ಹೇಳಿಕೆ ನೀಡಿದೆ. ಈ ದಾಳಿಯಿಂದ ಆಂತರಿಕ ಮತ್ತು ಅದರ ಉದ್ದೇಶಿತ ರಾಜಕೀಯ ಪರಿಣಾಮಗಳ ಮುಜುಗರ ತಪ್ಪಿಸಲು ಈ ಹೇಳಿಕೆ ಸಿದ್ಧಪಡಿಸಲಾಗಿದೆ ಎಂದು ಸೂಚಿಸುತ್ತದೆ ಎಂದು ಸಂಸ್ಥೆಯ ವರದಿ ತಿಳಿಸಿದೆ.
ರಷ್ಯಾ ಆರೋಪ ಏನಾಗಿತ್ತು?: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡುವ ಉದ್ದೇಶದಿಂದ ಉಕ್ರೇನ್ ರಾತ್ರೋರಾತ್ರಿ ಎರಡು ಡ್ರೋನ್‌ಗಳ ಮೂಲಕ ದಾಳಿ ಮಾಡಲು ಪ್ರಯತ್ನಿಸಿದೆ ಎಂದು ರಷ್ಯಾ ಆರೋಪ ಮಾಡಿತ್ತು. ಆದರೆ, ಈ ಡ್ರೋನ್‌ಗಳನ್ನು ರಷ್ಯಾದ ಮಿಲಿಟರಿ ಮತ್ತು ಭದ್ರತಾ ಪಡೆಗಳು ನಿಲ್ಲಿಸಿದ್ದವು. ಜೊತೆಗೆ ಈ ಸಮಯದಲ್ಲಿ ಪುಟಿನ್ ಕ್ರೆಮ್ಲಿನ್ ನಿವಾಸದಲ್ಲಿ ಇರಲಿಲ್ಲ. ಅವರು ನೊವೊ-ಒಗರಿಯೋವೊ ನಿವಾಸದಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಮೇ 9ರಂದು ರಷ್ಯಾ ಆಚರಿಸುವ ವಿಜಯ ದಿನದ ಮುನ್ನ ಪುಟಿನ್ ಮೇಲೆ ಉದ್ದೇಶಪೂರ್ವಕವಾಗಿ ಮಾಡಿದ ದಾಳಿ ಪ್ರಯತ್ನ ಇದಾಗಿದೆ. ಆದರೆ, ಅಂದು ನಿಗದಿಯಂತೆ ಸೇನಾ ಪರೇಡ್ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ: ವ್ಲಾಡಿಮಿರ್ ಪುಟಿನ್ ಹತ್ಯೆಗಾಗಿ ರಾತ್ರೋರಾತ್ರಿ 2 ಡ್ರೋನ್ ಹಾರಿಸಿದ ಉಕ್ರೇನ್: ರಷ್ಯಾ ಆರೋಪ