ಇರಾನ್‌ನಲ್ಲಿ ಹಿಜಾಬ್ ವಿರೋಧಿ ಆಂದೋಲನ ತೀವ್ರ ಸ್ವರೂಪ ಪಡೆಯತ್ತಿದೆ. ಮುಖ್ಯವಾಗಿ ಸರಿಯಾಗಿ ಸ್ಕಾರ್ಫ್ ಧರಿಸಿಲ್ಲ ಎಂದು ಆರೋಪಿಸಿ 22 ವರ್ಷದ ಯುವತಿ ಮಹ್ಸಾ ಅಮಿನಿ 'ನೈತಿಕತೆ ಪೊಲೀಸ್ಗಿರಿ'ಯಿಂದ ಬಂಧಿಸಲ್ಪಟ್ಟು ಸಾವಿಗೀಡಾದ ನಂತರ ಇರಾನ್‌ನಲ್ಲಿ ಭುಗಿಲೆದ್ದ ಪ್ರತಿಭಟನೆಗಳು ಕಡಿಮೆಯಾಗುವ ಲಕ್ಷಣಗಳನ್ನು ತೋರುತ್ತಿಲ್ಲ. ಈ ಪ್ರತಿಭಟನೆಯ ಕಾವು ಇರಾನ್‌ನ 80 ಇತರ ನಗರಗಳಿಗೂ ಹರಡಿದೆ.
ಕುರ್ದಿಸ್ತಾನ್ ಪ್ರಾಂತ್ಯದ ಸಾಕ್ವೆಜ್ ನಗರದಲ್ಲಿ ಬಹುಪಾಲು ಕುರ್ದಿಗಳು ವಾಸಿಸುತ್ತಾರೆ. ಸುನ್ನಿ ಇಸ್ಲಾಂವನ್ನು ಅನುಸರಿಸುತ್ತಾರೆ. ಅಲ್ಲಿಯೇ ಮಹ್ಸಾ ಅಮಿನಿಯನ್ನು ಅಂತ್ಯ ಸಂಸ್ಕಾರ ಮಾಡಲಾಗಿದೆ. ಅಮಿನಿ ಸಾವಿನ 40ನೇ ದಿನದ ನಿಮಿತ್ತ ಸಾವಿರಾರು ಜನರು ತಮ್ಮ ಸಾಂಪ್ರದಾಯಿಕ ಗೌರವ ಸಲ್ಲಿಸಲು ಸೇರಿದ್ದರು. ಆದರೆ, ಆಗ ಕೂಡ ಹಿಂಸಾತ್ಮಕ ಘಟನೆ ಸಂಭವಿಸಿದೆ. ಹೀಗಾಗಿ ಅಮಿನಿಗೆ ನಮಿಸಲು ಸೇರಿದ್ದ ಹಲವರು ಮೃತಪಟ್ಟಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಈ ಘಟನೆಗೆ ಭಯೋತ್ಪಾದಕ ಸಂಘಟನೆಯಾದ ಐಎಸ್ಐಎಸ್ ಕಾರಣ. ಯಾಕೆಂದರೆ ಸಿರಿಯಾದಲ್ಲಿ ಐಎಸ್ಐಎಸ್ ವಿರುದ್ಧವೇ ಕುರ್ದಿಗಳು ಹೋರಾಡುತ್ತಿದ್ದಾರೆ.
ಮಹಿಳೆಯರಿಗೆ ವಿಧಿಸಲಾದ ನಿಯಮಗಳ ಬಗ್ಗೆ ಅಸಮಾಧಾನ: ಸಾಕ್ವೆಜ್‌ನಲ್ಲಿ ಪ್ರತಿಭಟನಾನಿರತ ಯುವ ಜನತೆ ತಮ್ಮ ತಲೆಯ ಸ್ಕಾರ್ಫ್ಗಳನ್ನು ಹರಿದು ಸಾರ್ವಜನಿಕವಾಗಿ ಬೆಂಕಿ ಹಚ್ಚಿದ್ದಾರೆ. ದೇಶದ ನಿಯಮಗಳನ್ನು ಬಹಿರಂಗವಾಗಿ ಧಿಕ್ಕರಿಸಿದ ಮೊದಲ ಇರಾನ್‌ನ ನಗರ ಸಾಕ್ವೆಜ್ ಆಗಿದೆ. ಇಲ್ಲಿ ಪ್ರತಿಭಟನೆಗಳು ಹಿಂಸಾತ್ಮಕವಾಗಿ ಬೆಳೆದ ನಂತರ, ಅದು ನಿಯಂತ್ರಣವನ್ನೇ ಕಳೆದುಕೊಂಡಿದೆ. ಈ ದಂಗೆಯನ್ನು ನಿಯಂತ್ರಿಸಲು ಇರಾನ್‌ನ ಕೇಂದ್ರ ಸರ್ಕಾರವು ಸಾಕಷ್ಟು ಯತ್ನಿಸುತ್ತಿದೆ. ಇದರಲ್ಲಿ ನಡೆದ ಸಾವುಗಳೇ ಹೆಚ್ಚಿನ ಪ್ರತಿಭಟನೆಗೂ ಕಾರಣವಾಗುತ್ತಿದೆ.
