ವಾಷಿಂಗ್ಟನ್: ಭಾರತೀಯ ಅಮೆರಿಕನ್ ಸಂಸ್ಥೆಗಳು ಅಮೆರಿಕದಲ್ಲಿರುವ ಬಡ ಮತ್ತು ನಿರ್ಗತಿಕ ಸಮುದಾಯಗಳಿಗೆ ಅರ್ಧ ಮಿಲಿಯನ್ ಪೌಂಡ್‌ಗಳಿಗಿಂತಲೂ ಅಧಿಕ ಆಹಾರವನ್ನು ದಾನ ಮಾಡಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಮೆರಿಕಾದಾದ್ಯಂತ 'ಧಾರ್ಮಿಕ' ಸಮುದಾಯಗಳು ಆಯೋಜಿಸಿದ 'ಸೇವಾ ದೀಪಾವಳಿ' ಎಂಬ ವಾರ್ಷಿಕ ಕಾರ್ಯಕ್ರಮದ ಮೂಲಕ ಈ ವರ್ಷ ಅಮೆರಿಕದಲ್ಲಿ 6,30,000 ಪೌಂಡ್‌ಗಳಿಗಿಂತ ಹೆಚ್ಚು ಆಹಾರವನ್ನು ದಾನ ಮಾಡಲಾಗಿದೆ. ಫುಡ್ ಪ್ಯಾಂಟ್ರಿಗಳು, ನಿರಾಶ್ರಿತ ಆಶ್ರಯತಾಣಗಳು, ಪೂಜಾ ಮನೆಗಳು ಮತ್ತು ಶಾಲೆಗಳು ಸೇರಿದಂತೆ 32 ರಾಜ್ಯಗಳ 200 ಕ್ಕೂ ಹೆಚ್ಚು ಸಂಸ್ಥೆಗಳು ಇದರ ಪ್ರಯೋಜನ ಪಡೆದುಕೊಂಡಿವೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.
ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರುವ ಸೇವಾ ದೀಪಾವಳಿ ರಾಷ್ಟ್ರೀಯ ಸಂಯೋಜಕ ಅನಿಲ್ ಕೊಠಾರಿ, ಸೇವಾ ದೀಪಾವಳಿಯು ಸಾರ್ವತ್ರಿಕ ಒಳಿತಿಗಾಗಿ ಶ್ರಮಿಸುತ್ತಿದೆ. ದೀಪಾವಳಿಯ ಪ್ರಬುದ್ಧ ಚೈತನ್ಯವು ನಿರ್ಗತಿಕರ ಜೀವನದಲ್ಲಿ ಬೆಳಕನ್ನು ಮೂಡಿಸಲಿ ಎಂಬುದು ನಮ್ಮ ಆಶಯ. ದೇಶಾದ್ಯಂತ ನಮ್ಮ ಈ ಯೋಜನೆಗೆ ಸಹಕಾರ ನೀಡಿದ ಫಲಾನುಭವಿ ಪಾಲುದಾರರು, ಸಮುದಾಯಗಳು ಮತ್ತು ವ್ಯಕ್ತಿಗಳಿಗೆ ಧನ್ಯವಾದಗಳು ಎಂದಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ 400 ಆಮ್ಲಜನಕ ಸಾಂದ್ರಕ ಕಳುಹಿಸುತ್ತಿರುವ ಅನಿವಾಸಿ ಭಾರತೀಯರು.. 5 ಮಿಲಿಯನ್ ಡಾಲರ್ ಹಣ ಸಂಗ್ರಹ..
ಪ್ಲಾನೋ ಟೆಕ್ಸಾಸ್ ಪೊಲೀಸ್ ಇಲಾಖೆಯು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಸೇವಾ ದೀಪಾವಳಿಯ ಕಾರ್ಯವನ್ನು ಶ್ಲಾಘಿಸಿದೆ. 2018 ರಲ್ಲಿ ಪ್ರಾರಂಭವಾದಾಗಿನಿಂದ ಸೇವಾ ದೀಪಾವಳಿ ಯೋಜನೆಯು ರಾಷ್ಟ್ರವ್ಯಾಪಿ ಯುಎಸ್ ನಲ್ಲಿ ಸುಮಾರು 1.5 ಮಿಲಿಯನ್ ಪೌಂಡ್‌ಗಳ ಆಹಾರವನ್ನು ದಾನ ಮಾಡಿದೆ.