ದುಬೈ: ಇರಾನ್ನಲ್ಲಿ ಇಸ್ಲಾಮಿಕ್ ಸ್ಕಾರ್ಫ್ (ಹಿಜಾಬ್) ಧರಿಸುವ ವಿಚಾರವಾಗಿ 22 ವರ್ಷದ ಯುವತಿ ಮಹ್ಸಾ ಅಮಿನಿ ಮೃತಪಟ್ಟು ಒಂದು ವರ್ಷ ಕಳೆದಿದೆ. ಇಡೀ ದೇಶದ ತುಂಬಾ ಹಿಜಾಬ್ ಕಿಚ್ಚು ಹಬ್ಬಿದೆ. ಇದರ ನಡುವೆ ಸಾರ್ವಜನಿಕವಾಗಿ ಹಿಜಾಬ್ ಧರಿಸಲು ನಿರಾಕರಿಸುವ ಮಹಿಳೆಯರು ಮತ್ತು ಅವರನ್ನು ಬೆಂಬಲಿಸುವವರಿಗೆ ಭಾರಿ ಶಿಕ್ಷೆ ವಿಧಿಸುವ ಹೊಸ ಮಸೂದೆಯನ್ನು ಇರಾನ್ ಸಂಸತ್ತು ಅಂಗೀಕರಿಸಿದೆ.
ಇರಾನ್ನಲ್ಲಿ ಹಿಜಾಬ್ ಎಂದು ಕರೆಯಲ್ಪಡುವ ಸ್ಕಾರ್ಫ್ ಧರಿಸುವುದು ಕಡ್ಡಾಯವಾಗಿದೆ. ಹಿಜಾಬ್ ಧರಿಸದೆ ಮಹಿಳೆಯರು ಕಾರ್ಯ ನಿರ್ವಹಿಸುವ ವ್ಯಾಪಾರ ಸ್ಥಳಗಳ ಮಾಲೀಕರಿಗೂ ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ ಹಿಜಾಬ್ ವಿರುದ್ಧ ಸಂಘಟನೆ ಮಾಡುವ ಕಾರ್ಯಕರ್ತರಿಗೂ ಶಿಕ್ಷೆಯನ್ನು ಈ ಮಸೂದೆ ವಿಸ್ತರಿಸುತ್ತದೆ. ಸಂಘಟಿತ ರೀತಿಯಲ್ಲಿ ಅಪರಾಧ ಸಂಭವಿಸಿದಲ್ಲಿ, ಈ ಕಾನೂನು ಉಲ್ಲಂಘಿಸುವವರು 10 ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
ಇದನ್ನೂ ಓದಿ: ಇರಾನ್ ಮಹಿಳೆಯ ಹಕ್ಕು ಬೆಂಬಲಿಸಿದ್ದ ಫುಟ್ಬಾಲ್ ಆಟಗಾರನಿಗೂ ಗಲ್ಲು ಶಿಕ್ಷೆ?
ಇರಾನ್‌ನ 290 ಸದಸ್ಯ ಬಲದ ಸಂಸತ್ತಿನಲ್ಲಿ 152 ಸಂಸದರ ಬೆಂಬಲದೊಂದಿಗೆ ಈ ಮಸೂದೆಗೆ ಅನುಮೋದನೆ ಸಿಕ್ಕಿದೆ. ಈ ವಿಧೇಯಕವು ಸಾಂವಿಧಾನಿಕ ಕಾವಲುಗಾರನಾಗಿ ಕಾರ್ಯನಿರ್ವಹಿಸುವ ಧಾರ್ಮಿಕ ಮುಖಂಡರನ್ನು ಒಳಗೊಂಡ ಗಾರ್ಡಿಯನ್ ಕೌನ್ಸಿಲ್‌ನಿಂದ ಅನುಮೋದನೆ ಪಡೆಯಬೇಕಿದೆ. ಮುಂದಿನ ಮೂರು ವರ್ಷ ಈ ಕಾನೂನು ಜಾರಿಯಲ್ಲಿರುತ್ತದೆ. ಇರಾನ್‌ನ ಆಡಳಿತಗಾರರು ಹಿಜಾಬ್ ಕಾನೂನನ್ನು ಇಸ್ಲಾಮಿಕ್ ಗಣರಾಜ್ಯದ ಪ್ರಮುಖ ಸ್ತಂಭವೆಂದು ಪರಿಗಣಿಸುತ್ತಾರೆ.
