ಸಿಂಗಾಪುರ: ಸಿಂಗಾಪುರದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಭಾರತೀಯ ಮೂಲದ ಹಿರಿಯ ಸಚಿವ ಥರ್ಮನ್ ಷಣ್ಮುಗರತ್ನಂ ಅವರು ತಮ್ಮ ಇಂಗಿತವನ್ನು ಗುರುವಾರ ಪ್ರಕಟಿಸಿದ್ದಾರೆ. 22 ವರ್ಷಗಳ ನಂತರ ಸಕ್ರಿಯ ರಾಜಕೀಯದಿಂದ ದೂರ ಸರಿದು ಈ ವರ್ಷ ಅಧ್ಯಕೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅವರು ಹೇಳಿದ್ದಾರೆ.
66 ವರ್ಷದ ಥರ್ಮನ್, 1960ರಿಂದ ಸಿಂಗಾಪುರದ ಆಡಳಿತಾರೂಢ ಪೀಪಲ್ಸ್ ಆ್ಯಕ್ಷನ್ ಪಾರ್ಟಿ (ಪಿಎಪಿ)ಯ ನಾಯಕರಾಗಿದ್ದಾರೆ. ಇದೀಗ ರಾಜಕೀಯದಿಂದ ನಿವೃತ್ತಿ ಮತ್ತು ಸರ್ಕಾರದ ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಲು ಅವರು ತೀರ್ಮಾನಿಸಿದ್ದಾರೆ. ಇದೇ ಸೆಪ್ಟೆಂಬರ್ 13ರೊಳಗೆ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ನಿರ್ಧಾರವನ್ನು ಪ್ರಧಾನಿ ಲೀ ಸಿಯೆನ್ ಲೂಂಗ್ ಅವರಿಗೆ ತಿಳಿಸಿದರು.
ಥರ್ಮನ್ ಮೊದಲ ಬಾರಿಗೆ 2001ರಲ್ಲಿ ಜುರಾಂಗ್ ಗ್ರೂಪ್ ಪ್ರಾತಿನಿಧ್ಯ ಕ್ಷೇತ್ರದ (ಜುರಾಂಗ್ ಜಿಆರ್‌ಸಿ) ಸಂಸತ್ ಸದಸ್ಯರಾಗಿ ಚುನಾಯಿತರಾಗಿದ್ದರು. ಈ ಕ್ಷೇತ್ರವು ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಮತ್ತು ಪ್ರಧಾನವಾಗಿ ಚೀನಾ ಮೂಲದ ಜನಸಂಖ್ಯೆಯ ಸದಸ್ಯರ ನೇತೃತ್ವದ ಗುಂಪಿಗೆ ಸೇರಲು ಅನುವು ಮಾಡಿಕೊಡುತ್ತದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಪ್ರಧಾನಿಗೆ ಪತ್ರ ಬರೆದು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಸಿಂಗಾಪುರದ ಹಣಕಾಸು ಪ್ರಾಧಿಕಾರದ (ಎಂಎಎಸ್) ಅಧ್ಯಕ್ಷ ಸ್ಥಾನ, ಸಿಂಗಾಪುರ್ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ (ಜಿಐಸಿ) ಉಪ ಅಧ್ಯಕ್ಷ ಸ್ಥಾನ, ಆರ್ಥಿಕ ಅಭಿವೃದ್ಧಿ ಮಂಡಳಿಯ ಅಂತಾರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷರು ಮತ್ತು ತಮ್ಮ ಸಚಿವ ಸ್ಥಾನದಲ್ಲಿ ನಿರ್ವಹಿಸುತ್ತಿರುವ ಇತರ ಜವಾಬ್ದಾರಿಗಳಿಂದ ಕೆಳಗಿಳಿಯಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಅಲ್ಲದೇ, ಇತ್ತೀಚಿನ ತಿಂಗಳುಗಳಲ್ಲಿ ತಾನು ಅಧ್ಯಕ್ಷೀಯ ಚುನಾವಣೆಗೆ ನಿಲ್ಲುವುದನ್ನು ನೋಡಲು ಬಯಸುವ ಸಿಂಗಾಪುರಿಗರ ಮಾನವಿಗಳನ್ನು ಸ್ವೀಕರಿಸಿದ್ದೇನೆ. ಇದೇ ವೇಳೆ, ಇದು ಕಠಿಣ ನಿರ್ಧಾರವಾಗಿದೆ. ಮುಂದಿನ ವರ್ಷಗಳಲ್ಲಿ ನಾನು ದೇಶಕ್ಕೆ ಹೇಗೆ ಅತ್ಯುತ್ತಮವಾಗಿ ಸೇವೆ ಸಲ್ಲಿಸಬಹುದು ಎಂಬುದರ ಕುರಿತೂ ಎಚ್ಚರಿಕೆಯಿಂದ ಯೋಚಿಸುತ್ತಿದ್ದೇನೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮತ್ತೊಂದೆಡೆ, ಥರ್ಮನ್ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಪ್ರಧಾನಿ ಲೀ ಸಹ ಪತ್ರ ಬರೆದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ನಿರ್ಧಾರವನ್ನು ತಾವು ಅರ್ಥಮಾಡಿಕೊಂಡಿದ್ದೇವೆ. ಇದು ನೀವು ಇಷ್ಟು ವರ್ಷಗಳಲ್ಲಿ ತೋರಿದ ಸಾರ್ವಜನಿಕ ಸೇವೆಯ ಮನೋಭಾವ ಮತ್ತು ಕರ್ತವ್ಯ ಪ್ರಜ್ಞೆಗೆ ಅನುಗುಣವಾಗಿದೆ ಎಂದು ಥರ್ಮನ್ ನಿರ್ಧಾರವನ್ನು ಪ್ರಶಂಸಿದ್ದಾರೆ.