ಪ್ರತ್ಯೇಕತಾವಾದದ ಇತಿಹಾಸ ಹೊಂದಿರುವ ಕುರ್ದಿಸ್ತಾನದ ಹೊರತಾಗಿ, ಇಫ್ಶಾಹಾನ್ ಮತ್ತು ಜಹೇದಾನ್‌ನಂತಹ ನಗರಗಳು ದೇಶದಾದ್ಯಂತ ಮಹಿಳೆಯರಿಗೆ ವಿಧಿಸಲಾದ ನಿಯಮಗಳ ಬಗ್ಗೆ ರಹಸ್ಯವಾಗಿ ಅಸಮಾಧಾನವನ್ನು ವ್ಯಕ್ತಪಡಿಸುತ್ತಿವೆ. ಇಫ್ಶಾಹಾನ್ ಸುಮಾರು 20,000 ಪರ್ಷಿಯನ್ ಯಹೂದಿಗಳಿಗೆ ನೆಲೆಯಾಗಿದೆ. ಇಶ್ಫಹಾನ್‌ನಲ್ಲಿರುವ ಮಹಿಳೆಯರು ಇರಾನ್‌ನ ಇತರ ಭಾಗಗಳ ಮಹಿಳೆಯರೊಂದಿಗೆ ಒಗ್ಗಟ್ಟಿನಿಂದ ಬೀದಿಗಿಳಿಯುತ್ತಿದ್ದಾರೆ. ಮಹ್ಸಾ ಅಮಿನಿಯ ಹತ್ಯೆ ಮತ್ತು ನೂರಾರು ಜನರ ಹತ್ಯೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸುತ್ತಿದ್ದಾರೆ.
ಇಸ್ಫಹಾನ್‌ನಲ್ಲಿ ಪ್ರಕ್ಷುಬ್ಧತೆ: ಇಫ್ಶಾಹಾನ್ ಹೆಚ್ಚಾಗಿ ಶಾಂತ ನಗರವಾಗಿದೆ. ಜೊತೆಗೆ ಇದು ವ್ಯಾಪಾರ ಮತ್ತು ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿದೆ. 13 ಸಿನಗಾಗ್‌ಗಳನ್ನು ಹೊಂದಿರುವ ನಗರವು ಯಾವುದೇ ಅಶಾಂತಿ ಅಥವಾ ವಿವಾದದ ಭಾಗವಾಗಿರಲಿಲ್ಲ. ಇರಾನ್‌ನಲ್ಲಿನ ಅಶಾಂತಿ ಮತ್ತು ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪಶ್ಚಿಮ ಮತ್ತು ಝಿಯೋನಿಸ್ಟ್‌ಗಳನ್ನು ದೂರಿರುವ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಇತ್ತೀಚೆಗೆ ನೀಡಿದ ಹೇಳಿಕೆಗಳು ಇಸ್ಫಹಾನ್‌ನಲ್ಲಿ ಪ್ರಕ್ಷುಬ್ಧತೆಗೆ ಮತ್ತಷ್ಟು ಕಾರಣವಾಗಿದೆ.
ಆದಾಗ್ಯೂ, ಅಯತೊಲ್ಲಾ ಅಲಿ ಖಮೇನಿ ಪರ್ಷಿಯನ್ ಯಹೂದಿಗಳ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಲಿಲ್ಲ. ಅಲ್ಲದೇ, ಸುನ್ನಿಗಳು ಅಥವಾ ದೇಶದಲ್ಲಿ ಇತರ ಅಲ್ಪಸಂಖ್ಯಾತರು ಪ್ರಾಬಲ್ಯ ಹೊಂದಿರುವ ಪ್ರದೇಶಗಳ ಬಗ್ಗೆ ಯಾವುದೇ ಸ್ಪಷ್ಟವಾದ ಹೇಳಿಕೆ ನೀಡಿಲ್ಲ. ಆದರೆ, ಈ ದಂಗೆಗೆ ಅಮೆರಿಕವನ್ನು ಗುರಿಯಾಗಿಸಿದ್ದಾರೆ. ಕುರ್ದ್‌ಗಳು ಅಮೆರಿಕದಿಂದ ಮಿಲಿಟರಿ ನೆರವು ಪಡೆಯುವುದರಿಂದ ಇರಾನ್ ಕಾಳಜಿ ವಹಿಸಬೇಕಾಗಿದೆ.