ದೇಶದ ಡ್ರೆಸ್ ಕೋಡ್ (ವಸ್ತ್ರ ಸಂಹಿತೆ) ಉಲ್ಲಂಘಿಸಿದ್ದಕ್ಕಾಗಿ 2022ರ ಸೆಪ್ಟೆಂಬರ್ 16ರಂದು ನೈತಿಕ ಪೊಲೀಸ್ಗಿರಿಯಿಂದ ಬಂಧನಕ್ಕೆ ಒಳಗಾಗಿದ್ದ ಮಹ್ಸಾ ಅಮಿನಿ ಕಸ್ಟಡಿಯಲ್ಲೇ ಇರುವಾಗಲೇ ಸಾವಿಗೀಡಾಗಿದ್ದರು. ಇದರ ನಂತರ ದೇಶಾದ್ಯಂತ ಆಕ್ರೋಶ ಭುಗಿಲೆದ್ದು, ದೊಡ್ಡ ಮಟ್ಟದ ಪ್ರತಿಭಟನೆಗಳಿಗೆ ಕಾರಣವಾಗಿದೆ. ಇದುವರೆಗೆ 500ಕ್ಕೂ ಹೆಚ್ಚು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. 22,000ಕ್ಕೂ ಹೆಚ್ಚು ಜನರು ಬಂಧನಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: ಇರಾನ್‌ನ 80 ನಗರಗಳಿಗೆ ಹರಡಿದ ಹಿಜಾಬ್ ವಿರೋಧಿ ಕಿಚ್ಚು: 300ಕ್ಕೂ ಹೆಚ್ಚು ಮಂದಿ ಸಾವು, 14 ಸಾವಿರ ಜನರ ಸೆರೆ
ಇದೀಗ ಮಹ್ಸಾ ಅಮಿನಿ ಸಾವನ್ನಪ್ಪಿ ಒಂದು ವರ್ಷ ಕಳೆದಿದೆ. ಮೊದಲ ವರ್ಷದ ಕರಾಳ ಆಚರಣೆ ನಡೆಸಲಾಗುತ್ತಿದೆ. ಇದರ ಭಾಗವಾಗಿ ಅನೇಕ ಮಹಿಳೆಯರು ಹಿಜಾಬ್ ಧರಿಸುವ ನಿಯಮಗಳನ್ನು ಉಲ್ಲಂಘಿಸುವುದನ್ನು ಮುಂದುವರೆಸಿದ್ದಾರೆ. ಮತ್ತೊಂದೆಡೆ, ಈ ಪ್ರತಿಭಟನೆಗಳಿಗೆ ಇರಾನ್ ಸರ್ಕಾರ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ದೂರಿದೆ. ಇದರ ಮಧ್ಯೆ ಬುಧವಾರ ಉತ್ತರ ಇರಾನ್‌ನ ಸೆಜಾಸ್ ಪಟ್ಟಣದಲ್ಲಿ ಬಂದೂಕುಧಾರಿಯೊಬ್ಬ ಧರ್ಮಗುರುವೊಬ್ಬರನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ವರದಿಯಾಗಿದೆ. ಈ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೊಲೆ ವೈಯಕ್ತಿಕ ದ್ವೇಷದಿಂದ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂಬುದಾಗಿ ವರದಿಗಳು ಹೇಳಿವೆ.
ಇದನ್ನೂ ಓದಿ: ಹಿಜಾಬ್ಗೆ ವಿರೋಧ ವ್ಯಕ್ತಪಡಿಸಿದ ಇರಾನಿನ್ ಚೆಸ್ ಆಟಗಾರ್ತಿ!