ಥರ್ಮನ್ ಹಿನ್ನೆಲೆ: ಅರ್ಥಶಾಸ್ತ್ರ ಪದವೀಧರರಾದ ಥರ್ಮನ್, ತಮ್ಮ ಬಹುಪಾಲು ವೃತ್ತಿಜೀವನವನ್ನು ಫ್ಯಾಕ್ಟೋ ಸೆಂಟ್ರಲ್ ಬ್ಯಾಂಕ್, ಸಿಂಗಾಪುರದ ಹಣಕಾಸು ಪ್ರಾಧಿಕಾರದಲ್ಲಿ ಕಳೆದಿದ್ದಾರೆ. 2011ರಿಂದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಉಪಪ್ರಧಾನಿ, ಹಣಕಾಸು ಸಚಿವ ಮತ್ತು ಶಿಕ್ಷಣ ಸಚಿವರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲ, ಸಾಮಾಜಿಕ ನೀತಿಗಳ ಸಮನ್ವಯ ಸಚಿವರಾಗಿದ್ದರು. ಆರ್ಥಿಕ ನೀತಿಗಳ ಬಗ್ಗೆ ಪ್ರಧಾನಿಗೆ ಸಲಹೆಗಳನ್ನೂ ನೀಡುತ್ತಿದ್ದರು. ಜಾಗತಿಕ ಮಟ್ಟದಲ್ಲಿ ಥರ್ಮನ್, ಜಾಗತಿಕ ಹಣಕಾಸು ಆಡಳಿತದ ಜಿ20 ಎಮಿನೆಂಟ್ ಪರ್ಸನ್ಸ್ ಗ್ರೂಪ್‌ನ ಅಧ್ಯಕ್ಷರಾಗಿದ್ದರು. ಅಂತಾರಾಷ್ಟ್ರೀಯ ಹಣಕಾಸು ಮತ್ತು ಹಣಕಾಸು ಸಮಿತಿಯ ಮೊದಲ ಏಷ್ಯಾದ ಅಧ್ಯಕ್ಷರೂ ಆಗಿದ್ದರು.
ಹಾಲಿ ಅಧ್ಯಕ್ಷೆ ಹಲೀಮಾ ಯಾಕೋಬ್ ಅವರು ಮೇ 29ರಂದು ಎರಡನೇ ಅವಧಿಯನ್ನು ಬಯಸುವುದಿಲ್ಲ ಎಂದು ಘೋಷಿಸಿದ್ದರು. ಇದರಿಂದ ಸಿಂಗಾಪುರವು 2011ರ ನಂತರ ಮೊದಲ ಅಧ್ಯಕ್ಷೀಯ ಚುನಾವಣೆಗೆ ಸಜ್ಜಾಗಿದೆ. 68 ವರ್ಷದ ಹಲೀಮಾ ದೇಶದ ಎಂಟನೇ ಅಧ್ಯಕ್ಷರು ಮತ್ತು ಮೊದಲ ಮಹಿಳಾ ಅಧ್ಯಕ್ಷರಾಗಿದ್ದಾರೆ. ಆರು ವರ್ಷಗಳ ಅವಧಿಯು ಸೆಪ್ಟೆಂಬರ್ 13 ರಂದು ಕೊನೆಗೊಳ್ಳುತ್ತದೆ. 2017ರ ಅಧ್ಯಕ್ಷೀಯ ಚುನಾವಣೆಯು ಮಲಯ ಸಮುದಾಯದ ಸದಸ್ಯರಿಗೆ ಮೀಸಲಾಗಿತ್ತು. ಬೇರೆ ಅಭ್ಯರ್ಥಿಗಳು ಕಣದಲ್ಲಿ ಇದರ ಕಾರಣ ಹಲೀಮಾ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ಇದನ್ನೂ ಓದಿ: ಇಟಲಿ ಸಂಸತ್ತಿನಲ್ಲಿ ಕುಳಿತು ಮಗುವಿಗೆ ಎದೆ ಹಾಲುಣಿಸಿದ ಸಂಸದೆ: ಮಹತ್ವದ ಸಂದೇಶ ರವಾನೆ