ಅನೇಕ ನಗರಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದರೂ, ಸರ್ಕಾರಗಳು ಇಶ್ಫಹಾನ್, ಜಹೇದನ್ ಮತ್ತು ಸಾಕ್ವೆಜ್ ಮೇಲೆ ಕೇಂದ್ರೀಕರಿಸಿವೆ. ಈ ನಗರಗಳಲ್ಲಿ ಸಾವು-ನೋವುಗಳ ಸಂಖ್ಯೆಯೂ ಹೆಚ್ಚಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಜಹೇದನ್‌ನಂತಹ ಸ್ಥಳಗಳಲ್ಲಿ ತಾರತಮ್ಯ ನೀತಿ ಬಗ್ಗೆ ವರದಿ ಮಾಡಿವೆ. ಅಲ್ಲಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಇರಾನ್ ಹತ್ಯಾಕಾಂಡದಂತಹ ದುಷ್ಕೃತ್ಯಗಳನ್ನು ಮಾಡಿದೆ ಎಂದು ಆರೋಪಿಸಲಾಗಿದೆ.
300ಕ್ಕೂ ಹೆಚ್ಚು ನಾಗರಿಕರ ಸಾವು: ಸುನ್ನಿ ಮುಸ್ಲಿಮರನ್ನು ಹೊಂದಿರುವ ಕೆಲವೇ ಇರಾನ್‌ನ ನಗರಗಳಲ್ಲಿ ಜಹೇದನ್ ಕೂಡ ಒಂದು. ಸುನ್ನಿ ಮಹಿಳೆಯರ ಧ್ವನಿಯನ್ನು ದಮನಗೊಳಿಸಲು ಇರಾನ್ ಸರ್ಕಾರವು ತನ್ನ ಶಕ್ತಿವನ್ನು ಬಳಸುತ್ತಿದೆ. ಜಹೇದನ್ ನಗರವು ಸಿಸ್ತಾನ್ ಮತ್ತು ಬಲುಚೆಸ್ತಾನ್ ಪ್ರಾಂತ್ಯದ ರಾಜಧಾನಿಯಾಗಿದೆ ಮತ್ತು ಪ್ರತಿಭಟನೆಗಳು ಭುಗಿಲೆದ್ದ ನಂತರ ಅತಿ ಹೆಚ್ಚು ಸಾವಿನ ಸಂಖ್ಯೆಯನ್ನು ಹೊಂದಿದೆ. ಸದ್ಯ ಮಾಧ್ಯಮ ವರದಿಗಳ ಪ್ರಕಾರ 300ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ರಾಷ್ಟ್ರದಾದ್ಯಂತ ಸುಮಾರು 14 ಸಾವಿರ ಜನರನ್ನು ಬಂಧಿಸಲಾಗಿದೆ.
ಸೆಪ್ಟೆಂಬರ್‌ನಲ್ಲಿ ಮಹ್ಸಾ ಅಮಿನಿ ಸಾವಿನ ನಂತರದಿಂದಲೂ ಸರ್ಕಾರ ತೀವ್ರವಾಗಿ ಚಿಂತೆಗೀಡಾಗಿದೆ. ಪ್ರತಿಭಟನಾನಿರತ ಯುವ ಜನತೆಯ ಗಮನವನ್ನು ಬೇರೆಡೆಗೆ ತಿರುಗಿಸಲು ಹಲವು ತಂತ್ರಗಳನ್ನು ಹೂಡಿದರೂ ಫಲ ನೀಡಲಿಲ್ಲ. ಸರ್ಕಾರವು ಬಳಸಿದ ಎಲ್ಲ ತಂತ್ರಗಳು ವಿಫಲವಾಗಿವೆ.
ಇದರ ನಡುವೆ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ್ದ ಇರಾನ್ ವಾಟರ್ ಪೋಲೋ ಅಥ್ಲೀಟ್‌ಗಳು ರಾಷ್ಟ್ರಗೀತೆ ಹಾಡಲು ನಿರಾಕರಿಸಿದ್ದರು. ಇದು ಉದಾರವಾದಿಗಳು ಮತ್ತು ಇಸ್ಲಾಮಿಕ್ ಸಂಪ್ರದಾಯವಾದಿಗಳ ನಡುವೆ ದೊಡ್ಡ ವಿಭಜನೆಗೆ ಕಾರಣವಾಗಿದೆ. ಇರಾನಿನ ಉದಾರವಾದಿಗಳು ಈಗ ಜಹೆಯಂತಹ ನಗರಗಳಲ್ಲಿ ದಿಗ್ಭ್ರಮೆಗೊಂಡ ಅಲ್ಪಸಂಖ್ಯಾತರೊಂದಿಗೆ ಕೈಜೋಡಿಸುತ್ತಿದ್ದಾರೆ.
ಇದನ್ನೂ ಓದಿ: ವೇಗವಾಗಿ ಬೆಳೆದ ಜಗತ್ತಿನ ಜನಸಂಖ್ಯೆ: ಎಂಟು ನೂರು ಕೋಟಿಯತ್ತ ಮಾನವರ ಸಂಖ್ಯೆ!